ಬೀದರ್ : ಪ್ರೌಢ ಶಾಲೆ ವಿದ್ಯಾರ್ಥಿನಿಗೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಕಮಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಮುಕ ಶಿಕ್ಷಕನನ್ನು ಪೋಕ್ಸೋ ಕಾಯ್ದೆಯಡಿ ಬಂಧನ ಮಾಡಲಾಗಿದೆ.
ಮಾಧವ್ ಲಾಂಚಕರ್ ಎಂಬುವನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ. ಬಾಲಕಿಯ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಪೋಕ್ಸೋ ಮತ್ತು ಐಪಿಸಿ 354(a) ಪ್ರಕಾರ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಹೇಯ ಕೃತ್ಯ ಎಸಗಿದ ಶಿಕ್ಷಕನ ಜತೆಗೆ ಇದಕ್ಕೆ ಸಹಕರಿಸಿದ ಓರ್ವ ಶಿಕ್ಷಕಿಯನ್ನು ಸಹ ಬಂಧಿಸಲಾಗಿದೆ.
ಘಟನೆ: ಗ್ರಾಮದ ಶಾಲೆಯಲ್ಲಿ 9 ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಮತ್ತು ಆಕೆಯ ಗೆಳತಿಯನ್ನು ತನ್ನ ಕೋಣೆಗೆ ಬರುವಂತೆ ಕರೆದಿದ್ದ ಶಿಕ್ಷಕ ನಂತರ ಗೆಳತಿಯನ್ನು ವಾಪಸ್ ಕಳುಹಿಸಿದ್ದ. ವಿದ್ಯಾರ್ಥಿನಿಯನ್ನು ಕೋಣೆ ಒಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ. ಶಿಕ್ಷಕನ ವರ್ತನೆಗೆ ಹೆದರಿದ ಬಾಲಕಿ ಅತನಿಂದ ಬಿಡಿಸಿಕೊಂಡು ಅಳುತ್ತಾ ಮನೆಗೆ ಬಂದು, ತನ್ನ ತಂದೆಗೆ ಮಾಹಿತಿ ನೀಡಿದ್ದಾಳೆ.
ಅದೇ ದಿನ ರಾತ್ರಿ ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿಯ ಮನೆಗೆ ಬಂದು ಲೈಂಗಿಕ ಕಿರುಕುಳದ ಬಗ್ಗೆ ಯಾರಿಗಾದರೂ ಹೇಳಿದರೆ ನಿಮ್ಮ ಮಗಳನ್ನು ಶಾಲೆಯಿಂದ ತೆಗೆದು ಹಾಕಲಾಗುವುದು. ನಿಮ್ಮದೇ ಮರ್ಯಾದೆ ಹೋಗುತ್ತದೆ. ಈ ವಿಷಯ ಇಲ್ಲಿಗೆ ಮುಚ್ಚಿ ಹಾಕಿ ಎಂದು ಬೆದರಿಕೆ ಹಾಕಿದ್ದಾಳೆ. ಹಾಗಾಗಿ ಈ ಬಗ್ಗೆ ಕುಟುಂಬಸ್ಥರ ಜತೆ ಚರ್ಚಿಸಿ ಠಾಣೆಯಲ್ಲಿ ದೂರು ಕೊಡಲು ತಡವಾಗಿದೆ. ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ ಮತ್ತು ಕೃತ್ಯ ಸಹಕರಿಸಿದ ಶಿಕ್ಷಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.
ಸ್ವಯಂ ಪ್ರೇರಿತವಾಗಿ ಪ್ರಕರಣ
ಕಮಲನಗರ ಠಾಣೆ ವ್ಯಾಪ್ತಿಯಲ್ಲಿರುವ ಪ್ರೌಢ ಶಾಲೆಯ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಘಟನೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಗಂಭೀರವಾಗಿ ಪರಿಗಣಿಸಿ, ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಆಯೋಗಕ್ಕೆ ಮಾಹಿತಿ ನೀಡಲು ಡಿಡಿಪಿಐಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಕುರಿತು ಜಾಗೃತಿ ಮೂಡಿಸಿದ್ದರೂ ಸಹ ಇಂತಹ ಕೆಟ್ಟ ಪ್ರಕರಣಗಳು ನಡೆಯುತ್ತಿರುವುದು ದುರಂತದ ಸಂಗತಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದ್ದಾರೆ.