Advertisement

ಬೀದರ: ಜನಪರ ಉತ್ಸವಕ್ಕೆ ಅದ್ಧೂರಿ ಚಾಲನೆ

05:53 PM Jan 09, 2024 | Team Udayavani |

ಉದಯವಾಣಿ ಸಮಾಚಾರ
ಬೀದರ: ಕಲೆ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಜನಪರ ಉತ್ಸವದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಹೇಳಿದರು.

Advertisement

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಸೋಮವಾರ “ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ಕರ್ನಾಟಕ ಸಂಭ್ರಮ-50
ಅಂಗವಾಗಿ ಹಮ್ಮಿಕೊಂಡಿದ್ದ ಜನಪರ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಕಲೆಯು ಗ್ರಾಮೀಣ ಭಾಗದ ಬಡವರು, ಹಿಂದುಳಿದವರು ಮತ್ತು ದಲಿತರಲ್ಲಿ ಉಳಿದಿದೆ. ಹಾಗಾಗಿ ಈ ಕಲೆಯನ್ನು ತಮ್ಮ
ಯುವ ಪೀಳಿಗೆಗೆ ಮುಂದುವರೆಸಿಕೊಂಡು ಹೋಗಲು ಅವರಿಗೂ ಕಲಿಸಬೇಕು. ಇಂದಿನ ಕಲೆಯಲ್ಲಿ ಯಾವುದೇ ಸಂಸ್ಕೃತಿ ಉಳಿದಿಲ್ಲ. ಹಿಂದೆ ನಮ್ಮ ಹಿರಿಯರು ನಮಗೆ ಹಲವಾರು ಜನಪದ ಹಾಡುಗಳನ್ನು ಕಲಿಸುತ್ತಿದ್ದರು. ಹಳ್ಳಿಗಳಲ್ಲಿ ನಾಟಕ, ಕೋಲಾಟ ಮತ್ತು ಭಜನೆ ಪದಗಳನ್ನು ನಾವು ಹಿಂದೆ ಕುಳಿತು ಕೇಳುತ್ತಿದ್ದೆವು. ಈಗ ಇಂಥಹ ಕಲೆಗಳು ನಶಿಸುತ್ತಿದ್ದು, ಅದನ್ನು ಕಲಾವಿದರಾದ ತಾವುಗಳು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಈ ಭಾಗದ ಕಲಾವಿದರಲ್ಲಿ
ನಿಜವಾದ ಕಲೆ ಇದ್ದು, ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಕೌಶಲ ಅವರಲ್ಲಿ ಇಲ್ಲ. ನಮ್ಮ ಪ್ರದೇಶದ 7 ಜಿಲ್ಲೆಗಳಲ್ಲಿ 75 ಸಾವಿರ ಕಲಾವಿದರಿದ್ದು, ಅವರಿಗೆ ಹತ್ತು ದಿನಗಳ ತರಬೇತಿ ಕೊಡುವಂತಾಗಬೇಕು ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಕರ್ನಾಟಕ ಸಂಭ್ರಮ-50ರ ಅಂಗವಾಗಿ ಜನಪರ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಕಲಾವಿದರಿಗೆ ಪ್ರೋತ್ಸಾಹ ನೀಡುವದರ ಜೊತೆಗೆ
ಪ್ರತಿಭಾವಂತ ಕಲಾವಿದರನ್ನು ಗುರುತಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. ಹಿರಿಯ ಕಲಾವಿದರಾದ ಶಂಭುಲಿಂಗ
ವಾಲದೊಡ್ಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಎಸ್‌ ಮನೋಹರ, ಹಿರಿಯರಾದ ಮಾರುತಿ ಕಂಟೆ, ಎಸ್‌.ಬಿ
ಕುಚಬಾಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ಪಾಲ್ಗೊಂಡಿದ್ದರು.

Advertisement

“ಜನಮನ ಸೆಳೆದ ಜನಪರ ಉತ್ಸವ’ 
ಗ್ರಾಮೀಣ ಸಂಸ್ಕೃತಿ ಸಂಪ್ರದಾಯ ಬಿಂಬಿಸುವ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಜನಪರ ಉತ್ಸವ ಜನಮನಸೂರೆಗೊಂಡಿತು. ಗಾನ ವೈವಿಧ್ಯತೆಗಳ ಗಾಯಕರ ಸಮೂಹ ಗಾಯನ ಜನಮನ ತಣಿಸಿತು. ಕಾರ್ಯಕ್ರಮದಲ್ಲಿ ಕಲಾವಿದರು ಜೋಗತಿ ನೃತ್ಯ, ತತ್ವ ಪದ, ಕ್ರಾಂತಿ ಗೀತೆ, ಜಾನಪದ ಹಾಡು, ಹೋರಾಟ ಗೀತೆ, ಡಪ್ಪಿನ ಪದ, ಹಂತಿ ಪದ, ಸಂಪ್ರದಾಯ ಪದ, ಕುಟ್ಟುವ ಪದ, ಮೋಹರಂ ಪದ, ಅಂಬೇಡ್ಕರ ಗೀತೆ, ಪೈತ್ರಿ, ವಚನ ಗಾಯನ, ಬುಲಾಯಿ ಪದ, ಸುಗಮ ಸಂಗೀತ ಭಜನೆ ಪ್ರದರ್ಶನ ಮಾಡಿದರು. ಇದಕ್ಕೂ ಮುನ್ನ ನಗರದ ಡಿಸಿ ಕಚೇರಿ ಆವರಣದಲ್ಲಿ ಕಲಾ ತಂಡಗಳ ಮೆರವಣಿಗೆಗೆ ಡಿಸಿ ಗೋವಿಂದರೆಡ್ಡಿ, ಜಿ.ಪಂ ಸಿಇಒ ಡಾ| ಗಿರೀಶ್‌ ದಿಲೀಪ್‌ ಬದೋಲೆ ಹಾಗೂ ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌ ಅವರು ಡೊಳ್ಳು ಬಾರಿಸಿ ಚಾಲನೆ ನೀಡಿದರು. ಬಂಜಾರಾ ನೃತ್ಯ, ಕೋಲಾಟ, ತಮಟೆ, ಮುಖವಾಡ, ಡೊಳ್ಳು ಕುಣಿತ, ಹೆಜ್ಜೆ ಮೇಳ, ಜಾನಪದ ನೃತ್ಯ, ಪೋತರಾಜ್‌ ಮೆರವಣಿಗೆಯ ಮೆರಗು ಹೆಚ್ಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next