Advertisement

ಬೀದರ್‌ ಪಶುವೈದ್ಯಕೀಯ: 266 ಹುದ್ದೆಗಳ ಶೀಘ್ರ ಭರ್ತಿ: ಸಚಿವ ಪ್ರಭು ಚವ್ಹಾಣ್‌

05:54 PM Mar 09, 2022 | Team Udayavani |

ವಿಧಾನ ಪರಿಷತ್ತು: ಬೀದರ್‌ನ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದಲ್ಲಿ ಖಾಲಿ ಇರುವ 266 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿದ್ದು, ಶೀಘ್ರ ಇದು ಪೂರ್ಣಗೊಳ್ಳಲಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದರು.

Advertisement

ಬುಧವಾರ ಸದಸ್ಯ ಅರವಿಂದ ಕುಮಾರ್‌ ಅರಳಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವವಿದ್ಯಾಲಯದಲ್ಲಿ 398 ಬೋಧಕ ಮತ್ತು 1,073 ಬೋಧಕೇತರ ಹುದ್ದೆಗಳು ಖಾಲಿ ಇವೆ. ಈ ಪೈಕಿ 266 ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರ ಇದಕ್ಕೆ ಅನುಮೋದನೆ ದೊರೆತು, ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

ಈ ವೇಳೆ ಅರವಿಂದ ಕುಮಾರ್‌ ಅರಳಿ ಮಾತನಾಡಿ, ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ ಉದ್ದೇಶಿತ ವಿವಿಯಲ್ಲಿ ಬೋಧಕ ವಿಭಾಗದಲ್ಲಿ ವಿವಿಧ ಹಂತಗಳ 688 ಹುದ್ದೆಗಳು ಮಂಜೂರಾಗಿದ್ದು, 290 ಮಾತ್ರ ಭರ್ತಿ ಮಾಡಿಕೊಳ್ಳಲಾಗಿದೆ. ಇನ್ನೂ 398 ಹುದ್ದೆಗಳು ಖಾಲಿ ಇವೆ. ಅದೇ ರೀತಿ, ಬೋಧಕೇತರ ವಿಭಾಗದಲ್ಲಿ 1,393 ಹುದ್ದೆಗಳು ಮಂಜೂರಾಗಿದ್ದು, 320 ಭರ್ತಿಯಾಗಿವೆ. 1,073 ಖಾಲಿ ಇವೆ. ಉದ್ದೇಶಪೂರ್ವಕವಾಗಿ ವಿವಿಯನ್ನು ಬೇರೆ ಕಡೆ ತೆಗೆದುಕೊಂಡು ಹೋಗುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್‌. ಅಶೋಕ್‌, ಯಾವುದೇ ಕಾರಣಕ್ಕೂ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದಿಲ್ಲ. ಜತೆಗೆ ಉತ್ತಮವಾಗಿಯೂ ಮುನ್ನಡೆಸಿಕೊಂಡು ಹೋಗಲಾಗುವುದು. ಇದರಲ್ಲಿ ಯಾವುದೇ ಆತಂಕ ಮತ್ತು ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

“ಇಲಾಖೆಗೆ ಹಿಂತಿರುಗದಿದ್ರೆ ಅಮಾನತು’
ಇನ್ನು ಪಶುವೈದ್ಯಕೀಯ ಇಲಾಖೆಯಿಂದ ಬೇರೆ ಇಲಾಖೆಗಳಿಗೆ ನಿಯೋಜನೆಗೊಂಡ ಮೂವರು ಸಿಬ್ಬಂದಿಗೆ ಮಾತೃ ಇಲಾಖೆಗೆ ಬರುವಂತೆ ನೋಟಿಸ್‌ ನೀಡಲಾಗಿದ್ದು, ಒಂದು ವೇಳೆ ನಿರಾಕರಿಸಿದರೆ ಅಮಾನತು ಮಾಡಲಾಗುವುದು ಎಂದು ಪ್ರಭು ಚವ್ಹಾಣ್‌ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಒಟ್ಟಾರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಎಲ್ಲ ವೃಂದದ 131 ಅಧಿಕಾರಿಗಳು/ ನೌಕರರು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದರು. ಅವರೆಲ್ಲರಿಗೂ ಮಾತೃ ಇಲಾಖೆಗೆ ಮರಳಿಬರುವಂತೆ ಆದೇಶಿಸಿದ್ದು, ಅದರಂತೆ ವಾಪಸ್‌ ಬಂದಿರುತ್ತಾರೆ. ಈ ಪೈಕಿ ನಾಲ್ವರು ಪಶು ವೈದ್ಯಾಧಿಕಾರಿಗಳು ಮತ್ತು ಲಿಪಿಕ ವೃಂದದಲ್ಲಿ ಮೂವರು ಸಿಬ್ಬಂದಿ ವಾಪಸ್‌ ಬಂದಿಲ್ಲ. ಇವರಿಗೆ ಈಗಾಗಲೇ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next