ಬೀದರ: ಬ್ರಿಮ್ಸ್ ಆಸ್ಪತ್ರೆಯ ಇಬ್ಬರು ಆಯಾಗಳಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ಡಿ ದರ್ಜೆ ಮಹಿಳಾ ನೌಕರರು (ನಾನ್ ಕ್ಲಿನಿಕಲ್) ಸೂಕ್ತ ಸೌಲಭ್ಯಗಳು ಕಲ್ಪಿಸುತ್ತಿಲ್ಲ ಎಂದು ಆರೋಪಿಸಿ ಮಂಗಳವಾರ ಬ್ರಿಮ್ಸ್ ಅವರಣದಲ್ಲಿ ಕಣ್ಣೀರಿಡುತ್ತ ಗೋಳು ತೋಡಿಕೊಂಡರು.
ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟಿರುವ ವೃದ್ಧನಲ್ಲಿ ಕೋವಿಡ್ ಸೋಂಕು ಇರುವುದು ದೃಡಪಟ್ಟಿತ್ತು. ನಂತರ ಆ ವೃದ್ಧ ಚಿಕಿತ್ಸೆ ಪಡೆಯುವ ವೇಳೆ ಆಸ್ಪತ್ರೆಯ ಇಬ್ಬರು ಡಿ ಗ್ರೂಪ್ ನೌಕರರಲ್ಲಿಯೂ ಸೋಂಕು ಹರಡಿದೆ. ಆಸ್ಪತ್ರೆಯಲ್ಲಿ ತಮಗೆ ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್ ನೀಡುತ್ತಿಲ್ಲ. ಕ್ವಾರಂಟೈನ್‌ಗೆ ಸೂಕ್ತ ವ್ಯವಸ್ಥೆಯಿಲ್ಲ ಎನ್ನುವುದು ಸೇರಿದಂತೆ ತಮ್ಮ ಸಮಸ್ಯೆಗಳ ಕುರಿತು ಗೋಳು ತೋಡಿಕೊಂಡರು. ಇಬ್ಬರು ಆಯಾಗಳಿಗೆ ಈಗಾಗಲೇ ಕೊರೊನಾ ಪಾಸಿಟಿವ್ ಬಂದಿದೆ. ಅವರಿಗೂ ಸೂಕ್ತ ವ್ಯವಸ್ಥೆ ಇಲ್ಲ. ಈ ಬಗ್ಗೆ ಕೇಳಿದರೆ ಕೆಲಸ ಬಿಟ್ಟು ಮನೆಗೆ ಹೋಗಿ ಎಂದು ಹೆದರಿಸುತ್ತಿದ್ದಾರೆ ಎಂದು ಕಣ್ಣೀರಿಟ್ಟರು.
ಕೋವಿಡ್ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ವೈದ್ಯರು, ಮತ್ತಿತರ ಸಿಬ್ಬಂದಿಯನ್ನು ಹೋಟೆಲ್, ಲಾಡ್ಜ್ಗಳಲ್ಲಿ ಇಟ್ಟಿದ್ದಾರೆ. ಆದರೆ, ಡಿ-ದರ್ಜೆಯ ನಮಗೆ ಆಸ್ಪತ್ರೆ ಕೋಣೆಯೊಂದರಲ್ಲಿ ಪ್ಲಾಸ್ಟಿಕ್ ಚೀಲ ಹಾಸಿಕೊಂಡು ಮಲಗುವ ದುಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಡಿ-ದರ್ಜೆ ನೌಕರರಿಗೆ (ನಾನ್ ಕ್ಲಿನಿಕಲ್) ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕಾಲ ಕಾಲಕ್ಕೆ ಸಂಬಳ, ಉದ್ಯೋಗ ಸುರಕ್ಷೆ ನೀಡಬೇಕು. ಅವರಿಗೆ ಜಿಲ್ಲಾ ಆಸ್ಪತ್ರೆ ಆರ್‌ಎಂಒ ಅವರಿಂದ ಕಿರುಕುಳ ಇದೆ. ಅದು ತಪ್ಪಬೇಕು ಎಂದು ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘದ ರಮೇಶ ಪಾಸ್ವಾನ್ ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ| ವಿಜಯಕುಮಾರ ಅಂತೆಪ್ಪನೋರ, ವೈದ್ಯರು, ನರ್ಸಗಳಿಗೆ ನೀಡಿರುವ ಸೌಲಭ್ಯಗಳಂತೆ ಡಿ-ದರ್ಜೆ ನೌಕರರಿಗೂ ವಿಸ್ತರಿಸಲಾಗುವುದು. ಹಾಸ್ಟೆಲ್‌ಗಳ ಬದಲು ಲಾಡ್ಜ್ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು. ಪಿಪಿಇ ಕಿಟ್ ಹಾಗೂ ಮಾಸ್ಕ್ ವಿತರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಗಿದೆ.
ಆರೋಗ್ಯ ಸಿಬ್ಬಂದಿಗೆ ಕೋವಿಡ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇಂತಹ ಆರೋಪ ಸತ್ಯವಾದುದ್ದಲ್ಲ. ಯಾರು ಕೋವಿಡ್-19 ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೋ ಅಂತಹವರು ವಸತಿ ನಿಲಯ ಇಲ್ಲವೇ ಹೋಟೆಲ್‌ನಲ್ಲಿ ಕ್ವಾರಂಟೈನ್‌ಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಡಾ| ಎಚ್.ಆರ್. ಮಹಾದೇವ,
ಜಿಲ್ಲಾಧಿಕಾರಿ