ಹೊಸದಿಲ್ಲಿ : ಮಹತ್ತರ ಸೀಮೋಲ್ಲಂಘನೆಯ ಪ್ರಕರಣದಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳು ಅಲ್ ಕಾಯಿದಾ ನಂಟು ಹೊಂದಿರುವ ಉಗ್ರನೋರ್ವನನ್ನು ದಿಲ್ಲಿಯಲ್ಲಿ ಬಂಧಿಸಿದ್ದಾರೆ.
ಸೌದಿ ಅರೇಬಿಯದ ಹೊರಗೆ, ಭಾರತೀಯ ಉಪ ಖಂಡದಲ್ಲಿ, ತಲೆಮರೆಸಿಕೊಂಡಿದ್ದ ಶಂಕಿತ ಅಲ್ ಕಾಯಿದಾ ಉಗ್ರನನ್ನು ಸೈಯದ್ ಮೊಹಮ್ಮದ್ ಜೀಶನ್ ಅಲಿ ಎಂದು ಗುರುತಿಸಲಾಗಿದೆ. ಈತ ದಿಲ್ಲಿ ಪೊಲೀಸರ ವಿಶೇಷ ದಳದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ 2016ರ ಜೂನ್‌ನಿಂದಲೂ ಇದ್ದ ಎಂದು ತಿಳಿದುಬಂದಿದೆ.
ಅಲಿಯನ್ನು ಸೌದಿ ಅರೇಬಿಯದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
ಎಕ್ಯೂಐಎಸ್ ಆರೋಪಿಗಳ ವಿರುದ್ಧ ಸಲ್ಲಿಸಲಾಗಿದ್ದ ಚಾರ್ಜ್‌ಶೀಟ್‌ನಲ್ಲೂ ಜೀಶನ್ ಅಲಿಯ ಹೆಸರನ್ನು ನಮೂದಿಸಲಾಗಿತ್ತು.
ಜೀಶನ್ ಅಲಿ ಮೂಲತಃ ಜಮ್‌ಶೇದ್‌ಪುರದವ. ಈತ ಸೌದಿ ಅರೇಬಿಯದಂದ ಅಲ್ ಕಾಯಿದಾ ಪರವಾಗಿ ಕಾರ್ಯಾಚರಿಸುತ್ತಿದ್ದ. ಈತ 2007ರಲ್ಲಿ ಕಫೀಲ್ ಅಹ್ಮದ್ ನ ಸೋದರ ಸಂಬಂಧಿ ಸಬೀಲ್ ಅಹ್ಮದ್‌ನ ಸಹೋದರಿಯನ್ನು ಮದುವೆಯಾಗಿದ್ದ ಎನ್ನಲಾಗಿದೆ. ಸಬೀಲ್ ಅಹ್ಮದ್ 2007ರ ಗ್ಲಾಸ್‌ಗೊ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ.
ಜೀಶನ್ ಅಲಿಯ ಸಹೋದರ ಸೈಯದ್ ಮೊಹಮ್ಮದ್ ಆರ್ಶಿಯಾನ್ ಕೂಡ ಜಾಗತಿಕ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ.