Advertisement

ಬಿದ್ದಾಟಂಡ ಕಪ್‌ ಹಾಕಿ ಉತ್ಸವ: ಟೈಸ್‌ ಬಿಡುಗಡೆ

04:59 PM Apr 13, 2017 | Harsha Rao |

ಮಡಿಕೇರಿ: ಕೊಡವ ಕುಟುಂಬಗಳ ನಡುವಣ 21ನೇ ವರ್ಷದ ಬಿದ್ದಾಟಂಡ ಕಪ್‌ ಹಾಕಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಯಾವೆಲ್ಲ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ ಎನ್ನುವುದನ್ನು ನಿರ್ಧರಿಸುವ ಟೈಸ್‌ ಕಾರ್ಡ್‌ನ್ನು ಬಿಡುಗಡೆ ಮಾಡಲಾಯಿತು.

Advertisement

ನಗರದ ಪತ್ರಿಕಾ ಭವನದಲ್ಲಿ ನಡೆದ‌ ಸರಳ ಕಾರ್ಯಕ್ರಮದಲ್ಲಿ ಪಂದ್ಯಾವಳಿಗೆ ನೋಂದಣಿಯಾಗಿರುವ 306 ಕೊಡವ ಕುಟುಂಬ ತಂಡಗಳ ನಡುವಿನ ಪಂದ್ಯಗಳ ಮಾಹಿತಿಯ ಟೈಸ್‌ ಕಾರ್ಡ್‌ನ್ನು ಮೈದಾನ ಸಮಿತಿಯ ಅಧ್ಯಕ್ಷರಾದ ಬಿದ್ದಾಟಂಡ ಬೆಳ್ಯಪ್ಪ, ಆಯೋಜನಾ ಸಮಿತಿಯ ನಿರ್ದೇಶಕರಾದ ಬಿದ್ದಾಟಂಡ ಎಸ್‌.ತಮ್ಮಯ್ಯ ಹಾಗೂ ತಾಂತ್ರಿಕ ಸಮಿತಿಯ ಸಂಪತ್‌ ಬಿಡುಗಡೆ ಮಾಡಿದರು.

ಕಳೆದ ಎರಡು ದಶಕಗಳಿಂದ ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಹಾಕಿ ಉತ್ಸವದ ಈ ಆವೃತ್ತಿಯಲ್ಲಿ ದಾಖಲೆಯ 306 ತಂಡಗಳ ನೋಂದಣಿಯಾಗಿವೆೆ. ಏಪ್ರಿಲ್‌ 17 ರಿಂದ ಮೇ14 ರವರೆಗೆ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದು ಬಿ.ಎಸ್‌. ತಮ್ಮಯ್ಯ ತಿಳಿಸಿದರು.

ಮೂರು ಮೈದಾನಗಳಲ್ಲಿ ಪಂದ್ಯಾವಳಿ 
ನಾಪೋಕ್ಲುವಿನಲ್ಲಿ ಮೂರು ಮೈದಾನಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ಮೈದಾನದಲ್ಲಿ ಸರಾಸರಿ 6 ರಿಂದ 7 ಪಂದ್ಯಗಳಂತೆ ಒಟ್ಟಾಗಿ 18 ರಿಂದ 21 ಪಂದ್ಯಗಳು ನಡೆಯಲಿದೆ. ಜರೂರಿ ಸಂದರ್ಭಗಳಲ್ಲಿ ಮುಂದೂಡಲ್ಪಡುವ ಪಂದ್ಯಗಳನ್ನು ಜೂನಿಯರ್‌ ಕಾಲೇಜಿನ ಮೈದಾನದಲ್ಲಿ ನಡೆಸಲಾಗುವುದೆಂದು ಮಾಹಿತಿ ನೀಡಿದರು.

ಪಂದ್ಯಾವಳಿಯ ಆರಂಭಿಕ ದಿನವಾದ ಏ.17 ರಂದು ಬೆಳಗ್ಗೆ 11 ಗಂಟೆಯಿಂದ 12.30 ಗಂಟೆಯವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಮಾಜಿ ಒಲಂಪಿಯನ್‌ ಡಾ| ಎ.ಬಿ. ಸುಬ್ಬಯ್ಯ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2.30 ರಿಂದ 5.30 ರವರೆಗೆ ಪಂದ್ಯಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

Advertisement

ಪ್ರದರ್ಶನ ಪಂದ್ಯ 
 ಉದ್ಘಾಟನಾ ಸಮಾರಂಭದ ಬಳಿಕ ಅಂತಾರಾಷ್ಟ್ರೀಯ ಹಾಕಿ ಪಟು ರಘುನಾಥ್‌ ನೇತೃತ್ವದ ಶೇಷ ಭಾರತ ತಂಡ ಮತ್ತು ಬೊಳ್ಳೆಪಂಡ ಕಾರ್ಯಪ್ಪ ನೇತೃತ್ವದ ಕೂರ್ಗ್‌ ರೆಜಿಮೆಂಟ್‌ ತಂಡಗಳ ನಡುವೆ ಪ್ರದರ್ಶನ ಹಾಕಿ ಪಂದ್ಯ ನಡೆಯಲಿದೆ. ಎಂಇಜಿ ಬ್ಯಾಂಡ್‌, ಕೊಡವ ನಾಟಕ, ಕೊಡವ ಸಂಗೀತ ಕಾರ್ಯಕ್ರಮಗಳು ಸಮಾರಂಭದ ಕಳೆ ಹೆಚ್ಚಿಸಲಿವೆ ಎಂದು ಬಿ.ಎಸ್‌. ತಮ್ಮಯ್ಯ ತಿಳಿಸಿದರು.

ಎರಡು ದಿನ ಪಂದ್ಯಗಳಿಲ್ಲ
ಮಕ್ಕಿ ದೇವರ ಉತ್ಸವದ ಹಿನ್ನೆಲೆಯಲ್ಲಿ ಮೇ 3 ಮತ್ತು ಅಂತಿಮ ಪಂದ್ಯದ ಹಿಂದಿನ ದಿನವಾದ ಮೇ 13ರಂದು ಪಂದ್ಯಗಳು ಇರುವುದಿಲ್ಲವೆಂದರು.  ಈ ಸಂದರ್ಭ ಪಂದ್ಯಾವಳಿಯ ತಾಂತ್ರಿಕ ಸಮಿತಿಯ ಪ್ರಮುಖರಾದ ಸಂಪತ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next