ಬೀದರ: ಸಾಂಸ್ಕೃತಿಕ ಪರಂಪರೆ ಹಾಗೂ ಸಾಹಿತ್ಯ ಚಟುವಟಿಕೆಗಳು ಉದ್ದೀಪನಗೊಳಿಸಲು ಸಂಘ-ಸಂಸ್ಥೆಗಳ ಸಹಕಾರ ಅಗತ್ಯ. ಮೈಸೂರಿನ ರಂಗಾಯಣ ಕಲಾವಿದರ ನಾಟಕ ಹೃದಯ ಮಿಡಿಯುವಂತಾಗಿದೆ. ನಾಟಕದಿಂದ ಸಂಸ್ಕೃತಿ ಜೊತೆಗೆ ನಮ್ಮ ನಡುವಳಿಕೆಯಲ್ಲಿ ಬದಲಾವಣೆ ತರಬಹುದಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ| ರಾಜೇಂದ್ರ ಯರನಾಳೆ ಹೇಳಿದರು.
ನಗರದ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂಚಾರಿ ರಂಗಾಯಣ ಮೈಸೂರು ಸಹಯೋಗದೊಂದಿಗೆ ಮೂರು ದಿನಗಳ ನಾಟಕ ಹಾಗೂ ಸಾಂಸ್ಕೃತಿಕ ಸಂಜೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ನಾಟಕದಲ್ಲಿ ಪಾಶ್ಚಾತ್ಯ ನಾಟಕಕ್ಕಿಂತ ಹೆಚ್ಚಿನ ಮೌಲ್ಯಗಳು ಅಡಗಿವೆ. ಗಾಂಧೀಜಿ ಸಹಿತ ಸತ್ಯ ಹರಿಶ್ಚಂದ್ರ ನಾಟಕ ನೋಡಿ ಪರಿವರ್ತನೆಯಾಗಿದ್ದು ಇತಿಹಾಸ ಎಂದರು.
ಸಾಹಸ ಕಾರ್ಯ: ರಂಗಾಯಣ ಸಂಚಾರಿ ಘಟಕದ ಯೋಗಾನಂದ ಮಾತನಾಡಿ, ರಂಗಾಯಣ 30 ವರ್ಷಗಳಿಂದ ಅನೇಕ ಸಾಮಾಜಿಕ ಹಾಗೂ ಸಮಾಜದ ಹಲವು ಏರುಪೇರುಗಳ ಚಿತ್ರಣದ ಬಗ್ಗೆ ನಾಟಕ ಮಾಡಿ ಬಂದಿದ್ದೇವೆ. ರಂಗಭೂಮಿ ಪ್ರದರ್ಶನ ಒಂದು ದೊಡ್ಡ ಸಾಹಸ ಕಾರ್ಯ. ಕಲಾವಿದರ ಕಲೆ ಪ್ರತಿ ಬಿಂಬಿಸುವ ಜೊತೆಗೆ ಸಮಾಜಕ್ಕೆ ಹೊಸ ಸಂದೇಶ ಸಾರುವ ಅನೇಕ ಕೆಲಸಗಳು ಇದರಲ್ಲಡಗಿವೆ. ನಾವು ಈಗಾಗಲೇ ಬಳ್ಳಾರಿ, ರಾಯಚೂರನಲ್ಲಿ ನಾಟಕ ಪ್ರದರ್ಶಿಸಿದ್ದು, ಬೀದರನಲ್ಲಿ ಮೂರು ದಿನಗಳ ನಾಟಕೋತ್ಸವ ಜರುಗಲಿದೆ ಎಂದರು.
ಲಿಂಗಯತ ಮಹಾಮಠದ ಶ್ರೀ ಅಕ್ಕ ಅನ್ನಪೂರ್ಣ ಸಾನ್ನಿಧ್ಯ ಮತ್ತು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ರವಿ ಮೂಲಗೆ, ವಾಸ್ತು ಶಿಲ್ಪ ಅಭಿಯಂತರ ಅಶೋಕ ಪಾಟೀಲ ಶಂಬೆಳ್ಳಿ, ಡಾ| ಸಿದ್ಧಾರೆಡ್ಡಿ ಫೌಂಡೇಶನ್ ಅಧ್ಯಕ್ಷೆ ಗುರಮ್ಮ ಸಿದ್ಧಾರೆಡ್ಡಿ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಪುಟ್ಟಪರ್ತಿ ಸಾಯಿಬಾಬ ಟ್ರಸ್ಟ್ ಅಧ್ಯಕ್ಷ ಡಾ| ಸುಜಾತಾ ಹೊಸಮನಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಬೆಳಗು ಟ್ರಸ್ಟ್ ಅಧ್ಯಕ್ಷ ಅನೀಲಕುಮಾರ ದೇಶಮುಖ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಮೇನಕಾ ಪಾಟೀಲ ಸ್ವಾಗತಿಸಿದರು, ಎಂ.ಎಸ್. ಮನೋಹರ ನಿರೂಪಿಸಿದರು, ಆನಂದ ಪಾಟೀಲ ವಂದಿಸಿದರು.