ಬೀದರ: ರಂಜಾನ್ ಹಬ್ಬ ಮತ್ತು ಬೀದರ ಒಲ್ಡ್ ಸಿಟಿನಲ್ಲಿನ ಸಾರ್ವಜನಿಕರ ಕುಂದುಕೊರತೆ ಆಲಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಸಭೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ಮುಸಲ್ಮಾನ ಬಾಂಧವರು ಮತ್ತು ವಿವಿಧ ಸಂಘಟನೆಗಳ ಮುಖಂಡರ ಜತೆ ನಡೆದ ಸಭೆಯಲ್ಲಿ ಕಂಟೈನಮೆಂಟ್ ಏರಿಯಾದಲ್ಲಿ ಇರುವ ನಮಗೆ ಆರೋಗ್ಯ ಚಿಕಿತ್ಸೆ ಮತ್ತು ಕಿರಾಣಿ, ತರಕಾರಿ, ಹಣ್ಣು ಸೇರಿದಂತೆ ಎಲ್ಲವೂ ಇನ್ನೂ ಸಮರ್ಪಕ ರೀತಿಯಲ್ಲಿ ಸಿಗಬೇಕಿದೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ| ಮಹಾದೇವ, ತಮ್ಮ ಸಲಹೆ ಸೂಚನೆಗೆ ಸ್ವಾಗತವಿದೆ. ಪ್ರತಿ ದಿನ ವೈದ್ಯಾಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸುವಾಗ ಒಲ್ಡ್ ಸಿಟಿಯಲ್ಲಿನ ಸ್ಥಿತಗತಿ ಬಗ್ಗೆ ಕೂಡ ಚರ್ಚಿಸಲಾಗುತ್ತದೆ. ಕಂಟೈನಮೆಂಟ್ ಏರಿಯಾ ಘೋಷಿತ ಪ್ರದೇಶದಲ್ಲಿ ಕಿರಾಣಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. ಏನಾದರು ಕೊರತೆಯಿದೆ ಎಂದು ತಿಳಿದ ಕೂಡಲೇ ಎಲ್ಲ ವ್ಯವಸ್ಥೆಗೆ ಕ್ರಮ ವಹಿಸಲಾಗುತ್ತಿದೆ. ಆದಾಗ್ಯೂ ಕೆಲವು ಕಡೆ ತೊಂದರೆಯಾಗಿರಬಹುದು. ಈ ಬಗ್ಗೆ ಕೂಡಲೇ ಅಧಿಕಾರಿಗಳಿಗೆ ಸೂಚಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.
ಕಂಟೈನಮೆಂಟ್ ಪ್ರದೇಶದಲ್ಲಿ ಯಾರಿಗೇ ಆಗಲಿ ರಕ್ತದೊತ್ತಡ, ಮಧುಮೇಹ ಹೀಗೆ ಯಾವುದಾದರು ಕಾಯಿಲೆಯಿಂದ ನರಳುತ್ತಿದ್ದರೆ ಅಂತವರು ಮತ್ತು ಗರ್ಭೀಣಿಯರು ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸಮರ್ಪಕ ವೈದ್ಯಾಧಿಕಾರಿಗಳ ಲಭ್ಯತೆಯೂ ಇದೆ ಎಂದು ಹೇಳಿದರು. ಬ್ರಿಮ್ಸನಲ್ಲಿ ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕಿಡ್ನಿ ವೈಫಲ್ಯ ತೊಂದರೆಗೀಡಾದವರು ಅಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.
ಶಾಸಕ ರಹೀಮ್ ಖಾನ್ ಮಾತನಾಡಿ, ಕೋವಿಡ್-19 ಕರೋನಾ ವೈರಾಣು ತಡೆ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದಾಗಿ ಸರ್ಕಾರ ರೂಪಿಸಿರುವ ಕಾನೂನಿನ ನಿಯಮಗಳನ್ನು ಪ್ರತಿಯೊಬ್ಬರೂ ತಪ್ಪದೇ ಪಾಲಿಸೋಣ ಎಂದು ಹೇಳಿದರು. ತಮಗೆ ಏನಾದರು ಕುಂದುಕೊರತೆಗಳು ಇದ್ದಲ್ಲಿ ಅದನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಜನರ ಬೇಕುಬೇಡಿಕೆಗಳಿಗೆ ತುರ್ತಾಗಿ ಸ್ಪಂದಿಸಬೇಕು ಎಂದು ಹೇಳಿದರು.
ಎಸ್‌ಪಿ ಡಿ.ಎಲ್. ನಾಗೇಶ ಮಾತನಾಡಿ, ಕಂಟೈನಮೆಂಟ್ ಪ್ರದೇಶದಲ್ಲಿ ತರಕಾರಿ, ಹಣ್ಣು ಮಾರಾಟ ಮಾಡುವ ತಳ್ಳುವ ಬಂಡಿಗಳನ್ನು ಒಂದೇ ಕಡೆಗೆ ನಿಲ್ಲಿಸದೇ ವಾರ್ಡ್‌ವಾರು ಸಂಚರಿಸಿ ವ್ಯಾಪಾರ ಮಾಡಲು ತೊಂದರೆಯಿಲ್ಲ. ಆದರೆ, ಕೆಲವರು ಒಂದೇ ಕಡೆಗೆ ನಿಂತು ವ್ಯಾಪಾರ ಮಾಡುವುದು ಕಂಡು ಬರುತ್ತಿದೆ. ಅಂತವರಿಗೆ ಆ ಸ್ಥಳದಲ್ಲಿನ ಸಾರ್ವಜನಿಕರು ತಿಳಿಹೇಳಿ ಒಂದೇ ಕಡೆಗೆ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸಿ ಅಕ್ಷಯ ಶ್ರೀಧರ, ನಗರಸಭೆ ಪೌರಾಯುಕ್ತ ಬಸಪ್ಪ, ಮುಖಂಡರಾದ ವಹೀದ್ ಲಖನ್, ಸಯ್ಯದ್ ಕೀರ್ಮಾನಿ, ಅಬ್ದುಲ್ ಖದೀರ್, ಡಾ| ಮಕ್ಸೂದ್ ಚೆಂದಾ, ಮನ್ಸೂರ್ ಖಾದ್ರಿ, ಯೂಸುಪ್, ಅಬ್ದುಲ್ ವಹೀದ್ ಖಾಸ್ಮಿ, ಜಾವೇದ್ ಕಾಂಟ್ರಾಕ್ಟರ್, ಅಹ್ಮದ್ ಶೇಠ್, ಶಾಖೀರುಲ್ಲಾ ಖಾನ್ ಇದ್ದರು.