ಬೀದರ್ : ಜಮೀನಿನ ಮ್ಯುಟೇಶನ್ ಮಾಡಿಕೊಡಲು ಮಾಲೀಕರಿಂದ 15 ಲಕ್ಷ ರೂ. ಲಂಚ ಪಡೆಯುವಾಗ ಇಲ್ಲಿನ ಗ್ರೇಡ್ 1 ತಹಸೀಲ್ದಾರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಇಂದು(ಬುಧವಾರ, ಜುಲೈ 28) ನಡೆದಿದೆ.
ಗಂಗಾದೇವಿ ಸಿ.ಎಚ್ ಎಂಬುವರೆ ಎಸಿಬಿ ಬಲೆಗೆ ಬಿದ್ದಿರುವ ತಹಸೀಲ್ದಾರ್. ನಗರದ ವಿದ್ಯಾನಗರ ಕಾಲೋನಿಯ ನಿವಾಸಿ ಲಿಲಾಧರ ಅಮೃತಲಾಲ್ ಪಟೇಲ್ ಎಂಬುವರಿಂದ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ
ನಗರದ ಹೊರವಲಯದ ಚಿದ್ರಿ ಬಳಿಯ ಸರ್ವೇ ನಂ. 15/1ಎ7 ರ 2 ಎಕರೆ 25 ಗುಂಟೆ ಜಮೀನಿನ ಮ್ಯುಟೇಶನ್ ಮಾಡಿಕೊಡಲು ತಹಸೀಲ್ದಾರ್ ಗಂಗಾದೇವಿ ಅವರು 20 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಮ್ಯುಟೇಶನ್ 2011ರಲ್ಲಿ ಅರ್ಜಿಸಿದ್ದು, ಹಣಕ್ಕಾಗಿ ಕೆಲಸ ಮಾಡಿಕೊಡದೇ ಸತಾಯಿಸಲಾಗುತ್ತಿತ್ತು. ಹಣದ ಬೇಡಿಕೆ ಕುರಿತು ಲಿಲಾಧರ ಅವರು ಎಸಿಬಿಗೆ ದೂರು ನೀಡಿದ್ದರು.
ಮಂಗಳವಾರ ಬೆಳಿಗ್ಗೆ ತಹಸೀಲ್ದಾರ್ ತಮ್ಮ ಆನಂದ ನಗರದ ನಿವಾಸದಲ್ಲಿ 15 ಲಕ್ಷ ರೂ.ಲಂಚ ಪಡೆಯುವಾಗ ಎಸಿಬಿ ಎಸ್.ಪಿ ಮಹೇಶ್ ಮೇಘಣ್ಣನವರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ವಿಚಾರಣೆಯನ್ನು ಮುಂದುವರೆಸಿಸಿರುವ ಅಧಿಕಾರಿಗಳು ತಹಸೀಲ್ದಾರ್ ಗಂಗಾದೇವಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾಳಿ ವೇಳೆ ಎಸಿಬಿ ಪಿಐಗಳಾದ ವೆಂಕಟೇಶ ಯಡಹಳ್ಳಿ, ಶರಣಬಸಪ್ಪ ಕೊಡ್ಲಾ, ಸಿಬ್ಬಂದಿಗಳಾದ ಶ್ರೀಕಾಂತ, ಅನೀಲ, ಕಿಶೋರ, ಕುಶಾಲ ಮತ್ತು ಸರಸ್ವತಿ ಇದ್ದರು.
ಇದನ್ನೂ ಓದಿ : ಜಮೀನಿನ ಮ್ಯುಟೇಶನ್ ಮಾಡಲು 15 ಲಕ್ಷ ರೂ. ಲಂಚ : ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್