ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ ಶನಿವಾರವೂ(ನವೆಂಬರ್ 7, 2020) ಮುಂದುವರಿದಿದ್ದು, ಡೆಮಾಕ್ರ್ಯಾಟ್ ಪಕ್ಷದ ಜೋ ಬೈಡೆನ್ ಬೆಂಬಲಿಗರು ಫಿಲಡೆಲ್ಫಿಯಾದ ಬೀದಿಗಳಲ್ಲಿ ಹಾಡಿ ಕುಣಿಯುತ್ತಿದ್ದಾರೆ. ಮತ್ತೊಂದೆಡೆ ಡೊನಾಲ್ಡ್ ಟ್ರಂಪ್ ಅವರ ಸಶಸ್ತ್ರಧಾರಿ ಬೆಂಬಲಿಗರು ಫೋನಿಕ್ಸ್ ನಲ್ಲಿ ‘ಮತಎಣಿಕೆಯ” ಕಳ್ಳತನ ನಿಲ್ಲಿಸಿ ಎಂದು ಕೂಗುತ್ತಿರುವುದಾಗಿ ವರದಿ ತಿಳಿಸಿದೆ.
ಟ್ರಂಪ್ ಬೆಂಬಲಿಗರ ಕೈಯಲ್ಲಿ ಗನ್ಸ್, ಪಿಸ್ತೂಲ್!
ಅಧ್ಯಕ್ಷೀಯ ಚುನಾವಣೆಯ ಮತಎಣಿಕೆಯಲ್ಲಿ ಜೋ ಬೈಡೆನ್ ಮುನ್ನಡೆ ಸಾಧಿಸಿದ್ದು, ಗೆಲುವಿನ ಹೊಸ್ತಿಲಿನಲ್ಲಿದ್ದಾರೆ. ಡೆಡ್ರಾಯಿಟ್ ನಲ್ಲಿ ರಿಪಬ್ಲಿಕನ್ ಅಧ್ಯಕ್ಷ ಟ್ರಂಪ್ ನ ನೂರಾರು ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಬೆಂಬಲಿಗರು ಗನ್ ಗಳನ್ನು ಹಿಡಿದುಕೊಂಡು ನಾವೇ ಗೆಲುವು ಸಾಧಿಸಿದ್ದೇವೆ ಎಂದು ಮಿಚಿಗನ್ ನ ಮತಎಣಿಕೆ ಕೇಂದ್ರದ ಹೊರಭಾಗದಲ್ಲಿ ಕೂಗುತ್ತಿರುವುದಾಗಿ ವರದಿ ವಿವರಿಸಿದೆ.
ಫಿಲಡೆಲ್ಫಿಯಾ ಅತೀ ಹೆಚ್ಚು ಜನಸಂಖ್ಯೆ ಇರುವ ಪ್ರದೇಶವಾಗಿದೆ. ಚುನಾವಣಾ ಕಣದಲ್ಲಿ ಎಲೆಕ್ಟ್ರೋರಲ್ ಮತಗಳಲ್ಲಿ ಮುನ್ನಡೆ ಸಾಧಿಸಿರುವ ಜೋ ಅವರನ್ನು ಹಿಂದಿಕ್ಕಲು ಟ್ರಂಪ್ ಪೆನ್ಸಿಲ್ವೇನಿಯಾದಲ್ಲಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ಇದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:Unlock 5.0: ಕೋವಿಡ್ ಅತಂಕ-ಒಡಿಶಾದಲ್ಲಿ ಡಿಸೆಂಬರ್ 31ರವರೆಗೆ ಎಲ್ಲಾ ಶಾಲೆ ಬಂದ್
ಡೊನಾಲ್ಡ್ ಟ್ರಂಪ್ ಗಿಂತ ಜೋ ಬೈಡೆನ್ ಗೆಲುವಿನ ಸನಿಹದಲ್ಲಿದ್ದಾರೆ ಎಮಬ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆಯೇ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿರುವುದಾಗಿ 37 ವರ್ಷದ ಸೋಶಿಯಲ್ ಸ್ಟಡೀಸ್ ಟೀಚರ್ ಸಿಯಾನ್ ಟ್ರುಪ್ಪೊ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗಳು ಟ್ರಂಪ್ ಆಡಳಿತಾವಧಿಯಲ್ಲಿ ಜನಿಸಿದ್ದಳು, ಮತ್ತು ಟ್ರಂಪ್ ಆಡಳಿತ ಕೊನೆಗೊಳ್ಳುವುದಕ್ಕೂ ಕೂಡಾ ಆಕೆ ಸಾಕ್ಷಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ 264 ಎಲೆಕ್ಟ್ರೋರಲ್ ಮತ ಪಡೆದಿದ್ದು, ಡೊನಾಲ್ಡ್ ಟ್ರಂಪ್ 214 ಎಲೆಕ್ಟ್ರೋರಲ್ ಮತ ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಒಟ್ಟು 270 ಎಲೆಕ್ಟ್ರೋರಲ್ ಮತ ಪಡೆದವರು ಅಮೆರಿಕದ ಅಧ್ಯಕ್ಷಗಾದಿ ಏರಲಿದ್ದಾರೆ.