Advertisement

ಪಶು ವೈದ್ಯಕೀಯ ವಿವಿ ವಿಭಜನೆಗೆ ವಿರೋಧ

05:37 PM Mar 07, 2021 | Team Udayavani |

ಬೀದರ: ಬೀದರ ಪಶು ವೈದ್ಯಕೀಯ,ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ವಿಭಜಿಸಿ ಶಿವಮೊಗ್ಗದಲ್ಲಿ ಎರಡನೇ ವಿವಿ ಸ್ಥಾಪಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಾಗರಿಕರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಇಲ್ಲಿನ ಅಂಬೇಡ್ಕರ್‌ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು. ನಂಜುಂಡಪ್ಪ ವರದಿ ಅನ್ವಯ ಬೀದರನಲ್ಲಿ 2005ರಲ್ಲಿ ಪಶು ವಿಶ್ವವಿದ್ಯಾಲಯ ಸ್ಥಾಪಿಸಲಾಗಿದ್ದು, ಒಟ್ಟು 23 ಸಂಸ್ಥೆಗಳು ವಿವಿ ಅಧೀನದಲ್ಲಿವೆ. ವಿಶ್ವವಿದ್ಯಾಲಯ ಆರಂಭವಾಗಿ 16 ವರ್ಷಗಳಾದರೂ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ. ಸಾವಿರ ಹುದ್ದೆಗಳ ಮಂಜೂರಾತಿ ಇದ್ದರೂ ಕೇವಲ ಗುತ್ತಿಗೆ ಸಿಬ್ಬಂದಿ ಇದ್ದಾರೆ.

ಮುಖ್ಯ ಆಡಳಿತ ಕಚೇರಿ ಇಲ್ಲ. ಮೂಲಸೌಕರ್ಯಗಳ ಕೊರತೆ ಕಾರಣ ವಿವಿ ಅಧೀನದ ಕಾಲೇಜುಗಳ ಮಾನ್ಯತೆಗೆ ಸಮಸ್ಯೆಯಾಗಿದೆ ಎಂದು ದೂರಲಾಗಿದೆ. ಬೇರೆ ರಾಜ್ಯಗಳಲ್ಲಿ ಎರಡು ಪಶು ವೈದ್ಯಕೀಯ ವಿಶ್ವವಿದ್ಯಾಲಯಗಳಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಸ್ಥಾಪಿಸಲಾದ ರಾಜ್ಯದ ಏಕೈಕ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುವ ಬದಲು ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವುದು ಸರಿಯಲ್ಲ. ಹೊಸ ವಿವಿ ಸ್ಥಾಪನೆಯಾದರೆ ಸುಮಾರು 20 ಸಂಸ್ಥೆಗಳು ಅದರ ವ್ಯಾಪ್ತಿಗೆ ಹೋಗಲಿದ್ದು, ಇದು ಬೀದರ ವಿವಿ ಮುಚ್ಚುವ ಹುನ್ನಾರವಾಗಿದೆ. ಕೂಡಲೇ ಹೊಸ ಪಶು ವಿವಿ ಸ್ಥಾಪನೆ ತಡೆದು ಬೀದರ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ವಿಎಚ್‌ಪಿ ಜಿಲ್ಲಾಧ್ಯಕ್ಷ ಎಸ್‌. ರಾಮಕೃಷ್ಣನ್‌, ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಸದ್ಭಾವನಾ ಮಂಚ್‌ ಜಿಲ್ಲಾ ಸಂಚಾಲಕ ಗುರುನಾಥ ಗಡ್ಡೆ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ, ಪ್ರಮುಖರಾದ ಸಿದ್ದಪ್ಪ ಫುಲಾರಿ, ಶಿವಶರಣಪ್ಪ ವಾಲಿ, ಶಕುಂತಲಾ ವಾಲಿ, ರವಿ ಮೂಲಗೆ, ಬಿ.ಎಸ್‌. ಕುದರೆ, ಓಂಪ್ರಕಾಶ ರೊಟ್ಟೆ, ರಾಜಕುಮಾರ ಬಿರಾದಾರ, ಗುಣವಂತರಾವ್‌, ರಮೇಶ ಪಾಟೀಲ, ಎಸ್‌.ಎಂ. ಐನಾಪುರ, ಡಾ| ಚಂದ್ರಪ್ಪ ಬಿ., ಕಿಶಣಸಿಂಗ್‌, ಡಾ| ಮಂಜುಳಾ, ಡಾ| ಭಾಗ್ಯಶ್ರೀ, ವೀರಭದ್ರಪ್ಪ ಉಪ್ಪಿನ್‌, ಚನ್ನಬಸವಣ್ಣ, ಡಾ| ಅಶ್ವಿ‌ನಿ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next