ಬೀದರ: ದೇಶದ ಜನರನ್ನು ಒಗ್ಗೂಡಿಸುವ ಸಂಕಲ್ಪದೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ “ಭಾರತ ಐಕ್ಯತಾ ಯಾತ್ರೆ’ ಅ. 21ಕ್ಕೆ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಗೆ ಪ್ರವೇಶಿಸಲಿದ್ದು, ಬೃಹತ್ ಸಮಾವೇಶ ಹಾಗೂ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಗಡಿ ಜಿಲ್ಲೆ ಬೀದರನಿಂದ ಸಾವಿರಾರು ಜನರನ್ನು ಕರೆದೊಯ್ಯಲು ಭರದ ತಯಾರಿ ನಡೆದಿದೆ.
ಸೆ. 7ರಿಂದ ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ ಐಕ್ಯತಾ ಯಾತ್ರೆ ಕಾಶ್ಮೀರದವರೆಗೆ ನಡೆಯಲಿದ್ದು, ಸಧ್ಯ ಕರುನಾಡಿನಲ್ಲಿ ಸಂಚರಿಸುತ್ತಿದೆ. ಅ. 15ರಿಂದ ಗಣಿ ನಾಡು ಬಳ್ಳಾರಿ ಮೂಲಕ ಹಾದು ಹೋಗುವ ಯಾತ್ರೆಯು ಅ. 21ರಿಂದ ಮೂರು ದಿನಗಳ ಕಾಲ ರಾಯಚೂರಿನಲ್ಲಿ ಸಾಗಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸಾಥ್ ನೀಡಲಿದ್ದಾರೆ. ಧರಿನಾಡು ಬೀದರ ಮೂಲಕ ಯಾತ್ರೆ ಸಾಗದಿದ್ದರೂ ಜಿಲ್ಲೆಯಲ್ಲಿ ಪಾದಯಾತ್ರೆ ಬಗ್ಗೆ ತೀವ್ರ ಕುತೂಹಲ ಮೂಡಿದ್ದು, ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬಲು ಇಲ್ಲಿನ ಆರು ಕ್ಷೇತ್ರಗಳಿಂದ 25ರಿಂದ 30 ಸಾವಿರ ಜನರನ್ನು ಸೇರಿಸಲು ಜಿಲ್ಲಾ
ಕಾಂಗ್ರೆಸ್ ಉತ್ಸುಕವಾಗಿದೆ.
ಭಾರತೀಯರನ್ನು ಒಂದುಗೂಡಿಸುವ ಘೋಷ ವಾಕ್ಯದೊಂದಿಗೆ ಕಾಂಗ್ರೆಸ್ ದೇಶದ್ಯಂತ ಈ ಭಾರತ ಐಕ್ಯತಾ ಯಾತ್ರೆ ನಡೆಸುತ್ತಿದ್ದು, ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದೆ. ಯಾತ್ರೆ ಮೂಲಕ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಪಡಿಸಿ, ಕರ್ನಾಟಕ ವಿಧಾನ ಸಭೆ ಚುನಾವಣೆ ಜತೆಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಶ್ರಮಿಸುತ್ತಿದೆ. ಯಾತ್ರೆ ಮಾರ್ಗದದಲ್ಲಿ ಬೃಹತ್ ಸಮಾವೇಶ ಮತ್ತು ಸಭೆಗಳನ್ನು ನಡೆಸಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಲಾಗುತ್ತಿದೆ. ಮತ್ತೂಂದೆಡೆ ಹಾಲಿ ಶಾಸಕರು ಮತ್ತು ಮುಂದಿನ ವಿಧಾನಸಭೆ ಚುನಾವಣೆ ಆಕಾಂಕ್ಷಿಗಳು ಯಾತ್ರೆಯಲ್ಲಿ ಸಾವಿರಾರು ಜನರನ್ನು ಕರೆದೊಯ್ದು ತಮ್ಮ ವರ್ಚಸ್ಸನ್ನೂ ಹೆಚ್ಚಿಸಿಕೊಳ್ಳಲು ಕಾತರರಾಗಿದ್ದಾರೆ.
ಐಕ್ಯಾತಾ ಯಾತ್ರೆ ಹಿನ್ನೆಲೆ ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಸರಣಿ ಸಭೆಗಳನ್ನು ನಡೆಸಿ, ಯಶಸ್ವಿಗಾಗಿನ ರೂಪುರೇಷಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಪ್ರತಿ ಕ್ಷೇತ್ರಕ್ಕೆ ಐದು ಸಾವಿರ ಮತ್ತು ಇತರ ಕ್ಷೇತ್ರಗಳಿಗೆ 2ರಿಂದ 3 ಸಾವಿರದಂತೆ ಜನರನ್ನು ಯಾತ್ರೆಯಲ್ಲಿ ಸೇರಿಸಲು ಗುರಿ ನೀಡಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹೊಸ ಜೋಶ್ ನೀಡುತ್ತಿರುವ ಐತಿಹಾಸಿಕ ಪಾದಯಾತ್ರೆಯಲ್ಲಿ ಭಾಗಿಯಾಗಲು ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾತುರರಾಗಿದ್ದಾರೆ. ರಾಯಚೂರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಅ. 21ರಂದು ಬೆಳಗ್ಗೆ ಜಿಲ್ಲೆಯ ವಿಧಾನ ಸಭೆ ಕ್ಷೇತ್ರಗಳಿಂದ ವಾಹನಗಳು ಹೊರಡಲಿದ್ದು, ಆಯಾ ಕ್ಷೇತ್ರದ ಶಾಸಕರು ಮತ್ತು ಮಾಜಿ ಶಾಸಕರು ಚಾಲನೆ ನೀಡಲಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಆರಂಭವಾಗಿರುವ ಭಾರತ ಐಕ್ಯತಾ ಯಾತ್ರೆ ಅ. 21ರಂದು ರಾಯಚೂರು ಜಿಲ್ಲೆ ಪ್ರವೇಶಿಸಲಿದ್ದು, ಕರುನಾಡಿನ ಎಲ್ಲೆಡೆ ವ್ಯಾಪಕ ಜನ ಬೆಂಬಲ ಸಿಗುತ್ತಿದೆ. ರಾಯಚೂರು ಪಾದಯಾತ್ರೆಯಲ್ಲಿ ಬೀದರ ಜಿಲ್ಲೆಯಿಂದ 25 -30 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿ ಸರ್ಕಾರ ದುರಾಡಳಿತ, ಜನರ ಮಧ್ಯ ವಿಷ ಬೀಜ ಬಿತ್ತುತ್ತಿರುವ ಸ್ಥಿತಿಯಲ್ಲಿ ದೇಶದ ಏಕತೆ ಹಾಗೂ ಭಾರತೀಯರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಈ ಪಾದಯಾತ್ರೆ ನಡೆಸಲಾಗುತ್ತಿದ್ದು, ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಕೈಜೋಡಿಸಿ.
ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
*ಶಶಿಕಾಂತ ಬಂಬುಳಗ