ಬೀದರ: ಕಳೆದೆರಡು ದಿನಗಳಿಂದ ಆರ್ಭಟಿಸುತ್ತಿರುವ ಮಳೆಗೆ ಗಡಿ ಜಿಲ್ಲೆ ಬೀದರ ಮತ್ತೆ ತತ್ತರಿಸಿದೆ. 24 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ತಾಲೂಕುಗಳು ನಲುಗಿ ಹೋಗಿದ್ದು, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ನೀರು ಪಾಲಾಗಿದ್ದರೆ, ಕೆಲವೆಡೆ ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತವಾಗಿವೆ. ಮನೆಗಳು ಭಾಗಶಃ ಕುಸಿದು ಜನರ ಬದುಕನ್ನು ಅತಂತ್ರಗೊಳಿಸಿದೆ.
ಜಿಲ್ಲೆಯಲ್ಲಿ ರವಿವಾರ ಸಾಯಂಕಾಲದಿಂದ ಸೋಮವಾರ ಬೆಳಗ್ಗೆವರೆಗೆ 13 ಮಿಮೀ. (ವಾಡಿಕೆ ಮಳೆ 3 ಮಿಮೀ) ಮಳೆ ಬಿದ್ದಿದೆ. ಹುಮನಾಬಾದ್ ಮತ್ತು ಚಿಟಗುಪ್ಪ ತಾಲೂಕಿನಲ್ಲಿ ಅತಿ ಹೆಚ್ಚು 18 ಮಿಮೀ. (ವಾಡಿಕೆ 5ಮಿಮೀ) ಮಳೆ ಬಿದ್ದಿದ್ದರೆ ಹುಲಸೂರು ತಾಲೂಕಿನಲ್ಲಿ ಕಡಿಮೆ 7 ಮಿಮೀ (ವಾಡಿಕೆ 2 ಮಿಮೀ) ಆಗಿದೆ. ಬೀದರ 15 ಮಿಮೀ (ವಾಡಿಕೆ 2 ಮಿಮೀ), ಬಸವಕಲ್ಯಾಣ 14 ಮಿಮೀ. (ವಾಡಿಕೆ 4ಮಿಮೀ.), ಭಾಲ್ಕಿ 11 ಮಿಮೀ (ವಾಡಿಕೆ 2 ಮಿಮೀ) ಮತ್ತು ಔರಾದ 9 ಮಿಮೀ (ವಾಡಿಕೆ 2 ಮಿಮೀ) ಮಳೆ ಸುರಿದಿದೆ. ಸೋಮವಾರ ಮಧ್ಯಾಹ್ನ ಸಹ ಭಾರೀ ಮಳೆ ಸುರಿದು ಪ್ರವಾಹದ ಸ್ಥಿತಿ ತಂದೊಡ್ಡಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 169 ಮಿಮೀ ವಾಡಿಕೆ ಮಳೆಗಿಂತ 275 ಮಿಮೀ.ನಷ್ಟು ಮಳೆ ಬಂದಿದೆ.
ಕಳೆದೆರಡು ವಾರಗಳ ಹಿಂದೆಯಷ್ಟೇ ವರುಣನಾರ್ಭಟಕ್ಕೆ ಒಂದೂವರೆ ಲಕ್ಷ ಹೆಕ್ಟೇರ್ ಬೆಳೆ ಮಣ್ಣು ಪಾಲಾಗಿದ್ದು, ಈಗ ಮತ್ತೆ ಮಳೆ ಅವಾಂತರದಿಂದ ಜಮೀನುಗಳಲ್ಲಿ ನೀರುನಿಂತು ಕೆಲವೆಡೆ ಕಟಾವಾಗದೇ ಉಳಿದಿರುವ ಸೋಯಾ ಸಂಪೂರ್ಣ ಹಾನಿಯಾಗಿದೆ. ತೊಗರಿ ಮತ್ತು ಕಬ್ಬು ಸಹ ನೆಲಸಮಗೊಂಡಿದ್ದು, ರೈತರನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಜಿಲ್ಲೆಯ ಅನೇಕ ಕೆರೆಗಳು ಅಪಾಯದ ಮಟ್ಟ ಮೀರಿ ತುಂಬಿರುವುದರಿಂದ ಸುತ್ತಲಿನ ಜಮೀನುಗಳಿಗೆ ನೀರು ನಿಂತು ಬೆಳೆಗಳಿಗೆ ಧಕ್ಕೆ ತಂದಿದೆ.
ಬಸವಕಲ್ಯಾಣ ತಾಲೂಕಿನಲ್ಲಿ ಮಳೆ ಅಬ್ಬರಕ್ಕೆ ಸರ್ ಜವಳಗಾ ಕ್ರಾಸ್ ಮತ್ತು ಚಿತಕೋಟಾ-ಲಾಡವಂತಿ ಸೇತುವೆ ಮೇಲಿಂದ ನೀರು ಹರಿದಿದ್ದರಿಂದ ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಳೆಯಿಂದ ಗ್ರಾಮೀಣ ಭಾಗ ಮಾತ್ರವಲ್ಲ ಬೀದರ ನಗರ ಸೇರಿ ಪಟ್ಟಣಗಳಲ್ಲಿ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಸೋಮವಾರ ಮಧ್ಯಾಹ್ನ ಎರಡು ಗಂಟೆಗಳ ಕಾಲ ಮಳೆ ಆರ್ಭಟದಿಂದ ತಗ್ಗು ಪ್ರದೇಶದ ಅಂಗಡಿ ಮುಂಗಟ್ಟು, ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿತ್ತು.
ಮೈದುಂಬಿಕೊಂಡ ಕಾರಂಜಾ : ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯ ಸಹ ಮೈದುಂಬಿಕೊಂಡಿದ್ದು, 4.591 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ವರ್ಷಧಾರೆಯಿಂದ 7.691 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 4.966 ಟಿಎಂಸಿ ನೀರು ಹರಿದು ಬಂದಿದೆ. ಮಾಂಜ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ ನದಿ ಪಾತ್ರದ ಜಮೀನುಗಳಲ್ಲೂ ನೀರು ಸಂಗ್ರಹವಾಗಿ ಬೆಳೆಗಳು ಸುಟ್ಟು ಹೋಗಿದ್ದು, ಗ್ರಾಮಸ್ಥರಲ್ಲಿ ಈಗ ನೆರೆ ಆತಂಕ ಶುರುವಾಗಿದೆ.
ಚುಳಕಿನಾಲಾದಲ್ಲಿ ಗರಿಷ್ಠ ಮಟ್ಟ : ಇನ್ನು 0.938 ಟಿಎಂಸಿ ಅಡಿ ಸಾಮರ್ಥ್ಯದ ಬಸವಕಲ್ಯಾಣ ಸಮೀಪದ ಚುಳಕಿನಾಲಾ ಜಲಾಶಯದಲ್ಲಿ ಸಹ ಗರಿಷ್ಠ ನೀರಿನ ಮಟ್ಟ ತಲುಪಿದ್ದು, ಒಳ ಹರಿವು ಹೆಚ್ಚಳ ಕಾರಣ ಎರಡು ಗೇಟ್‌ಗಳ ಮೂಲಕ 195 ಕ್ಯೂಸೆಕ್ ನೀರು ನಾಲಾಗೆ ಬಿಡಲಾಗಿದೆ. ನದಿ ತೀರದ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ಜಾನುವಾರುಗಳನ್ನು ನಾಲಾ ತೀರದತ್ತ ಬಿಡದಂತೆ ಜಿಲ್ಲಾಡಳಿತ ಕೋರಿದೆ.