ಬೀದರ: ಶ್ರದ್ಧೆಯಿಂದ ದುಡಿದು ಬ್ಯಾಂಕಿನ ಸಾಲದ ಬಂಡವಾಳವನ್ನು ಉಪಯೋಗಿಸಿ ಬಡತನ ದೂರ ಮಾಡುವ ಬೀದರ ಮಾದರಿ ಸ್ವ-ಸಹಾಯ ದೇಶ್ಯಾದ್ಯಂತ ಹೆಸರು ಪಡೆದಿದೆ. ರಾಜ್ಯದಲ್ಲೇ ಅತೀ ಹೆಚ್ಚು ಸ್ವ-ಸಹಾಯ ಗುಂಪುಗಳಿಗೆ ಸಾಲ ನೀಡಿದ 3ನೇ ಬ್ಯಾಂಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ ಹೇಳಿದರು.
ನಗರದಲ್ಲಿ ದಾವಣಗೆರೆ ಜಿಲ್ಲೆಗಳ ಪ್ಯಾಕ್ಸ್ ಗಳ ಮುಖ್ಯ ಕಾರ್ಯನಿರ್ವಾಹಕರಿಗಾಗಿ ನಬಾರ್ಡ್ ವತಿಯಿಂದ ನಡೆದ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವ ಸಹಾಯ ಗುಂಪುಗಳ ಮೂಲಕ ಮಹಿಳಾ ಅಭಿವೃದ್ಧಿ ಜೊತೆಗೆ ಸಹಕಾರಿ ಸಂಸ್ಥೆಗಳ ಅಭಿವೃದ್ಧಿಯೂ ಸಾಧ್ಯವೆಂದು ತೋರಿಸಿಕೊಟ್ಟ ಸಾಧನೆಯು ಬೀದರ ಡಿಸಿಸಿ ಬ್ಯಾಂಕಿಗೆ ಸಲ್ಲುತ್ತದೆ. ಸ್ವ ಸಹಾಯದ ಮೂಲಕ ಸಮೃದ್ಧಿ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಮಹಿಳಾ ಸಬಲೀಕರಣದ ಈ ಕಾರ್ಯಕ್ರಮದಲ್ಲಿ ಇಂದು ಜಿಲ್ಲೆಯ 4.31 ಲಕ್ಷ ಸದಸ್ಯರು ಒಳಗೊಂಡಿರುವುದಲ್ಲದೆ 508 ಕೋಟಿ ರೂ. ಸಾಲ ಪಡೆದುಕೊಂಡು ಸರಿಯಾಗಿ ಮರುಪಾವತಿ ಮಾಡುತ್ತಿರುವುದು ವಿಶೇಷ ಎಂದರು.
ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಮಾತನಾಡಿ, ಏಕರೂಪದ ಲೆಕ್ಕಪತ್ರ ಮತ್ತು ಕಂಪ್ಯೂಟರೀಕರಣಗೊಂಡ ಪ್ಯಾಕ್ಸ್‌ಗಳಿಂದ ಮಾದರಿ ಸೇವೆಗಳನ್ನು ನೀಡಬೇಕು ಎಂದರು. ಉಪನ್ಯಾಸಕ ಮಂಜುನಾಥ ಭಾಗವತ ಅವರು ತರಬೇತಿ ಉದ್ದೇಶ ವಿವರಿಸಿದರು.