Advertisement
ಸಂಗಮೇಶ ಬಿರಾದಾರ ಎಂಬುವನೇ ಅಪರಕರಣ ಕೃತ್ಯ ಎಸಗಿದ್ದಲ್ಲದೇ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಗುಂಡೇಟು ತಿಂದು ಈಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಪಿಯಿಂದ ಹಲ್ಲೆಗೊಳಗಾದ ಭಾಲ್ಕಿ ಗ್ರಾಮೀಣ ಠಾಣೆಯ ಸಿಬಂದಿಗಳಾದ ರಾಜೇಂದ್ರ ಅವರಿಗೆ ಎದೆ ಮತ್ತು ಗುರುನಾಥ ಅವರ ಕೈ ಮೆಲೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಗಮೇಶನ ಮೇಲೆ ಜಿಲ್ಲೆ ಸೇರಿ ವಿವಿಧ ಠಾಣೆಗಳಲ್ಲಿ ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಈ ಗುಂಡಾ ಕಾಯ್ದೆಯಡಿ ಒಂದು ವರ್ಷ ಕಲ್ಬುರ್ಗಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದಾನೆ.
ಭಾಲ್ಕಿ ತಾಲೂಕಿನ ರುದನೂರ್ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಕಣಜಿ ಗ್ರಾಮದ ಪ್ರಕಾಶ ಸ್ವಾಮಿ ಎಂಬುವನ್ನು ಕಾರಿನಲ್ಲಿ ಬಂದ ಐದಾರು ಜನರು ಅಡ್ಡಗಟ್ಟಿ ಅಪಹರಿಸಿದ್ದಾರೆ. ಆಡು ಕಾಯುತ್ತಿದ್ದ ವ್ಯಕ್ತಿಯೊಬ್ಬರ ಸುಳಿವಿನ ಮೇರೆಗೆ ಪ್ರಕಾಶ ಅವರ ಮಗ ನಾಗೇಶ್ ಸ್ವಾಮಿ ಅವರು ಧನ್ನೂರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್‌ಪಿ ಪ್ರದೀಪ್ ಗುಂಟಿ ಅವರು ಭಾಲ್ಕಿ ಸಿಪಿಐ ಜಿಎಸ್ ಬಿರಾದಾರ ಮತ್ತು ಪಿಎಸ್‌ಐ ಅಶೋಕ ಪಾಟೀಲ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು. ಅಪಹರಣ ಕೃತ್ಯ ಎಸಗಿದ ಆರೋಪಿತರು ಮಹಾರಾಷ್ಟ್ರದ ಲಾತೂರನಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಪೊಲೀಸರ ವಿಶೇಷ ತಂಡ, ಅಲ್ಲಿಗೆ ತೆರಳಿದೆ. ನಂತರ ಆರೋಪಿತರು ನಿಜಾಮಬಾದ್, ಉಸ್ಮಾರಬಾದ್ ಕಡೆ ಹೋಗಿದ್ದು, ಅವರನ್ನು ತಂಡವೂ ಹಿಂಬಾಲಿಸಿದೆ. ಪೊಲೀಸರು ತಮ್ಮನ್ನು ಬೆನ್ನತ್ತಿರುವ ಬಗ್ಗೆ ಗೊತ್ತಾಗುತ್ತಿದ್ದಂತೆ ಅಪರಹಣಗೊಂಡಿದ್ದ ಪ್ರಕಾಶ ಸ್ವಾಮಿಯನ್ನು ಉಸ್ಮಾನಬಾದ್‌ನಲ್ಲಿ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದರು. ಆದರೆ, ಕೊನೆಗೆ ಅಪಹರಿಸಿದ್ದ ಸಂಗಮೇಶ ಗುಂಡಪ್ಪ ಮತ್ತು ವಿಜಯ ಎಂಬುವರನ್ನು ದಸ್ತಗಿರಿ ಮಾಡಿದ್ದಾರೆ.
Related Articles
Advertisement