Advertisement

ಬೀದರನಲ್ಲಿ ಕೋವಿಡ್ ಗೆ ಮತ್ತೊಂದು ಬಲಿ

12:31 PM Jun 18, 2020 | Naveen |

ಬೀದರ: ಮಹಾಮಾರಿ ಕೋವಿಡ್  ನಿಂದ ಬೀದರ ಜಿಲ್ಲೆಯಲ್ಲಿ ಮರಣ ಮೃದಂಗ ಮುಂದುವರಿದಿದ್ದು, ಬುಧವಾರ ಸೋಂಕಿನಿಂದ ಬಳಲುತ್ತಿದ್ದ ಯುವಕನೊಬ್ಬ ಮೃತಪಟ್ಟಿದ್ದಾನೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

Advertisement

ಇನ್ನೊಂದೆಡೆ ವೈದ್ಯ ಸೇರಿ 12 ಜನರಲ್ಲಿ ಪಾಸಿಟಿವ್‌ ಪತ್ತೆಯಾಗಿದ್ದು, ಈಗ ಸೋಂಕಿತರ ಸಂಖ್ಯೆ 395ಕ್ಕೆ ತಲುಪಿದೆ. ಮಂಗಳವಾರವಷ್ಟೇ ವ್ಯಕ್ತಿ ಸಾವಿಗೆ ಕಾರಣವಾಗಿರುವ ಕೋವಿಡ್  ಮತ್ತೊಂದು ಬಲಿ ಪಡೆದಿದೆ. ತಾಲೂಕಿನ ಮಲ್ಕಾಪುರದ 26 ವರ್ಷದ ಯುವಕ (ಪಿ-7695) ಜೂ. 5ರಂದು ಜ್ವರ ಮತ್ತು ಊಟ ಸೇರದ ಹಿನ್ನೆಲೆಯಲ್ಲಿ ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಕೋವಿಡ್  ಒಕ್ಕರಿಸಿದೆ.

ಜೂ. 15ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಬುಧವಾರ ಅವರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಮೃತರ ಸೋಂಕಿನ ಸಂಪರ್ಕ ಇನ್ನೂ ಪತ್ತೆ ಹಚ್ಚಬೇಕಾಗಿದೆ. ರಾಜ್ಯದಲ್ಲಿ ಕೋವಿಡ್  ಗೆ ಮೃತಪಟ್ಟವರ ಸಂಖ್ಯೆಯಲ್ಲಿ ಬೀದರ ಮೂರನೇ ಸ್ಥಾನಕ್ಕೆ ತಲುಪಿದೆ. ಬೀದರನ ಓಲ್ಡ್‌ ಸಿಟಿಯ 82 ವರ್ಷದ (ಪಿ-590) ವ್ಯಕ್ತಿ ಕೊರೊನಾಗೆ ಮೊದಲ ಬಲಿ ಆಗಿದ್ದರು. ನಂತರ ಚಿಟಗುಪ್ಪಾದ 50 ವರ್ಷದ (ಪಿ-1041), ಬೀದರ ವಿದ್ಯಾನಗರದ 49 ವರ್ಷದ (ಪಿ-1712), ಫಾತ್ಮಾಪುರದ 47 ವರ್ಷದ ಮಹಿಳೆ (ಪಿ-2783), ಚಿಟಗುಪ್ಪದ 75 ವರ್ಷದ ವ್ಯಕ್ತಿ (ಪಿ-2965), ಬೀದರ ಗವಾನ್‌ ಚೌಕ್‌ನ 59 ವರ್ಷದ ಮಹಿಳೆ (ಪಿ-1950) ಹಾಗೂ ಬೀದರ ಶಹಾಗಂಜ್‌ನ 49 ವರ್ಷದ ವ್ಯಕ್ತಿ (ಪಿ-7524) ಸೋಂಕಿನಿಂದ ಮೃತಪಟ್ಟಿದ್ದು, ಈಗ 8ನೇ ಸಾವು ಸಂಭವಿಸಿದಂತಾಗಿದೆ.

ಇನ್ನೂ ಜಿಲ್ಲೆಯಲ್ಲಿ ಬುಧವಾರ ಪತ್ತೆಯಾಗಿರುವ 12 ಹೊಸ ಪಾಸಿಟಿವ್‌ ಪ್ರಕರಣಗಳಲ್ಲಿ 15 ವರ್ಷದೊಳಗಿನ 5 ಮಕ್ಕಳು ಸೇರಿರುವುದು ತೀವ್ರ ಆಘಾತವನ್ನುಂಟು ಮಾಡಿದೆ. ಅದರಲ್ಲಿ ಒಂದು ವರ್ಷದ ಮಗು ಸಹ ಸೇರಿದೆ. ಖೇಣಿ ರಂಜೋಳ್‌ ಗ್ರಾಮದ ವೈದ್ಯರಲ್ಲಿಯೂ ಕೋವಿಡ್  ಸೋಂಕು ಪತ್ತೆಯಾಗಿದೆ. ತೆಲಂಗಾಣ ಗಡಿಯ ಭಂಗೂರ ಚೆಕ್‌ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಮತ್ತು ಇವರಲ್ಲಿ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿಯಲ್ಲಿ ಅವರ ಸಂಪರ್ಕಕ್ಕೆ ಒಳಗಾದ 33 ಜನ ಪೊಲೀಸ್‌ ಸಿಬ್ಬಂದಿ ಹಾಗೂ 13 ಹೋಂಗಾರ್ಡ್‌ಗಳನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ ಎಂಬ ಮಾಹಿತಿ ಇದೆ.

ಜಿಲ್ಲೆಯಲ್ಲಿ ಔರಾದ ತಾಲೂಕಿನಲ್ಲಿ ಅತಿ ಹೆಚ್ಚು 5 ಪ್ರಕರಣಗಳು ವರದಿಯಾಗಿವೆ. ತಾಲೂಕಿನ ಬೆಳಕುಣಿ 2, ಬಾಚೆಪಳ್ಳಿ, ಸಂತಪುರ ಮತ್ತು ಮಸ್ಕಲ್‌ನಲ್ಲಿ ತಲಾ ಒಂದು ಸೇರಿ ಒಟ್ಟು 5 ಕೇಸ್‌ ಗಳು, ಕಮಲನಗರ ತಾಲೂಕಿನ ಬಸವನಾಳ ಮತ್ತು ಗಂಗನಬೀಡ ತಾಂಡಾದಲ್ಲಿ ತಲಾ 2 ಕೇಸ್‌ ಹಾಗೂ ಬೀದರ ತಾಲೂಕಿನ ಖೇಣಿ ರಂಜೋಳ, ಬಗದಲ್‌ ತಾಂಡಾದಲ್ಲಿ ತಲಾ 1 ಕೇಸ್‌ ಸೇರಿ 2 ಕೇಸ್‌ಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 395ಕ್ಕೆ ತಲುಪಿದಂತಾಗಿದೆ. 8 ಜನ ಸಾವನ್ನಪ್ಪಿದ್ದರೆ, 239 ಮಂದಿ ಡಿಸಾcರ್ಜ್‌ ಆಗಿದ್ದು, ಇನ್ನೂ 148 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next