Advertisement

ಬಿಗ್‌ ಬಾಶ್‌ ಲೀಗ್‌ ಮೆಲ್ಬರ್ನ್ ರೆನೆಗೇಡ್ಸ್‌ಗೆ ಮೊದಲ ಪ್ರಶಸ್ತಿ

12:30 AM Feb 18, 2019 | |

ಮೆಲ್ಬರ್ನ್: ಮೆಲ್ಬರ್ನ್ ತಂಡಗಳೆರಡರ ನಡುವಿನ ಫೈನಲ್‌ನಲ್ಲಿ ಆರನ್‌ ಫಿಂಚ್‌ ನೇತೃತ್ವದ ಮೆಲ್ಬರ್ನ್ ರೆನೆಗೇಡ್ಸ್‌ ತಂಡ 13 ರನ್ನುಗಳ ಅಚ್ಚರಿಯ ಜಯ ಸಾಧಿಸುವುದರೊಂದಿಗೆ ಮೊದಲ ಬಾರಿಗೆ “ಬಿಗ್‌ ಬಾಶ್‌ ಲೀಗ್‌’ ಚಾಂಪಿಯನ್‌ ಆಗಿ ಮೂಡಿಬಂತು.

Advertisement

ರವಿವಾರ ಇಲ್ಲಿನ “ಡೋಕ್‌ಲ್ಯಾಂಡ್ಸ್‌ ಸ್ಟೇಡಿಯಂ’ನಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮೆಲ್ಬರ್ನ್ ರೆನೆಗೇಡ್ಸ್‌ ಗಳಿಸಿದ್ದು 5 ವಿಕೆಟಿಗೆ 145 ರನ್‌ ಮಾತ್ರ. ಇದನ್ನು ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಾರಥ್ಯದ ಮೆಲ್ಬರ್ನ್ ಸ್ಟಾರ್ ಸುಲಭದಲ್ಲಿ ಗೆಲ್ಲಬಹುದೆಂಬ ನಿರೀಕ್ಷೆ 13ನೇ ಓವರ್‌ ತನಕವೂ ಇತ್ತು. ಆಗ ಸ್ಟಾರ್ ವಿಕೆಟ್‌ ನಷ್ಟವಿಲ್ಲದೆ 93 ರನ್‌ ಬಾರಿಸಿ ಮುನ್ನುಗ್ಗುತ್ತಿತ್ತು. ಅನಂತರದ ನಾಟಕೀಯ ಬೆಳವಣಿಗೆಯಲ್ಲಿ ಸ್ಟಾರ್ಗೆ 20 ಓವರ್‌ಗಳಲ್ಲಿ ಗಳಿಸಲು ಸಾಧ್ಯವಾದದ್ದು 7 ವಿಕೆಟಿಗೆ 132 ರನ್‌ ಮಾತ್ರ!

ಬೆನ್‌ ಡಂಕ್‌ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ಮೆಲ್ಬರ್ನ್ ಸ್ಟಾರ್ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಡಂಕ್‌ 45 ಎಸೆತಗಳಿಂದ 57 ರನ್‌ (4 ಬೌಂಡರಿ, 1 ಸಿಕ್ಸರ್‌) ಮತ್ತು ಸ್ಟೋಯಿನಿಸ್‌ 38 ಎಸೆತಗಳಿಂದ 39 ರನ್‌ (2 ಬೌಂಡರಿ, 1 ಸಿಕ್ಸರ್‌) ಬಾರಿಸಿ ತಂಡವನ್ನು ಗೆಲುವಿನತ್ತ ಓಡಿಸುತ್ತಿದ್ದರು. ಮುಂದಿನದ್ದೆಲ್ಲ ಕ್ಯಾಮರೂನ್‌ ಬಾಯ್ಸ, ಕ್ರಿಸ್‌ ಟ್ರಿಮೇನ್‌ ಮತ್ತು ಡೇನಿಯಲ್‌ ಕ್ರಿಸ್ಟಿಯನ್‌ ಅವರ ಅಮೋಘ ಬೌಲಿಂಗ್‌ ಪರಾಕ್ರಮ. ಇವರೆಲ್ಲ ತಲಾ 2 ವಿಕೆಟ್‌ ಉರುಳಿಸಿ ಎದುರಾಳಿಗೆ ಭರ್ಜರಿ ಬ್ರೇಕ್‌ ಹಾಕಿದರು. 19 ರನ್‌ ಅಂತರದಲ್ಲಿ 7 ವಿಕೆಟ್‌ ಉದುರಿಸಿಕೊಂಡ ಮೆಲ್ಬರ್ನ್ ಸ್ಟಾರ್ ತನಗೆ “ಸ್ಟಾರ್‌’ ಇಲ್ಲ ಎಂಬುದನ್ನು ಸಾಬೀತುಪಡಿಸಿತು.

ಕೂಪರ್‌-ಕ್ರಿಸ್ಟಿಯನ್‌ ಸಾಹಸ
ಮೆಲ್ಬರ್ನ್ ರೆನೆಗ್ರೇಡ್ಸ್‌ ತಂಡದ್ದು ಇದಕ್ಕೆ ವ್ಯತಿರಿಕ್ತ ಸಾಧನೆ. ಫಿಂಚ್‌ ಬಳಗದ ಆರಂಭ ತೀರಾ ಕಳಪೆಯಾಗಿತ್ತು. 11ನೇ ಓವರ್‌ ವೇಳೆ 65 ರನ್ನಿಗೆ 5 ವಿಕೆಟ್‌ ಉರುಳಿತ್ತು. ಅನಂತರ ಜತೆಗೂಡಿದ ಟಾಮ್‌ ಕೂಪರ್‌-ಡೇನಿಯಲ್‌ ಕ್ರಿಸ್ಟಿಯನ್‌ ಮುರಿಯದ 6ನೇ ವಿಕೆಟ್‌ ಜತೆಯಾಟದಲ್ಲಿ 9.4 ಓವರ್‌ಗಳಿಂದ 80 ರನ್‌ ಒಟ್ಟುಗೂಡಿಸಿ ಗೌರವಾರ್ಹ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು.

ಕೂಪರ್‌ 35 ಎಸೆತಗಳಿಂದ 43 ರನ್‌ (2 ಬೌಂಡರಿ, 2 ಸಿಕ್ಸರ್‌), ಕ್ರಿಸ್ಟಿಯನ್‌ 30 ಎಸೆತಗಳಿಂದ 38 ರನ್‌ (2 ಬೌಂಡರಿ, 1 ಸಿಕ್ಸರ್‌) ಹೊಡೆದರು. ಆಲ್‌ರೌಂಡ್‌ ಪ್ರದರ್ಶನವಿತ್ತ ಡೇನಿಯಲ್‌ ಕ್ರಿಸ್ಟಿಯನ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

ಸಂಕ್ಷಿಪ್ತ ಸ್ಕೋರ್‌: ಮೆಲ್ಬರ್ನ್ ರೆನೆಗೇಡ್ಸ್‌-5 ವಿಕೆಟಿಗೆ 145 (ಕೂಪರ್‌ ಔಟಾಗದೆ 43, ಕ್ರಿಸ್ಟಿಯನ್‌ ಔಟಾಗದೆ 38, ಝಂಪ 21ಕ್ಕೆ 2, ಬರ್ಡ್‌ 25ಕ್ಕೆ 2). ಮೆಲ್ಬರ್ನ್ ಸ್ಟಾರ್-7 ವಿಕೆಟಿಗೆ 132 (ಡಂಕ್‌ 57, ಸ್ಟೋಯಿನಿಸ್‌ 39, ಟ್ರಿಮೇನ್‌ 21ಕ್ಕೆ 2, ಬಾಯ್ಸ 30ಕ್ಕೆ 2, ಕ್ರಿಸ್ಟಿಯನ್‌ 33ಕ್ಕೆ 2). ಪಂದ್ಯಶ್ರೇಷ್ಠ: ಡೇನಿಯಲ್‌ ಕ್ರಿಸ್ಟಿಯನ್‌.

Advertisement

Udayavani is now on Telegram. Click here to join our channel and stay updated with the latest news.

Next