Advertisement

ಅಂಧ-ಅನಾಥರ ಹೊಟ್ಟೆ ತಣಿಸುವ “ರೀಶೈನ್‌’

02:48 PM Dec 13, 2019 | |

ಶಶಿಕಾಂತ ಬಂಬುಳಗೆ
ಬೀದರ:
ಸಭೆ-ಸಮಾರಂಭಗಳಲ್ಲಿ ಯಥೇತ್ಛವಾಗಿ ವ್ಯರ್ಥವಾಗುವ ಆಹಾರ ಪದಾರ್ಥಕ್ಕೆ ಪಾತ್ರೆ ಒಡ್ಡುವ ಬೀದರನ “ರೀಶೈನ್‌’ ಸಂಸ್ಥೆ ಅನಾಥ ಮತ್ತು ಅಲೆಮಾರಿ ಜನರಿಗೆ ಹಂಚುವ ಮೂಲಕ ಹಸಿದ ಹೊಟ್ಟೆಗಳನ್ನು ತಣಿಸುತ್ತಿದೆ. ಯುವ ಸಮಾನ ಮನಸ್ಕರು ಸೇರಿಕೊಂಡು ಸಂಸ್ಥೆ ಹುಟ್ಟು ಹಾಕಿದ್ದು, ಹಸಿದವರಿಗೆ ಅನ್ನ ತಲುಪಿಸಿ ಸಾರ್ಥಕತೆ ಮೆರೆಯುತ್ತಿದ್ದಾರೆ.

Advertisement

ಶ್ರೀಮಂತಿಕೆ ಪ್ರದರ್ಶನದ ಸೋಗಿನಲ್ಲಿ ಅಗತ್ಯವಿಲ್ಲದಿದ್ದರೂ ಮದುವೆ ಸೇರಿದಂತೆ ಸಭೆ-ಸಮಾರಂಭಗಳಲ್ಲಿ ಅಡುಗೆ ಮಾಡಿ ಮಾಡಿಸಿ ಉಳಿದ ಆಹಾರ ಬೀದಿಗೆ ಚೆಲ್ಲುತ್ತಾರೆ. ಅನ್ನದ ಬೆಲೆ ಗೊತ್ತಿಲ್ಲದೇ ಅರ್ಧಂಬರ್ಧ ತಿಂದು ಎಸೆಯುತ್ತಾರೆ. ಹೀಗೆ ಹೆಚ್ಚಾಗಿ ಉಳಿಯುವ ಆಹಾರವನ್ನು ರೀಶೈನ್‌ ಸಂಸ್ಥೆಯವರು ಸಂಗ್ರಹಿಸಿ ಹಸಿವಿನಿಂದ ಬಳಲಿದವರಿಗೆ ಅನ್ನ ಕೊಟ್ಟು ಸಂಭ್ರಮ ಪಡುತ್ತಾರೆ.

ರೋಹನ್‌ ರವಿಕುಮಾರ ರೀಶೈನ್‌ ಸಂಸ್ಥೆಯ ಮುಖ್ಯಸ್ಥರಾಗಿದ್ದು, 8-10 ಜನ ಪದವೀಧರ ಯುವಕರಿದ್ದಾರೆ. ಅವರೆಲ್ಲರೂ ಉದ್ಯೋಗ-ವ್ಯಾಪಾರ ಮಾಡಿಕೊಂಡಿದ್ದಾರೆ. ಕಳೆದೆರಡು ವರ್ಷಗಳಿಂದ ರೋಹನ್‌, ಪುಟ್ಟರಾಜ ಯೇಶೆಪ್ಪ, ಕಾರ್ತಿಕ ಆಲೂರ್‌ ಮತ್ತು ಸ್ಪೀಫನ್‌ ಪೌಲ್‌ ಸೇರಿದಂತೆ ಸಂಸ್ಥೆ ಸದಸ್ಯರು ಬಿಡುವಿನ ಸಮಯದಲ್ಲಿ ಬಡವರ ಹೊಟ್ಟೆ ತುಂಬಿಸುವ ಮಹಾನ್‌ ಕಾರ್ಯದಲ್ಲಿ ತೊಡಗಿದ್ದಾರೆ. ತಿಂಗಳಲ್ಲಿ 15-20 ಬಾರಿ ಆಹಾರ ಸಂಗ್ರಹಿಸಿ ಹಂಚುತ್ತಾರೆ.

ಎಲ್ಲೆಲ್ಲಿ ಆಹಾರ ಸಂಗ್ರಹ?:ಮದುವೆ, ಜನ್ಮದಿನಾಚರಣೆ, ತೊಟ್ಟಿಲು, ವಿವಾಹ ವಾರ್ಷಿಕೋತ್ಸವ ಹೀಗೆ ಕಲ್ಯಾಣ ಮಂಟಪಗಳಲ್ಲಿ ನಡೆಯುವ ವಿವಿಧ ಸಮಾರಂಭಗಳಲ್ಲಿ ಆಹಾರ ಉಳಿದರೆ ಅಂಥವರು ರೀಶೈನ್‌ ಸಂಸ್ಥೆಗೆ ಸಂಪರ್ಕಿಸುತ್ತಾರೆ. ಮನೆಗಳಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಕೆಲ ಹೋಟೆಲ್‌ ಮಾಲೀಕರು ಸಹ ಮಾಹಿತಿ ನೀಡುತ್ತಾರೆ. ಸಂಸ್ಥೆ ಸದಸ್ಯರು ಅಲ್ಲಿಂದ ಆಟೋ ಮೂಲಕ ದೊಡ್ಡ ಪಾತ್ರೆಗಳಲ್ಲಿ ಆಹಾರ ತೆಗೆದುಕೊಂಡು ಹೋಗುತ್ತಾರೆ. ನಂತರ ಜನರಿಗೆ ಅನುಕೂಲವಾಗುವಂತೆ ಪ್ಯಾಕೆಟ್‌ಗಳನ್ನಾಗಿ ಮಾಡಿ, ಬಸ್‌-ರೈಲು ನಿಲ್ದಾಣದಲ್ಲಿನ ನಿರ್ಗತಿಕರು ಮತ್ತು ಅಲೆಮಾರಿ ಜನಾಂಗದವರಿಗೆ ಹಂಚುತ್ತಾರೆ.

ಆಸಕ್ತ ದಾನಿಗಳು ಮುಂದಾಗಲಿ:ರೀಶೈನ್‌ ಸಂಸ್ಥೆಗೆ ಸಂಗ್ರಹಿಸಿದ ಆಹಾರ ಹಸಿದವರಿಗೆ ಪೂರೈಸಲು ವಾಹನ ಕೊರತೆ ಇದೆ. ಕೈಯಿಂದ 300-500 ರೂ. ಖರ್ಚು ಮಾಡಿ ಆಟೋ, ಟ್ರಾಲಿ ಮೂಲಕ ಸಾಗಿಸುತ್ತಿದ್ದಾರೆ. ಸಂಸ್ಥೆ ಈ ಕುರಿತ ಮನವಿಗೆ ಯಾರೊಬ್ಬ ಶಾಸಕರು ಮತ್ತು ಸಂಸದರಿಂದ ಸ್ಪಂದನೆ ಸಿಕ್ಕಿಲ್ಲ. ಸಂಸ್ಥೆಯ ವಾಹನ ಇದ್ದಲ್ಲಿ ಇನ್ನೂ ಹೆಚ್ಚು ನಿರ್ಗತಿಕರಿಗೆ ಅನ್ನ ಉಣಿಸುವ ಸತ್ಕಾರ್ಯ ಆಗಬಹುದೆಂಬುದು ಸಂಸ್ಥೆಯ ಉದ್ದೇಶ. ಉಳಿದ ಅನ್ನ ಕೊಡಲು ಮತ್ತು ಸಹಾಯ ಹಸ್ತ ಮಾಡಲು ಇಚ್ಚಿಸುವ ಆಸಕ್ತ ದಾನಿಗಳು ರೋಹನ್‌ ರವಿಕುಮಾರ ಮೊ. 9066616858 ಅವರನ್ನು
ಸಂಪರ್ಕಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next