ಬೀದರ: ಲಾಕ್‌ಡೌನ್‌ದಿಂದ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧ ವ್ಯಸನಿಗಳಿಗೆ ನುಂಗಲಾರದ ತುತ್ತಾಗಿದೆ. ಇದರ ಪರಿಣಾಮ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಳ ಮತ್ತು ಕಳ್ಳಭಟ್ಟಿ ದಂಧೆ ತಲೆ ಎತ್ತಿದ್ದು, ಇದಕ್ಕೆ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಅಬಕಾರಿ ದಾಳಿ ಪ್ರಕರಣಗಳೇ ಸಾಕ್ಷಿ.
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿದ ಬಳಿಕ ಮದ್ಯ ಮಾರಾಟಕ್ಕೆ ನಿಷೇಧದಿಂದ ಎಲ್ಲ ಸಾರಾಯಿ ಅಂಗಡಿಗಳು ಬಾಗಿಲು ಹಾಕಿದ್ದು, ವ್ಯಸನಿಗಳು ಮದ್ಯಕ್ಕೆ ಚಡಪಡಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಿಡಿಗೇಡಿಗಳು ಜನರ ಪ್ರಾಣಕ್ಕೆ ಕುತ್ತು ತರುವಂತಹ ಕಳಪೆ ದರ್ಜೆಯ ಅಕ್ರಮ ಮದ್ಯ ತಯಾರಿಕೆ, ಮಾರಾಟವನ್ನು ನಿರಾತಂಕವಾಗಿ ಮಾಡುತ್ತಿದ್ದಾರೆ. ಈ ದಂಧೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಸಾಕಷ್ಟು ಪ್ರಯತ್ನಿಸಿದರೂ ಅಕ್ರಮ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ.
225 ಅಬಕಾರಿ ದಾಳಿ: ಲಾಕ್‌ಡೌನ್‌ಗೂ ಮುನ್ನ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದ ಅಕ್ರಮ ಕಳ್ಳಭಟ್ಟಿ ದಂಧೆ ಈಗ ರಾಜಾರೋಷವಾಗಿ ನಡೆಯುತ್ತಿದೆ. ಬೀದರ ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿ ಜಿಲ್ಲೆಯಾಗಿರುವುದರಿಂದ ದಂಧೆ ಹೆಚ್ಚಿದ್ದು, ಲಾಕ್‌ಡೌನ್ ಬಳಿಕ ಈವರೆಗೆ ಜಿಲ್ಲೆಯಲ್ಲಿ ಸುಮಾರು 225 ಅಬಕಾರಿ ದಾಳಿಗಳನ್ನು ನಡೆಸಿರುವ ಅಬಕಾರಿ ಪೊಲೀಸರು 21 ಪ್ರಕರಣಗಳು ದಾಖಲಿಸಿಕೊಂಡು ಐದು ಜನ ಆರೋಪಿಗಳನ್ನು ಬಂ ಧಿಸಿದ್ದಾರೆ. 1170 ಲೀ. ಬೀಯರ್, 1072 ಲೀ. ವಿಸ್ಕಿ, 41 ಲೀ. ಕಳ್ಳಭಟ್ಟಿ, 240 ಲೀ. ಸೇಂದಿ ಮತ್ತು 7 ವಾಹನ ಸೇರಿ 9.40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಎರಡ್ಮೂರು ಪಟ್ಟು ದರ ಹೆಚ್ಚಳ: ಕೊರೊನಾ ಸೋಂಕು ವ್ಯಾಪಿಸದಂತೆ ಸರ್ಕಾರ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಸಾರ್ವಜನಿಕರು ಮನೆಯಿಂದ ಹೊರಗೆ ಬರದೇ ಸಹಕಾರ ನೀಡುತ್ತಿದ್ದಾರೆ. ಜತೆಗೆ ಮದ್ಯದ ಅಂಗಡಿಗಳನ್ನೂ ಬಂದ್ ಮಾಡಿರುವುದರಿಂದ ಜನ ಕಳ್ಳಭಟ್ಟಿಗೆ ಮೊರೆ ಹೋಗಿದ್ದಾರೆ.
ದಾಬಾ, ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಜನ ಎರಡ್ಮೂರು ಪಟ್ಟು ಹೆಚ್ಚು ಹಣ ಕೊಟ್ಟು ತಮ್ಮ ನಶೆ ಏರಿಸಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ತಡೆಗೆ ಅಬಕಾರಿ ಇಲಾಖೆ 7 ತಂಡ ರಚಿಸಿದೆ. ದೂರು ಮತ್ತು ಮಾಹಿತಿ ಆಧಾರದ ಮೇಲೆ ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ದಾಳಿ ನಡೆಸಿ ಚಟುವಟಕೆ ನಡೆಯದಂತೆ ಕ್ರಮ ವಹಿಸಿದೆ. ದಾಳಿ, ಹಗಲು ರಾತ್ರಿ ಗಸ್ತು, ವಾಹನ ತಪಾಸಣೆ ನಡೆಸಿ ಅಬಕಾರಿ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ. ಕಳ್ಳಭಟ್ಟಿ ತಯಾರಿಕೆಗೆ ಬಳಸುವ ಕಚ್ಚಾ ಪದಾರ್ಥ ಮಾರದಂತೆ ಕಿರಾಣಿ ವ್ಯಾಪಾರಿಗಳಿಗೂ ಸೂಚನೆ ನೀಡಲಾಗುತ್ತಿದೆ.
ಲಾಕ್‌ಡೌನ್‌ದಿಂದಾಗಿ ಮದ್ಯ ಮಾರಾಟ ನಿಷೇಧ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯ 165 ಮದ್ಯದಂಗಡಿ ಬಂದ್ ಮಾಡಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಕೆಲವರು ಅಕ್ರಮ ದಂಧೆಗೆ ಇಳಿದಿದ್ದು, ನಿಯಂತ್ರಣಕ್ಕೆ ಅಬಕಾರಿ ಇಲಾಖೆ ಕ್ರಮ ವಹಿಸಿದೆ. ಅಕ್ರಮ ಸಾರಾಯಿ ಮಾರಾಟದಾರರ ಬಂಧನ, ಕಳ್ಳಭಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವೀರಣ್ಣಾ ಬಾಗೇವಾಡಿ,
ಡಿಸಿ, ಅಬಕಾರಿ ಇಲಾಖೆ, ಬೀದರ
ಶಶಿಕಾಂತ ಬಂಬುಳಗೆ