ಹೊಸದಿಲ್ಲಿ: ಉಗ್ರರಿಗೆ ಹಾಗೂ ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಹಣ ಒದಗಿಸಿಕೊಡುತ್ತಿದ್ದ ಕೆಲವು ವ್ಯಕ್ತಿಗಳು, ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದೆ ತಮ್ಮ ತಪ್ಪೊಪ್ಪಿಕೊಂಡಿದ್ದು, ಈ ಪ್ರಕರಣದಲ್ಲಿ ತಾನು ದೋಷಾರೋಪ ಪಟ್ಟಿ ಸಲ್ಲಿಸಿರುವ 12 ಮಂದಿಗೆ ಖಂಡಿತವಾಗಿಯೂ ಶಿಕ್ಷೆಯಾಗಿ, ಆ ಮೂಲಕ ಕಣಿವೆ ರಾಜ್ಯದಲ್ಲಿ ಶಾಂತಿ ಕದಡುವ ಶಕ್ತಿಗಳನ್ನು ಹೆಡೆಮುರಿ ಕಟ್ಟಿದಂತಾಗುತ್ತದೆ ಎಂದು ಎನ್‌ಐಎ ನಿರೀಕ್ಷಿಸಿದೆ.
ಈ ತಪ್ಪೊಪ್ಪಿಗೆ ಹೇಳಿಕೆಗಳ ಆಧಾರದಲ್ಲೇ ಎನ್‌ಐಎ, ಮಾ. 19ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಪಟ್ಟಿಯಲ್ಲಿ ಮುಂಬೈ ದಾಳಿಕೋರ ಹಾಗೂ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ನಾಯಕ ಹಫೀಜ್ ಸಯೀದ್, ಪ್ರತ್ಯೇಕತಾವಾದಿ ಸಯೀದ್ ಅಲಿ ಶಾ ಗಿಲಾನಿ ಪುತ್ರ ನಯೀಮ್ ಉಲ್ ಜಾಫರ್, ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಹಾಗೂ ಉದ್ಯಮಿ ಜಹೂರ್ ಅಹ್ಮದ್ ಶಾ ವಟಾಲಿ ಪುತ್ರ ಯಾಸಿರ್ ಗಫ#ರ್ ಹೆಸರುಗಳೂ ಇವೆ. ಇವರಿಗೆ ಶಿಕ್ಷೆ ಘೋಷಣೆಯಾದರೆ, ತಮ್ಮ ಶ್ರಮ ಸಾರ್ಥಕ ಎಂಬುದು ಎನ್‌ಐಎ ನಿರೀಕ್ಷೆ.
ವಿಚಾರಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ: ಸದ್ಯಕ್ಕೆ ಎನ್‌ಐಎ ಮುಂದೆ ತಪ್ಪೊಪ್ಪಿಕೊಂಡಿದ್ದರೂ, ಇದೇ ಸಾಕ್ಷಿಗಳು ಮುಂದೊಂದು ದಿನ ಉಲ್ಟಾ ಹೊಡೆಯುವ ಸಾಧ್ಯತೆಗಳೂ ಇರುವುದರಿಂದ ಎನ್‌ಐಎ, ಮುಂದಾಲೋಚನೆಯಿಂದಲೇ ಸಾಕ್ಷ್ಯಗಳ ದಾಖಲೆ ಕಾರ್ಯ ಮಾಡಿದೆ. ಇಡೀ ವಿಚಾರಣಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗಿದೆ. ಜಿಲ್ಲಾಧಿಕಾರಿ ಮುಂದೆ ಸಾಕ್ಷಿಗಳು ಹೇಳಿಕೆ ನೀಡುವಾಗ ತನಿಖಾ ಸಂಸ್ಥೆಯ ಯಾವೊಬ್ಬ ಅಧಿಕಾರಿಯೂ ಅಲ್ಲಿ ಹಾಜರಿರದಂತೆ ನೋಡಿಕೊಳ್ಳಲಾಗಿದೆ. ಒಟ್ಟಾರೆ, ಸಾಕ್ಷಿಗಳು ಯಾವುದೇ ಬಾಹ್ಯ ಒತ್ತಡವಿಲ್ಲದೇ, ಸ್ವತಂತ್ರವಾಗಿ ಹೇಳಿಕೆ ನೀಡಿದ್ದಾರೆ ಎಂದು ಎನ್‌ಐಎ ಹೇಳಿದೆ. ಹೀಗಾಗಿ, ಈಗ ಸಾಕ್ಷಿ ನುಡಿದಿರುವವರು ಮುಂದೆ ತದ್ವಿರುದ್ಧ ಹೇಳಿಕೆ ನೀಡಿದರೆ, ಅವರ ವಿರುದ್ಧ ವಿಶ್ವಾಸ ದ್ರೋಹದ ಪ್ರಕರಣ ಜಡಿಯಲು ಎನ್‌ಐಎಗೆ ಅವಕಾಶವಿದೆ.
10 ಮಂದಿ ಬಂಧನ: ಕುಖ್ಯಾತ ಲಷ್ಕರ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಮೇರೆಗೆ 10 ವ್ಯಕ್ತಿಗಳನ್ನು ಉತ್ತರ ಪ್ರದೇಶ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತರನ್ನು ನಾಸೀಮ್ ಅಹ್ಮದ್, ನಯೀಮ್ ಅರ್ಷದ್, ಸಂಜಯ್ ಸರೋಜ್, ನೀರಜ್ ಮಿಶ್ರಾ, ಸಾಹಿಲ್ ಮಾಸಿಹ್, ಉಮಾ ಪ್ರತಾಪ್ ಸಿಂಗ್, ಮುಖೇಶ್ ಪ್ರಸಾದ್, ನಿಖೀಲ್ ರೈ ಅಲಿಯಾಸ್ ಮುಶರಫ್ ಅನ್ಸಾರಿ, ಅಂಕುರ್ ರೈ, ದಯಾನಂದ್ ಯಾದವ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 42 ಲಕ್ಷ ರೂ. ನಗದು, ಎಟಿಎಂ ಕಾರ್ಡುಗಳು, ಸ್ವೆ„ಪ್ ಮೆಷೀನ್, ಮ್ಯಾಗ್ನೆಟಿಕ್ ಕಾರ್ಡ್ ರೀಡರ್‌ಗಳು, ಮೂರು ಲ್ಯಾಪ್ ಟಾಪ್, ಬ್ಯಾಂಕ್ ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ಭಾನುವಾರ ಜಮ್ಮು-ಕಾಶ್ಮೀರದ ಬದ್ಗಾಂನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಉಗ್ರನೊಬ್ಬನನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.
ಚಾರ್ಲಿ, ರೋಮಿಯೋ
ತನ್ನ ಸಾಕ್ಷಿಗಳ ಗುರುತನ್ನು ಹೊರಗೆಡವದ ಎನ್‌ಐಎ, ನ್ಯಾಯಾಲಯಕ್ಕೆ ಸಾಕ್ಷಿಗಳ ದಾಖಲೆ ಸಲ್ಲಿಸುವಾಗಲೂ ಅವರ ಹೆಸರುಗಳನ್ನು ಗೌಪ್ಯವಾಗಿರಿಸಿದೆ. ಪ್ರತಿಯೊಬ್ಬ ಸಾಕ್ಷಿಗೂ ‘ರೋಮಿಯೋ’, “ಚಾರ್ಲಿ’, “ಗಾಮಾ’, “ಆಲ್ಫಾ’, “ಪಾಟರ್’, “ಪೈ’, “ಹ್ಯಾರಿ’ ಎಂಬಿತ್ಯಾದಿ ರಹಸ್ಯ ಹೆಸರುಗಳನ್ನು ಇಡಲಾಗಿದೆ.