ಬೀದರ: ಕೋವಿಡ್ ಸೋಂಕಿನ ಆತಂಕ ಮತ್ತು ಪಾಲಕರ ಪರ-ವಿರೋಧದ ನಡುವೆಯೂ ಗುರುವಾರದಿಂದ ಬಹು ನಿರೀಕ್ಷಿತ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಂಡಿದ್ದು, ಮೊದಲ ದಿನ ದ್ವಿತೀಯ ಭಾಷೆ ಆಂಗ್ಲ ಮತ್ತು ಕನ್ನಡ ವಿಷಯ ಪರೀಕ್ಷೆಗೆ ಜಿಲ್ಲೆಯಲ್ಲಿ 23,614 (ಶೇ.93.2) ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಕೋವಿಡ್-19 ಭೀತಿ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ವಿಶೇಷ ವ್ಯವಸ್ಥೆಗಳ ಮೂಲಕ ಮೊದಲ ದಿನ ಪಾರದರ್ಶಕ ಮತ್ತು ಜಾಗರೂಕತೆಯಿಂದ ಪರೀಕ್ಷೆ ನಡೆಸುವಲ್ಲಿ ಯಶಸ್ವಿಯಾಗಿದೆ. ಪರೀಕ್ಷೆಗೆ ಒಟ್ಟು 25,327 ಮಕ್ಕಳು ನೋಂದಾಯಿಸಿದ್ದರೆ 23,614 ಪರೀಕ್ಷಾರ್ಥಿಗಳು (ನೆರೆ ರಾಜ್ಯ 16, ವಲಸೆ ವಿದ್ಯಾರ್ಥಿಗಳು 449) ಹಾಜರಾಗಿದ್ದು, 1713 ವಿದ್ಯಾರ್ಥಿಗಳು ಗೈರಾಗಿದ್ದರು.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಇಬ್ಬರಿಗೆ ಕಣ್ಣಿನ ಬೇನೆ ಕಾರಣ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂಡಿಸಿ ಪರೀಕ್ಷೆ ಬರೆಯಿಸಲಾಗಿದೆ. ಅವರಲ್ಲಿ ಯಾವುದೇ ಜ್ವರದ ಲಕ್ಷಣಗಳಿರಲಿಲ್ಲ. ಜಿಲ್ಲೆಯ ಕಂಟೈನ್ಮೆಂಟ್ ಪ್ರದೇಶದ 16 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಡಿಡಿಪಿಐ ತಿಳಿಸಿದ್ದಾರೆ.
3 ಪರೀಕ್ಷಾ ಕೇಂದ್ರ ಸ್ಥಳಾಂತರ: ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು 99 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 1512 ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ. ಕಂಟೈನ್ಮೆಂಟ್ ವಲಯದ ಹುಮನಾಬಾದ 2, ಬಸವಕಲ್ಯಾಣ ತಾಲೂಕಿನ 1 ಪರೀಕ್ಷಾ ಕೇಂದ್ರಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು.
ಪ್ರತಿ ಪರೀಕ್ಷಾ ಕೇಂದ್ರದ ದ್ವಾರದಲ್ಲಿ ಅರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಮಕ್ಕಳ ತಪಾಸಣೆ ಮಾಡಲಾಯಿತು. ಪ್ರತಿ ಕೇಂದ್ರಕ್ಕೆ ತಲಾ ಇಬ್ಬರು ಆರೋಗ್ಯ ಸಹಾಯಕರು ಮತ್ತು ದೈಹಿಕ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಕೌಂಟರ್‌ನಲ್ಲಿ ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ದೈಹಿಕ ಅಂತರ ಪಾಲನೆ ಹಿನ್ನಲೆ ಸರತಿ ಸಾಲಿನಲ್ಲಿ ಮಾಸ್ಕ್ ಧರಿಸಿ ಬಂದ ಮಕ್ಕಳು, ಕೋಣೆಯಲ್ಲಿ ಹಾಕಲಾಗಿದ್ದ ಗುರುತುಗಳಲ್ಲಿ ಕುಳಿತು ಪರೀಕ್ಷೆ ಬರೆದರು. ಹಲವೆಡೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಸೋಂಕು ಹರಡದಂತೆ ನಿರಂತರ ಸಂದೇಶಗಳ ಮೂಲಕ ಮಕ್ಕಳಲ್ಲಿ ಆರೋಗ್ಯದ ಜಾಗೃತಿ ಮೂಡಿಸುವುದು ಕಂಡು ಬಂದಿತು.
ಡಿಸಿ-ಸಿಇಒ ಭೇಟಿ: ಬೀದರ ನಗರದ ಹೀರಾಲಾಲ್ ಪನ್ನಾಲಾಲ್ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮತ್ತು ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದರು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ದೈಹಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಾಲೆಯ ಮುಂದೆ ಬ್ಯಾರಿಕೇಡ್ ಮತ್ತು ಗುರುತು ಹಾಕಿ, ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸುವ ವ್ಯವಸ್ಥೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಪರೀಕ್ಷಾ ಕೊಠಡಿಗೆ ತೆರಳಿ ವೀಕ್ಷಿಸಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಡಿಡಿಪಿಐ ಸಿ.ಎಚ್.ಚಂದ್ರಶೇಖರ ಇದ್ದರು.
ಐವರು ಸೋಂಕಿತರಿಗಿಲ್ಲ ಅವಕಾಶ?
ಬೀದರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಬೇಕಿದ್ದ ಐದು ಜನ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದರಿಂದ ಅವರು ಪರೀಕ್ಷೆಗೆ ಹಾಜರಾಗಲಿಲ್ಲ. ಬೀದರ ನಗರ 3, ಚಿಟಗುಪ್ಪ ಮತ್ತು ಭಾಲ್ಕಿ ತಾಲೂಕಿನ ತಲಾ 1 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದ್ದ ಕಾರಣ ಅವರಿಗೆ ಶಿಕ್ಷಣ ಇಲಾಖೆ ಅನುಮತಿ ನೀಡಿರಲಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕೃತ ಮೂಲಗಳು ದೃಢಪಡಿಸಿವೆ.