ಬೀದರ: ಭಾರತದ ಆರ್ಥಿಕತೆ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರ ಅನನ್ಯವಾಗಿದೆ. ಇಡಿ ವಿಶ್ವವೇ ಆರ್ಥಿಕತೆ ಕುಸಿತ ಕಂಡರು ಭಾರತದಲ್ಲಿ ಅದರ ಪ್ರಭಾವ ಹೆಚ್ಚಾಗಿರಲಿಲ್ಲ. ಇಲ್ಲಿರುವ ಸಹಕಾರಿ ವ್ಯವಸ್ಥೆ ಗಟ್ಟಿಯಾದ ನೆಲೆಯೇ ಕಾರಣ ಎಂದು ವಿವೇಕಾನಂದ ಆಶ್ರಮದ ಶ್ರೀ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.
ನಗರದ ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಆಶ್ರಯದಲ್ಲಿ ನಡೆದ ಸೌಹಾರ್ದ ಸಹಕಾರಿ ದಿನಾಚರಣೆ, ಸೌಹಾರ್ದ ಸಹಕಾರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಕುಟುಂಬ ಮೂಲ ಸಹಕಾರ ವ್ಯವಸ್ಥೆಯಾಗಿದೆ. ಕುಟುಂಬದಲ್ಲಿ ತಾಯಿ, ರಾಷ್ಟ್ರದಲ್ಲಿ ರೈತರ ಪಾತ್ರ ಹೆಚ್ಚಿದೆ. ಯುವಕರು ಸಹಕಾರಿ ರಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮೂಲಕ ಆರ್ಥಿಕರಾಗಿ ಸದೃಢವಾಗಲು ಸಾಧ್ಯ ಎಂದು ಹೇಳಿದರು.
ಗುರುನಾಥ ಜ್ಯಾಂತೀಕರ್ ಮಾತನಾಡಿ, ಸಹಕಾರ ಚಳವಳಿಗೆ ತನ್ನದೆಯಾದ ಇತಿಹಾಸವಿದೆ. ಭಾರತದಲ್ಲಿ ಸಹಕಾರಿ ಕ್ಷೇತ್ರ ಅಧಿಕಾರಿಗಳ ಹಸ್ತಕ್ಷೇಪದಿಂದ ಸಾಕಷ್ಟು ಪ್ರಗತಿ ಸಾಧ್ಯವಾಗಲಿಲ್ಲ. ಯುವಜನರು ಸಹಕಾರ ಕ್ಷೇತ್ರಕ್ಕೆ ಬರುವ ಮೂಲಕ ನಾಯಕರಾಗಿ, ಉದ್ಯೋಗಿಗಳಾಗಿ ಕಾರ್ಯನಿರ್ವಹಿಸಬಹುದು. ರಾಜ್ಯದಲ್ಲಿ ಸೌಹಾರ್ದ ಕಾಯ್ದೆ ಜಾರಿಗೆ ಬಂದು 19 ವರ್ಷಗಳು ಕಳೆದಿವೆ. ರಾಜ್ಯ ಮತ್ತು ಜಿಲ್ಲೆಯಲ್ಲಿ ಈ ಕಾಯ್ದೆ ಅಡಿ ಉತ್ತಮವಾಗಿ ಕಾರ್ಯನಿರ್ವಹಿಸಿ ಮಾದರಿ ಸಹಕಾರಿಗಳಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಪ್ರೊ| ಮನೋಹರ ಭಕಾಲೆ, ವಿದ್ಯಾಥಿಗಳು ತಮ್ಮ ವಿದ್ಯಾರ್ಜನೆ ಜತೆಗೆ ಉದ್ಯೋಗ ನೀಡುವ ಶಿಕ್ಷಣ ಪಡೆದುಕೊಂಡು ತಮ್ಮ ಜೀವನ ರೂಪಿಸಿಕೊಳ್ಳಲು ಸಹಕಾರ ರಂಗ ಉತ್ತಮವಾದ ಕ್ಷೇತ್ರ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸತೀಶ ಪಾಟೀಲ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಸಹಕಾರ ಚಳವಳಿ ಹತ್ತಿಕುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದಿಂದ ಉತ್ತಮ ಸಹಕಾರಿಗಳಿಗೆ ಕೊಡಮಾಡುವ ಸೌಹಾರ್ದ ಸಹಕಾರ ಶ್ರೀ ಪ್ರಶಸ್ತಿಯನ್ನು ಶ್ರೀ ಆಂಜನೆಯ ಪತ್ತಿನ ಸೌಹಾರ್ದ ಸಹಕಾರಿ ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರಿಗೆ ಪ್ರದಾನ ಮಾಡಲಾಯಿತು. ಒಕ್ಕೂಟದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಸತೀಶ ಪಾಟೀಲ, ಕ್ರಾಂತಿಕುಮಾರ ಕುಲಾಲ, ಶಿವಬಸಪ್ಪ ಚನ್ನಮಲ್ಲೆ, ಜಗನ್ನಾಥ ಕರಂಜೆ, ಶ್ರೀಕಾಂತ ಸ್ವಾಮಿ, ನಂದಾ ವಿವೇಕಾನಂದ, ಮಾಯಾದೇವಿ ಸಿಂದನಕೇರಾ, ಪ್ರೊ| ಹಾವಗೀರ ಮೈಲಾರೆ, ಸಿಇಒ ಅಮೃತ ಹೊಸಮನಿ, ಶಾಮರಾವ ಕೊಂಡಾ, ದೇವೇಂದ್ರ ಕಮಲ್, ಬಸವರಾಜ ಬಾಪೂರೆ, ಶಿವಕುಮಾರ ಪಾಲ್ಗೊಂಡಿದ್ದರು.