Advertisement

ಹೋಳಿ ಸಾಮರಸ್ಯದ ದ್ಯೋತಕ

12:17 PM Mar 09, 2020 | Naveen |

ಬೀದರ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಹಬ್ಬಗಳು ತನ್ನದೇಯಾದ ವೈಶಿಷ್ಟ್ಯ  ಹೊಂದಿವೆ. ಅದರಲ್ಲಿ ಸ್ನೇಹ ಮತ್ತು ಸಾಮರಸ್ಯದ ದ್ಯೋತಕವಾದ ಹೋಳಿ ಹಬ್ಬ ಕೂಡ ಒಂದು.

Advertisement

ಮುಂಬೈ ಕರ್ನಾಟಕ ಭಾಗದಲ್ಲಿ ರತಿಕಾಮಣ್ಣರನ್ನ ಕೂರಿಸಿ ಪೂಜಿಸುವುದು ಹೋಳಿ ಹಬ್ಬದ ಪ್ರಧಾನ ಅಂಶವಾದರೆ, ಗಡಿ ಜಿಲ್ಲೆ ಬೀದರನಲ್ಲಿ ಕಾಮದಹನದ ಜೊತೆ ಸಾಂಸ್ಕೃತಿಕ ಸೊಗಡು ಮೇಳೈಸುತ್ತದೆ.

ಹಬ್ಬಗಳಲ್ಲೇ ಹೋಳಿಯ ಸಡಗರ, ಸಂಭ್ರಮವೇ ವಿಶೇಷ. ಪ್ರಾದೇಶಿಕ ವೈವಿಧ್ಯತೆಗೆ ತಕ್ಕಂತೆ, ಹೋಳಿಹಬ್ಬ ವಿಭಿನ್ನ ಸ್ವರೂಪದಲ್ಲಿ ಆಚರಿಸಲ್ಪಡುತ್ತದೆ. ನಗರ, ಪಟ್ಟಣ ಪ್ರದೇಶದಲ್ಲಿ ಯುವ ಸಮೂಹ ಬಣ್ಣದೋಕುಳಿಯಲ್ಲಿ ಮಿಂದೆದ್ದರೆ, ಗ್ರಾಮೀಣ ಭಾಗದಲ್ಲಿ ಇಂದಿಗೂ ಹಬ್ಬದ ಜಾನಪದ ಪರಂಪರೆ ಉಳಿಸಿಕೊಂಡು ಬರಲಾಗುತ್ತಿದೆ. ಹುಣ್ಣಿಮೆಯಂದು ಕಾಮನ ದಹನದ ಜತೆಗೆ ರಾತ್ರಿಯಿಡಿ ಕೋಲಾಟ ಆಡಿ ಸಂಭ್ರಮಿಸುತ್ತಾರೆ. ಔರಾದ ಮತ್ತು ಭಾಲ್ಕಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಭಜನೆ ಗಾಯನದ ಜತೆಗೆ ಕೋಲಾಟ ಆಡಲಾಗುತ್ತದೆ.

ಕೋಲಾಟ, ಹಾಸ್ಯ ರೂಪಕ: ಗ್ರಾಮಗಳಲ್ಲಿ ದೊಡ್ಡ ಶಾಮಿಯಾನ ಹಾಕಿ, ಮಧ್ಯದಲ್ಲಿ ಸಂಗೀತಗಾರನನ್ನು ಕೂಡಿಸಿ ಯುವಕರಿಂದ ವೃದ್ಧರ ವರೆಗೆ ಎಲ್ಲರೂ ಕೋಲಾಟದ ಮೂಲಕ ಸಂಭ್ರಮ ಪಡುತ್ತಾರೆ. ಜಾನಪದ, ಹೋಳಿ ಹಾಡುಗಳನ್ನು ಹಾಡುತ್ತಿದ್ದರೆ ಅದರ ತಾಳಕ್ಕೆ ತಕ್ಕಂತೆ ಕೋಲಾಟಗಾರರು ಹೆಜ್ಜೆ ಹಾಕುತ್ತಾರೆ.

ಮಧ್ಯ ಮಧ್ಯದಲ್ಲಿ ಹಾಸ್ಯ ಭರಿತ ಸಣ್ಣ ರೂಪಕಗಳನ್ನು ಪ್ರದರ್ಶಿಸಿ ನಗೆಯ ಹೊನಲು ಹರಿಸುವುದು ಕಂಡುಬರುತ್ತದೆ. ಬದಲಾದ ಕಾಲ ಘಟ್ಟದಲ್ಲಿ ಕೋಲಾಟ ಕಡಿಮೆಯಾದರೂ ಅಲ್ಲಲ್ಲಿ ಇಂದಿಗೂ ಜೀವಂತವಾಗಿದೆ. ಓಕುಳಿಯಾದ ಮುನ್ನಾ ದಿನ ರಾತ್ರಿ ಮಡಿಕೆಯಿಂದ ಮಾಡಿದ ಮನ್ಮಥ (ಕಾಮಣ್ಣ) ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು, ದೊಡ್ಡ ಕಟ್ಟಿಗೆ ರಾಶಿ ಮೇಲೆ ಇಟ್ಟು ಸುಡಲಾಗುತ್ತದೆ. ನಂತರ ಬೊಬ್ಬೆಗಳ ನಡುವೆ ಬೈಗುಳಗಳು ಎಲ್ಲೆಡೆ ಪ್ರತಿಧ್ವನಿಸುತ್ತವೆ.

Advertisement

ನಗರ ಪ್ರದೇಶಗಳಲ್ಲಿ ಮಾತ್ರ ಹೋಳಿ ಹಬ್ಬದ ಬಣ್ಣದ ಆಟಕ್ಕೆ ಪ್ರಾಧ್ಯಾನ್ಯತೆ ಇದೆ. ಯುವ ಸಮೂಹ ಡಿಜೆ ಹಾಡುಗಳಿಗೆ ಕುಣಿಯುತ್ತ ಮೋಜು ಜತೆಗೆ ಬಣ್ಣ ಎರಚಾಡಿ ಆನಂದಿಸುತ್ತಾರೆ. ಕೊನೆಯಲ್ಲಿ “ದಹಿ- ಹಂಡೆ’ ಒಡೆಯಲು ಸ್ಪರ್ಧೆಗಿಳಿಯುವುದು ಆಕರ್ಷಣೀಯವಾಗಿರುತ್ತದೆ.

ತಾಂಡಾಗಳಲ್ಲಿ ಬಂಜಾರಾ ನೃತ್ಯ: ಇನ್ನೂ ಜಿಲ್ಲೆಯ ಗಡಿ ಭಾಗದ ವಿವಿಧ ತಾಂಡಾಗಳಲ್ಲಿ ಬಂಜಾರಾ ಸಮುದಾಯದ ಮಹಿಳೆಯರು ಬಣ್ಣ ಎರಚುತ್ತ, ಸಾಂಪ್ರದಾಯಿಕ ವೇಷ ಭೂಷಣದಲ್ಲಿ ಭುಲಾಯಿ ಹಾಡು (ಬಂಜಾರಾ ಭಾಷೆ) ಗಳನ್ನು ಹಾಡುತ್ತಾ, ನೃತ್ಯವನ್ನು ಮಾಡುತ್ತ ಹೋಳಿ ಹಬ್ಬ ಆಚರಿಸುವುದು ಮತ್ತೂಂದು ವಿಶೇಷ.

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next