ಬೆಂಗಳೂರು: ಕೊನೆಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಂಡ್ಯದಲ್ಲಿ ಬಿಜೆಪಿಗೆ ಬಲ ತುಂಬುವ ಕೆಲಸ ಮಾಡುತ್ತೇನೆ ಹಾಗೂ ಬಿಜೆಪಿ ಸೇರಿರುವುದು ಉತ್ತಮ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಚುನಾವಣ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್ವಾಲ್, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಮೊದಲಾದವರ ಸಮ್ಮುಖದಲ್ಲಿ ಪಕ್ಷದ ಕಚೇರಿಯಲ್ಲಿ ಸುಮಲತಾ ಬಿಜೆಪಿಗೆ ಸೇರ್ಪಡೆಗೊಂಡರು.
ಐದು ವರ್ಷಗಳ ಹಿಂದಿನ ಐತಿಹಾಸಿಕ ಗೆಲುವನ್ನು ಮರೆಯುವಂತಿಲ್ಲ. ಬಿಜೆಪಿ ಬಾಹ್ಯ ಬೆಂಬಲ ನೀಡಿ ಸಾಕಷ್ಟು ಶಕ್ತಿ ತುಂಬಿತ್ತು. ಪ್ರಧಾನಿ ಮೋದಿಯವರು 5 ವರ್ಷಗಳ ಹಿಂದೆ ಮೈಸೂರಿಗೆ ಬಂದಾಗ ಪಕ್ಷೇತರ ಅಭ್ಯರ್ಥಿಯಾಗಿದ್ದ ನನ್ನ ಪರವಾಗಿ ಮತ ಯಾಚಿಸಿ ನೀಡಿದ ಸಹಕಾರ ಮರೆಯಲಾಗದು ಎಂದು ಸುಮಲತಾ ಹೇಳಿದರು.
ಅಂಬರೀಷ್ 25 ವರ್ಷ ಕಾಂಗ್ರೆಸ್‌ನಲ್ಲಿದ್ದರು. ಆ ದೃಷ್ಟಿಕೋನದಿಂದ ನಾನು ದೂರದಿಂದ ಎಲ್ಲವನ್ನೂ ನೋಡಿದ್ದೇನೆ. ನನ್ನ ಸ್ಫೂರ್ತಿ ಮೋದಿ. ಅವರ ನಾಯಕತ್ವ ಪರಿಕಲ್ಪನೆ, ಕನಸುಗಳು ನನಗೆ ಸ್ಫೂರ್ತಿ. ಸಂಸತ್ತಿನಲ್ಲಿ ಅವರು ಆಡಿರುವ ಮಾತುಗಳನ್ನೆಲ್ಲ ಕೇಳಿದ್ದು ಪ್ರತಿ ಬಾರಿಯೂ ಹೊಸ ಸ್ಫೂರ್ತಿ, ತಿಳಿವಳಿಕೆ ಸಿಕ್ಕಿದೆ. ಹಾಗಾಗಿ ಬಿಜೆಪಿ ಸೇರುವುದೇ ನನಗೆ ಉತ್ತಮ ಆಯ್ಕೆ ಎನಿಸಿದೆ. ಬಿಜೆಪಿಯಲ್ಲಿ ಆ ಪಾತ್ರ, ಈ ಪಾತ್ರ ಎಂದೇನಿಲ್ಲ. ಮಂಡ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಗೆಲ್ಲುವ ವಿಶ್ವಾಸವಿದೆ. ಅಭಿಷೇಕ್ ಸದ್ಯಕ್ಕೆ ರಾಜಕಾರಣಕ್ಕೆ ಬರುವುದಿಲ್ಲ ಎಂದರು.
ನುಡಿದಂತೆ ನಡೆಯುವ ನಾಯಕತ್ವ ಮೋದಿಯವರದ್ದು. ನನ್ನ ಭವಿಷ್ಯಕ್ಕಿಂತಲೂ ಜಿಲ್ಲೆ, ರಾಜ್ಯ, ದೇಶ ಮುಖ್ಯ. ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ಪಡೆದ ದಿನವಾಗಿದ್ದು, ಬಿಜೆಪಿ ಸೇರಿರುವುದಕ್ಕೆ ಅತ್ಯಂತ ಹೆಮ್ಮೆ, ಸಂತೋಷವಾಗಿದೆ ಎಂದರು.
ಮೋದಿ ಪರ ಅಲೆ
ಬಿ.ವೈ.ವಿಜಯೇಂದ್ರ ಮಾತನಾಡಿ, ದೇಶದಲ್ಲಿ ಪ್ರಧಾನಿ ಮೋದಿ ಪರ ವಾತಾ ವರಣವಿದ್ದು, 400ಕ್ಕೂ ಹೆಚ್ಚು ಸ್ಥಾನ ಗೆದ್ದು ಕೇಂದ್ರದಲ್ಲಿ ಮತ್ತೆ ಮೋದಿಯವರ ಸರಕಾರ ಬರಲಿ ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ದೇಶದಲ್ಲಿ ಸುರಕ್ಷೆ, ಅಭಿವೃದ್ಧಿ ದೃಷ್ಟಿಯಿಂದ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂಬ ಆಶಯದಿಂದ ಸುಮಲತಾ ಅವರು ಬಿಜೆಪಿ ಸೇರಿದ್ದಾರೆ ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಡಿಸಿಎಂ ಡಾ| ಸಿ.ಎನ್.ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಮುನಿರತ್ನ, ನಾರಾಯಣಗೌಡ, ಶಾಸಕ ಜಿ.ಜನಾರ್ದನ ರೆಡ್ಡಿ ಉಪಸ್ಥಿತರಿದ್ದರು.