ಬೀದರ: ಸಹಕಾರ ಕ್ಷೇತ್ರ ಕೂಡ ಭಾರತೀಯ ಪರಂಪರೆಯ ಭಾಗವೇ ಆಗಿದ್ದು ಕೃಷಿಕರ ಬದುಕಿನ ಅವಿಭಾಜ್ಯ ಅಂಗವಾಗಿದೆ. ದೊಡ್ಡ ಬ್ಯಾಂಕ್‌ಗಳು ಮುಳುಗುತ್ತಿರುವ ಇಂದಿನ ದಿನಗಳಲ್ಲಿ ಲಕ್ಷಾಂತರ ಜನರಿಗೆ ಆರ್ಥಿಕ ನೆರವು ನೀಡುತ್ತಿರುವ ಸಾವಿರಾರು ಸಹಕಾರ ಸಂಘಗಳ ಉತ್ತಮ ಕಾರ್ಯವೈಖರಿ ದೇಶಕ್ಕೆ ಮಾದರಿಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಗುರುಪಾದಪ್ಪಾ ನಾಗಮಾರಪಳ್ಳಿ ಸಹಕಾರ ಗ್ರಾಮೀಣಾಭಿವೃದ್ಧಿ ಅಕಾಡೆಮಿಯಲ್ಲಿ ಬ್ಯಾಂಕ್ ಅಧಿಕಾರಿಗಳಿಗಾಗಿ ನಡೆದ 3 ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದು ಸಂಘದ ಸದಸ್ಯರ ಸಾಮಾಜಿಕ ಚಿಂತನೆ ಮತ್ತು ಶಿಸ್ತುಬದ್ಧ ಜೀವನ ಕ್ರಮಕ್ಕೆ ಉದಾಹರಣೆಯಾಗಿದೆ. ಯುವ ಜನಾಂಗಕ್ಕೆ ವೃತ್ತಿ ಜೀವನದಲ್ಲಿ ಶಿಸ್ತು ಎನ್ನುವುದು ಕಷ್ಟ ಎನಿಸದೇ ಇಷ್ಟವಾಗಬೇಕು. ಶಾಲಾ ಶಿಕ್ಷಣ ಜೀವನ ಕೌಶಲ್ಯಗಳನ್ನು ಕಲಿಸುವಲ್ಲಿ ವಿಫಲವಾಗುತ್ತಿರುವ ದಿನಗಳಲ್ಲಿ ವೃತ್ತಿಯಲ್ಲಿ ಯಶಸ್ವಿಯಾಗಲು ತರಬೇತಿಗಳು ಅವಶ್ಯಕವಾಗಿವೆ. ಬದುಕಿನಲ್ಲಿ ಅನುಭವದಿಂದ ಕಲಿಕೆ ಮಹತ್ವದ್ದಾಗಿದೆ. ಇದು ಕೌಶಲ್ಯವೃದ್ಧಿ ಜೊತೆಗೆ ಆತ್ಮವಿಶ್ವಾಸ ಮೂಡಿಸಲು ತರಬೇತಿಗಳು ಸಹಾಯ ಮಾಡುತ್ತವೆ ಎಂದರು.
ದೇಶದ ಸಹಕಾರಿ ಬ್ಯಾಂಕ್‌ಗಳು ಗ್ರಾಮೀಣ ಜನರೊಂದಿಗೆ ನಿಕಟ ಸಂಬಂಧ ಹೊಂದಿದ್ದು ಜನರ ಬಡತನ ದೂರಮಾಡಲು ಶ್ರಮಿಸುತ್ತಿವೆ. ಕೃಷಿಕರಿಗೆ ಅತೀ ಹೆಚ್ಚು ಸಾಲ ವಿತರಿಸುವ ರಾಜ್ಯದ ಎರಡನೇ ಬ್ಯಾಂಕ್ ಬೀದರ ಡಿಸಿಸಿ ಬ್ಯಾಂಕ್ ಆಗಿದೆ. ಬ್ಯಾಂಕ್ ಕೇವಲ ಸಾಲ ನೀಡುವ ಕೆಲಸ ಮಾಡದೇ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕೂಡ ಸಮರ್ಪಕವಾಗಿ ಮಾಡುತ್ತಿರುವುದರಿಂದ ಸರ್ಕಾರದ ಎಲ್ಲ ರೀತಿಯ ಸಾಲ ಮನ್ನಾ ಯೋಜನೆಗಳಲ್ಲಿ ಜಿಲ್ಲೆಗೆ ಗರಿಷ್ಠ ಪ್ರಯೋಜನ ದಕ್ಕುತ್ತಿದೆ. ಮಾರ್ಚ್ ಅಂತ್ಯಕ್ಕೆ ಸಮಾಪನಗೊಳ್ಳುವ ಮಧ್ಯಮಾವಧಿ ಸಾಲ ಮರುಪಾವತಿ ಯೋಜನೆಯಲ್ಲಿ ಜಿಲ್ಲೆಯ ರೈತರು ಅಸಲು ಕಟ್ಟಿದಲ್ಲಿ ಬಡ್ಡಿ ಮನ್ನಾ ಆಗುತ್ತಿದ್ದು 13,700 ರೈತರಿಗೆ 36 ಕೋಟಿ ರೂ. ಲಾಭವಾಗಲಿದೆ.
ಹಳ್ಳಿಹಳ್ಳಿಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಿ ರೈತರ ಮನವೊಲಿಸಿ ಸಾಲ ಮರುಪಾವತಿಸುವಂತೆ ಮಾಡಬೇಕು ಎಂದು ಅವರು ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದರು. ಡಿಸಿಸಿ ಬ್ಯಾಂಕ್ ಸಿಇಒ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕರಾದ ಚನ್ನಬಸಯ್ನಾ ಸ್ವಾಮಿ ಮತ್ತು ವಿಠಲರೆಡ್ಡಿ ಯಡಮಲ್ಲೆ ಅವರು ಬ್ಯಾಂಕಿನ ಪ್ರಗತಿಯ ಪಕ್ಷಿನೋಟ ನೀಡಿದರು. 2022ರಲ್ಲಿ ಬ್ಯಾಂಕ್ ಶತಮಾನೋತ್ಸವ ಆಚರಿಸುತ್ತಿದ್ದು 5000 ಕೋಟಿಯ ಬ್ಯಾಂಕ್ ವ್ಯವಹಾರ ನಡೆಸುವ ಗುರಿ ಹೊಂದಿದೆ. ಜಿಲ್ಲೆಯ ಜನತೆಯ ಸಹಕಾರ ಮತ್ತು ಬ್ಯಾಂಕಿನ ಆಡಳಿತ ಮಂಡಳಿಯ ಮುನ್ನೋಟಗಳನ್ನು ಮನದಲ್ಲಿಟ್ಟುಕೊಂಡು ಬ್ಯಾಂಕಿನ ಸಿಬ್ಬಂದಿ ಅತ್ಯತ್ತಮವಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಬಸವರಾಜ ಕಲ್ಯಾಣ, ಮಲ್ಲಿಕಾರ್ಜುನ ಖಾಜಿ, ಕರಬಸಯ್ನಾ ಸ್ವಾಮಿ, ಶರಣಬಸಪ್ಪಾ ಚೆಲುವಾ, ಶಾಂತಕುಮಾರ ಹುಮನಾಬಾದ, ಶಾರದಾ ರುಡಸೆಟ್ ನಿರ್ದೇಶಕ ಶಿವಪ್ರಸಾದ ಮತ್ತಿತ್ತರರು ಉಪಸ್ಥಿತರಿದ್ದರು. ಅನಿಲ ಪರಶೆಣ್ಣೆ ಮತ್ತು ನಾಗಶಟ್ಟಿ ಘೋಡಂಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ತರಬೇತಿ ಕೇಂದ್ರದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಎಸ್.ಜಿ. ಪಾಟೀಲ ವಂದಿಸಿದರು.