ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ದೂರವಾಣಿ ಮೂಲಕ ಮಾತುಕತೆ ನಡೆಸಿ, ಉಕ್ರೈನ್ ವಿಚಾರದಲ್ಲಿ ಮಾನವೀಯತೆ ನೆಲೆಯ ಬೆಂಬಲ ಮತ್ತು ಶಾಂತಿ ಸಂದೇಶ ನೀಡಿರುವುದನ್ನು ಶ್ಲಾಘಿಸಿರುವುದಾಗಿ ವರದಿ ತಿಳಿಸಿದೆ.
ನಾನು ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ, ಇತ್ತೀಚೆಗಿನ ಪೋಲ್ಯಾಂಡ್ ಮತ್ತು ಉಕ್ರೈನ್ ಭೇಟಿ ವಿಚಾರದ ಕುರಿತು ಚರ್ಚಿಸಿ, ಶಾಂತಿ ಮಾತುಕತೆಯ ಸಂದೇಶ ರವಾನಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಬೈಡೆನ್ ತಿಳಿಸಿದ್ದಾರೆ.
ಆಗಸ್ಟ್ 23ರಂದು ಪ್ರಧಾನಿ ಮೋದಿ ಕೀವ್ ಗೆ ಭೇಟಿ ನೀಡಿದ ಸಂದರ್ಭದಲ್ಲೂ ರಾಜತಾಂತಿಕ ನೆಲೆಗಟ್ಟಿನಲ್ಲಿ ಸಮತೋಲನ ಕಾಯ್ದುಕೊಂಡಿರುವುದನ್ನು ಪರಿಗಣಿಸಲಾಗಿತ್ತು. ಮುಖ್ಯವಾಗಿ ಕಳೆದ ತಿಂಗಳು ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬೈಡೆನ್ ನೇತೃತ್ವದ ಸರ್ಕಾರ ಹಾಗೂ ಇತರ ಪಾಶ್ಚಾತ್ಯ ದೇಶಗಳು ಟೀಕಿಸಿದ್ದವು.
ಪ್ರಧಾನಿ ಮೋದಿ ಉಕ್ರೈನ್ ಗೆ ಭೇಟಿ ನೀಡಿದ್ದ ವೇಳೆ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸಿಕ್ಸೈ ಅವರೊಂದಿಗೆ ಮಾತುಕತೆ ನಡೆಸಿ, ಉಕ್ರೈನ್ ಮತ್ತು ರಷ್ಯಾ ಒಟ್ಟುಗೂಡಿ ಶಾಂತಿಯುತವಾಗಿ ಕದನವನ್ನು ಮುಕ್ತಾಯಗೊಳಿಸುವಂತೆ ಸಲಹೆ ನೀಡಿದ್ದರು. ಶಾಂತಿ ಮಾತುಕತೆಗೆ ಭಾರತ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು.