ಬೀದರ್: ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತು ಹಿನ್ನಲೆ ಕಾರಂಜಾ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯ ಲಂಚ ನಿಷೇಧ ಕಾಯ್ದೆಯ ಕಲಂ 13(2)ಕ್ಕೆ 4 ವರ್ಷ ಜೈಲು ಶಿಕ್ಷೆ ಜತೆಗೆ 25 ಲಕ್ಷ ರೂ. ದಂಡ ವಿಧಿಸಿದ್ದು, ದಂಡ ಭರಿಸಲು ತಪ್ಪಿದ್ದಲ್ಲಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಇಲ್ಲಿನ ಗುರು ನಗರ ಕಾಲೋನಿಯ ನಿವಾಸಿ ಫಿರೋಜುದ್ದೀನ್ ಖಾನ್ ಶಿಕ್ಷೆಗೆ ಒಳಗಾದ ಎಇಇ.
1982 ರಲ್ಲಿ ಸಹಾಯಕ ಅಭಿಯಂತರರಾಗಿ ಸರ್ಕಾರಿ ಸೇವೆಗೆ ಸೇರಿರುವ ಫಿರೋಜುದ್ದೀನ್ ಅವರು ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2008 ರಲ್ಲಿ ಕಾರಂಜಾ ಕಾಲುವೆ ನಿರ್ಮಾಣ ಯೋಜನೆಯ ಹುಮನಾಬಾದ ಕ್ಯಾಂಪ್‌ನಲ್ಲಿ ಎಇಇ ಆಗಿ ಕರ್ತವ್ಯದಲ್ಲಿದಾಗ ಅದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಗೌಪ್ಯ ಮಾಹಿತಿ ಆಧಾರದ ಮೇಲೆ 2008ರ ಫೆ. 6ರಂದು ಲೋಕಾಯುಕ್ತ ಪೊಲೀಸರು ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದರು. ಶೋಧ ನಡೆದ ವೇಳೆ ನಗದು, ಬೆಳ್ಳಿ – ಬಂಗಾರದ ಒಡವೆಗಳು ಮತ್ತು ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು.
ಫಿರೋಜುದ್ದೀನ್ ಅವರು ಸರ್ಕಾರಿ ನೌಕರಿಗೆ ಸೇರಿದ 1982 ರಿಂದ 2008 ರವರೆಗೆ ಆದಾಯ, ಸ್ಥಿರಾಸ್ತಿ, ಚರಾಸ್ತಿ ಮತ್ತು ಖರ್ಚು ವೆಚ್ಚಳನ್ನು ಲೆಕ್ಕಾಚಾರ ಮಾಡಿದಾಗ ಅದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಕಂಡು ಬಂದಿದ್ದರಿಂದ ಅಂದಿನ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಟಿ.ಜಿ. ರಾಯ್ಕರ್ ಅವರು ತನಿಖೆ ನಡೆಸಿ, ಅವರ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯ ಕುಮಾರ ಆನಂದ ಶೆಟ್ಟಿ ಪ್ರಕರಣದ ವಿಚಾರಣೆ ಮಾಡಿ, ಆರೋಪಿ ಅದಾಯಕ್ಕಿಂತ ಒಟ್ಟು 6,43,345/-ಗಳ (ಶೇ.20.6) ಹೆಚ್ಚಿನ ಆಕ್ರಮ ಆಸ್ತಿ ಹೊಂದಿರುವುದು ಸಾಬೀತು ಆಗಿರುವುದರಿಂದ ದಂಡ ಮತ್ತು ಶಿಕ್ಷೆ ವಿಧಿಸಿ ತೀರ್ಪನ್ನು ನೀಡಿದ್ದಾರೆ.
ದಾಳಿ ವೇಳೆ ದೊರೆತ ಬಂಗಾರ, ಬೆಳ್ಳಿಯ ಒಡವೆಗಳನ್ನು ಹಾಗೂ ನಗದು ಹಣ ಜಪ್ತಿ ಮಾಡಲು ಆದೇಶಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ ವಾದ ಮಂಡಿಸಿದ್ದರು.