ಬೀದರ: ಜೀವನ ಬಹಳ ಸರಳ ಇದೆ. ಅದನ್ನು ಜಟಿಲ ಮಾಡಿಕೊಳ್ಳದಿರಿ. ಸರಳ ಜೀವನ ನಡೆಸಿ ಎಂದು ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಡಾ| ಬಸವಲಿಂಗ ಅವಧೂತರು ಕಿವಿಮಾತು ಹೇಳಿದರು.
ಔರಾದ ತಾಲೂಕಿನ ಗಡಿಕುಶನೂರು ಗ್ರಾಮದ ಹನುಮಾನ ಮಂದಿರದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಬಸವಾದಿ ಶರಣರು ಅತ್ಯಂತ ಸರಳವಾಗಿ ಬದುಕಿದರು. ನುಡಿದಂತೆ ನಡೆದು ತೋರಿದರು.
ಅವರ ತತ್ವಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಧರ್ಮ ಗ್ರಂಥಗಳನ್ನು ಓದಿ, ಅರ್ಥೈಸಿಕೊಳ್ಳಬೇಕು. ಮಹಾ ಪುರುಷರ ಮಾರ್ಗದಲ್ಲಿ ಸಾಗಬೇಕು. ಪಾಲಕರ ಸೇವೆ ಮಾಡಬೇಕು. ನೆರೆ ಹೊರೆಯವರೊಂದಿಗೆ ಸೌಹಾರ್ದ ಸಂಬಂಧ ಬೆಳೆಸಿಕೊಳ್ಳಬೇಕು. ಅಂದಾಗ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಚಂದ್ರಕಾಂತ ಮಸಾನಿ, ಡಾ| ಬಸವಲಿಂಗ ಅವಧೂತರು ಈ ಭಾಗದ ಜನರಿಗೆ ಸುಂದರ ಬದುಕಿನ ಸೂತ್ರಗಳನ್ನು ಹೇಳಿಕೊಡುತ್ತಿದ್ದಾರೆ. ಧಾರ್ಮಿಕ ಜಾಗೃತಿ ಮೂಡಿಸುತ್ತಿದ್ದಾರೆ. ಹಿಂದೆ ಗುರು ಇದ್ದರೆ
ಎಂಥ ಗುರಿಯನ್ನಾದರೂ ಸಾಧಿಸಬಹುದು ಎಂದು ಹೇಳಿದರು.
ತುಮಕೂರಿನ ಸಿದ್ಧಗಂಗಾ ಮಠದ ಸಂಘಸಿರಿ ಪ್ರಶಸ್ತಿ ಪುರಸ್ಕೃತ ದೇವೇಂದ್ರ ಕರಂಜೆ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಬೊಮ್ಮಗೊಂಡೇಶ್ವರ ವೃತ್ತದಿಂದ ಹನುಮಾನ ಮಂದಿರವರೆಗೆ ಡಾ| ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ಜರುಗಿತು. ಕುಂಭ ಕಳಸ ಹೊತ್ತ ಮಹಿಳೆಯರು, ಬ್ಯಾಂಡ್ ಬಾಜಾ, ಕೋಲಾಟ, ಯುವಕರ ನರ್ತನ ಮೆರವಣಿಗೆ ಮೆರುಗು ಹೆಚ್ಚಿಸಿದವು.
ಪ್ರಮುಖರಾದ ಸಂಜುಕುಮಾರ ಬುಕ್ಕಾ, ಶಿವರಾಜ ಬೋಚರೆ, ಬಸಗೊಂಡಾ ಸಂಗಮೆ, ನಿರಂಜಪ್ಪ ನಮೋಶ, ಬಸವರಾಜ ಹೊಸದೊಡ್ಡಿ, ಮಲ್ಲಗೊಂಡ ರೇವಗೊಂಡೆ, ಚನ್ನಬಸವ ಪಾಟೀಲ, ರಾಜಕುಮಾರ ಎಡ್ಡೆ, ಲೋಕೇಶ ಸೋಮಾ, ಗೋರಕ ಕುಂಬಾರ, ಸೋಮನಾಥ ಮಾಶೆಟ್ಟಿ, ಸಂಗಮೇಶ ಮಡಿವಾಳ, ಸಂಜೀವಕುಮಾರ ಎಮ್ಮೆ, ಮಾರುತಿ ಕುಂಬಾರ, ಪ್ರಭು ಟೊಣಪೆ, ಲಕ್ಷ್ಮಣ ಖಪಲೆ ಮತ್ತಿತರರು ಪಾಲ್ಗೊಂಡಿದ್ದರು.