ಬೀದರ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜೂನ್ 18ರಂದು ನಡೆಯಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಸುರಕ್ಷತಾ ಕ್ರಮಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೋವಿಡ್ ಸೋಂಕು ಒಕ್ಕರಿಸಿದ್ದರಿಂದ ಮಾ. 19ಕ್ಕೆ ನಡೆಯಬೇಕಿದ್ದ ಇಂಗ್ಲಿಷ್ ಪರೀಕ್ಷೆಯನ್ನು ಅನಿವಾರ್ಯವಾಗಿ ಮುಂದೂಡಲಾಗಿತ್ತು. ಈಗಾಗಲೇ 5 ವಿಷಯಗಳ ಪರೀಕ್ಷೆಯನ್ನು ನಡೆಸಿರುವ ಪಿಯು ಇಲಾಖೆ ಈಗ ಬಾಕಿಯಿದ್ದ ಇಂಗ್ಲಿಷ್ ಪರೀಕ್ಷೆಯನ್ನು ಜೂ.18ಕ್ಕೆ ನಿಗದಿಪಡಿಸಿದೆ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 13,330 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 33 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಈ ಪೈಕಿ ಬೀದರ ನಗರದಲ್ಲೇ 13 ಕೇಂದ್ರಗಳಿವೆ. ಹುಮನಾಬಾದ 7, ಭಾಲ್ಕಿ, ಬಸವಕಲ್ಯಾಣದಲ್ಲಿ ತಲಾ 5 ಮತ್ತು ಔರಾದನಲ್ಲಿ 3 ಪರೀಕ್ಷಾ ಕೇಂದ್ರಗಳು ಸೇರಿವೆ. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 126 ಹೆಚ್ಚುವರಿ ಸೇರಿ ಒಟ್ಟಾರೆ 626 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದೊಡ್ಡ ಕೋಣೆಯಲ್ಲಿ 30ರ ಬದಲು 24 ಮಕ್ಕಳು, ಸಣ್ಣ ಕೋಣೆಯಲ್ಲಿ 18ರ ಬದಲು 12 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.
ಕೋವಿಡ್ ಸೋಂಕು ಹೆಚ್ಚುತ್ತಿರುವ ಕಾರಣ ಶಿಕ್ಷಣ ಇಲಾಖೆ ಸುರಕ್ಷತಾ ಕ್ರಮಕ್ಕೆ ಒತ್ತು ನೀಡಿದ್ದು, ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್ ಹಾಗೂ ಮಾಸ್ಕ್ವಿ ತರಣೆಗೆ ಕ್ರಮ ಕೈಗೊಂಡಿದೆ. ಪರೀಕ್ಷಾ ಕೇಂದ್ರದ ಹೊರಗೆ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು, ಅವರಲ್ಲಿ ಜ್ವರ ಲಕ್ಷಣ ಕಂಡು ಬಂದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ನಗರದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಮಾಡಿ ಶುಚಿಗೊಳಿಸಿದ್ದರೆ, ಜಿಲ್ಲೆಯ ಇನ್ನುಳಿದ ಕೇಂದ್ರಗಳಲ್ಲಿ ಆಯಾ ನಗರಸಭೆ ಮತ್ತು ಪುರಸಭೆ ಮೂಲಕ ಔಷಧ ಸಿಂಪರಣೆ ಕಾರ್ಯ ನಡೆಸಲಾಗಿದೆ.
ಮೂಲ ಕೇಂದ್ರದಲ್ಲೇ ಪರೀಕ್ಷೆ
ತಾಂತ್ರಿಕ ಸಮಸ್ಯೆಯಿಂದ ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಪರೀಕ್ಷಾ ಕೇಂದ್ರ ಬದಲಾಯಿಸಿಕೊಂಡಿದ್ದ ಮಕ್ಕಳು ಈಗ ಮೂಲ ಕೇಂದ್ರದಲ್ಲೇ ಪರೀಕ್ಷೆ ಎದುರಿಸಬೇಕು ಎಂದು ಪಿಯು ಇಲಾಖೆ ಆದೇಶಿಸಿದ್ದರಿಂದ ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ. ಲಾಕ್‌ಡೌನ್ ಮೊದಲು ಐದು ಪರೀಕ್ಷೆಗಳನ್ನು ಬರೆದಿರುವ ಕೇಂದ್ರದಲ್ಲೇ ಇಂಗ್ಲಿಷ್ ಪರೀಕ್ಷೆ ಎದುರಿಸಬೇಕಿದೆ. ಇಲಾಖೆ ತೀರ್ಮಾನದ ವಿರುದ್ಧ ವಿದ್ಯಾರ್ಥಿ- ಪಾಲಕರಿಂದ ಆಕ್ರೋಶ ವ್ಯಕ್ತವಾಗಿದೆ.
ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಜಾಗರೂಕತೆಯಿಂದ ನಡೆಸಲು ಪಿಯು ಇಲಾಖೆಯಿಂದ ಅಗತ್ಯ ಕ್ರಮ ವಹಿಸಿದ್ದು, ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆ ಬರೆಯಬೇಕು. ಪರೀಕ್ಷೆಗಾಗಿ 626 ಕೋಣೆ ಮೇಲ್ವಿಚಾರಕ, 32 ಮುಖ್ಯ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗಿದೆ.
ರಮೇಶ ಬೆಜಗಂ,
ಡಿಡಿಪಿಯು ಬೀದರ