Advertisement

ಕೆಕೆಆರ್‌ಡಿಬಿ ಕಾಮಗಾರಿ ಮುಗಿಸಲು ಗಡುವು

11:34 AM Dec 08, 2019 | Naveen |

ಬೀದರ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಿಂದಿನ ಎಲ್ಲ ಕಾಮಗಾರಿಗಳನ್ನು ಬರುವ ಮಾರ್ಚ್‌ದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅನುಷ್ಠಾನಾ ಧಿಕಾರಿಗಳಿಗೆ ಗಡುವು ವಿಧಿಸಿದರು.

Advertisement

ನಗರದಲ್ಲಿ ಶನಿವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತಾಲೂಕುವಾರು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಾಮಗಾರಿಗಳ ಪ್ರಗತಿ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ ಎನ್ನುವ ದೂರುಗಳಿವೆ. ಈ ಬಗ್ಗೆ ತಾವು ಗಮನ ಹರಿಸಬೇಕು. ಅಂತಹ ಕೆಲಸಗಳನ್ನು ಚುರುಕುಗೊಳಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

2018-19 ಹಾಗೂ 2019-20ನೇ ಸಾಲಿನಲ್ಲಿ ಹುಮನಾಬಾದ್‌ ತಾಲೂಕಿನಲ್ಲಿ 91, ಬೀದರ ತಾಲೂಕಿನಲ್ಲಿ 102, ಭಾಲ್ಕಿ ತಾಲೂಕಿನಲ್ಲಿ 98, ಬಸವಕಲ್ಯಾಣ ತಾಲೂಕಿನಲ್ಲಿ 66, ಔರಾದ್‌ ತಾಲೂಕಿನಲ್ಲಿ 115 ಕಾಮಗಾರಿಗಳು ಇದುವರೆಗೆ ಏಕೆ ಆರಂಭವಾಗಿಲ್ಲ ಎಂದು ಸಚಿವರು ಪ್ರಶ್ನಿಸಿದರು.

ಕೆಕೆಆರ್‌ಡಿಬಿ ಕಾಮಗಾರಿಗಳ ಅನುಷ್ಠಾನದ ಪ್ರಗತಿಯಲ್ಲಿ ಪ್ರಸ್ತುತ ಮಾಹೆಯಲ್ಲಿ ಬೀದರ ಜಿಲ್ಲೆಯು ಈ ಭಾಗದ ಆರು ಜಿಲ್ಲೆಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ. ಕೆಕೆಆರ್‌ಡಿಬಿ ಅನುದಾನದಡಿ 2013ರಿಂದ 2019-20ನೇ ಸಾಲಿನ ಇಲ್ಲಿವರೆಗೆ ಜಿಲ್ಲೆಯಲ್ಲಿ ಒಟ್ಟು 2,244 ಕಾಮಗಾರಿಗಳು ಮಂಜೂರಾಗಿದ್ದು, ಈ ಪೈಕಿ 1,422 ಪೂರ್ಣಗೊಂಡಿವೆ. 350 ಪ್ರಗತಿಯಲ್ಲಿದ್ದು, ಇನ್ನು 472 ಕಾಮಗಾರಿಗಳನ್ನು ಆರಂಭಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಎಚ್‌.ಆರ್‌.ಮಹಾದೇವ್‌ ಅವರು ಸಭೆಗೆ ಮಾಹಿತಿ ನೀಡಿದರು.

Advertisement

ಹಳೆಯ ಬಹುತೇಕ ಕಾಮಗಾರಿಗಳೆಲ್ಲವನ್ನು ಪೂರ್ಣಗೊಳಿಸಲಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳಿಂದಾಗಿ 2017-18ನೇ ಸಾಲಿನಲ್ಲಿನ ಇನ್ನೂ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. 2018-19 ಹಾಗೂ 2019-20ನೇ ಸಾಲಿನಲ್ಲಿನ ಕಾಮಗಾರಿಗಳು ಕೆಲವು ಪ್ರಗತಿಯಲ್ಲಿವೆ. ಇನ್ನೂ ಆರಂಭವಾಗದ ಕಾಮಗಾರಿಗಳು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿವೆ. ಮಂಡಳಿಯ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ಮಂಡಳಿಯಿಂದ ಸಮಯಗುರಿ ನೀಡಲಾಗಿದೆ. ಅದರಂತೆ ಹೊಸ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ, ಚಾಲ್ತಿಯಲ್ಲಿರುವ ಕೆಲಸಗಳನ್ನು ನಿಗದಿತ ಅವಧಿಯೊಳಗಾಗಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.

2013ರಿಂದ ಇಲ್ಲಿವರೆಗೆ ಔರಾದ ತಾಲೂಕಿನಲ್ಲಿ 375 ಕಾಮಗಾರಿಗಳ ಪೈಕಿ 195 ಪೂರ್ಣಗೊಂಡಿವೆ. 65 ಪ್ರಗತಿ ಹಂತದಲ್ಲಿದ್ದು, 115 ಕೆಲಸಗಳನ್ನು ಆರಂಭಿಸಬೇಕಿದೆ. ಬಸವಕಲ್ಯಾಣ ತಾಲೂಕಿನಲ್ಲಿ 606 ಕಾಮಗಾರಿಗಳ ಪೈಕಿ 434 ಪೂರ್ಣಗೊಂಡಿದ್ದು, 106 ಪ್ರಗತಿ ಹಂತದಲ್ಲಿವೆ. ಇನ್ನೂ 66 ಆರಂಭಿಸಬೇಕಿದೆ. ಭಾಲ್ಕಿ ತಾಲೂಕಿನಲ್ಲಿ 323 ಕೆಲಸಗಳ ಪೈಕಿ 196 ಪೂರ್ಣಗೊಂಡಿದ್ದು, 29 ಪ್ರಗತಿಯಲ್ಲಿವೆ. 98 ಆರಂಭಿಸಬೇಕಿದೆ. ಬೀದರ ತಾಲೂಕಿನಲ್ಲಿ 392 ಕಾಮಗಾರಿಗಳ ಪೈಕಿ 211 ಪೂರ್ಣಗೊಂಡಿದ್ದು,79 ಪ್ರಗತಿಯಲ್ಲಿವೆ. 102 ಆರಂಭಿಸಬೇಕಿದೆ.

ಹುಮನಾಬಾದ ತಾಲೂಕಿನಲ್ಲಿ 546 ಕಾಮಗಾರಿಗಳ ಪೈಕಿ 386 ಪೂರ್ಣಗೊಂಡಿವೆ. 69 ಪ್ರಗತಿ ಹಂತದಲ್ಲಿದ್ದು, 91 ಆರಂಭವಾಗಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಸದ ಭಗವಂತ ಖೂಬಾ, ಶಾಸಕರಾದ ರಹೀಮ್‌ ಖಾನ್‌, ರಾಜಶೇಖರ ಪಾಟೀಲ, ಬಿ.ನಾರಾಯಣರಾವ್‌, ಎಂಎಲ್‌ಸಿ ಅರವಿಂದಕುಮಾರ ಅರಳಿ, ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next