Advertisement

Bidar: ಮುಂದುವರಿದ ಅನ್ನದಾತರ ಅಹೋರಾತ್ರಿ ಧರಣಿ

05:47 PM Dec 27, 2023 | Team Udayavani |

ಶಹಾಪುರ: ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆಗೆ ಫೆಬ್ರವರಿ ಅಂತ್ಯದವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ 9 ದಿನಗಳಿಂದ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಭೀಮರಾಯನ ಗುಡಿಯ ಕೆಬಿಜೆಎನ್‌ಎಲ್‌ ಆಡಳಿತ ಕಚೇರಿಗೆ ಬೀಗ ಜಡೆದು ನಡೆದ ಅಹೋರಾತ್ರಿ ಧರಣಿ ಮುಂದುವರಿದಿದೆ.

Advertisement

ಮಂಗಳವಾರ ಧರಣಿ ಸ್ಥಳಕ್ಕೆ ರೈತ ಹೋರಾಟಗಾರ ಶರಣಪ್ಪ ಸಲಾದಪೂರ ಭೇಟಿ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತ ಚಳವಳಿಗಳಲ್ಲಿಯೂ ಭಿನ್ನಮತ, ಬಣಗಳು ಹುಟ್ಟಿಕೊಂಡ ನಂತರ ರೈತ ಚಳವಳಿಗಳಲ್ಲಿ ಗಟ್ಟಿತನದ ಕೊರತೆ ಎದ್ದು ಕಾಣುತ್ತಿದೆ. ನಮ್ಮ ನಮ್ಮಲ್ಲಿ ಭಿನ್ನಮತಗಳು ಏನೇ ಇದ್ದರೂ ರೈತರ ವಿಷಯ ಬಂದಾಗ ಜಾತಿ ಮತ ಪಂಥ ಮರೆತು ರೈತ ಕುಲ ಒಂದೇ ಎನ್ನುವ ಭಾವನೆ ಮೂಡಬೇಕು. ರೈತ ಚಳುವಳಿ ಗಟ್ಟಿ ಇದ್ದರೆ ಏನು ಬೇಕಾದರೂ ಸಾ ಧಿಸಬಹುದು. ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದರೆ ನೀರು ತರುವುದು ದೊಡ್ಡ ಮಾತಲ್ಲ ಎಂದರು.

ಹಿರಿಯ ಮುಖಂಡ ಬಸವರಾಜ್‌ ವಿಭೂತಿಹಳ್ಳಿಯವರು ನರಗುಂದ, ನವಲಗುಂದ ರೈತ ಚಳವಳಿ ಇತಿಹಾಸವನ್ನೇ ಸೃಷ್ಟಿಸಿದೆ. ಈ
ಹೋರಾಟದಂತೆ ಇಲ್ಲಿಯೂ ಎಲ್ಲ ರೈತ ಬಾಂಧವರು ಒಗ್ಗಟ್ಟಿನಿಂದ ಹೋರಾಟ ನಡೆಸಿದಾಗ ಮಾತ್ರ ಹೋರಾಟ ಯಶಸ್ವಿಯಾಗಲು ಸಾಧ್ಯ ಎಂದರು.

ನಾಯಕರ ನಡೆಗೆ ರೈತರ ಅಸಮಾಧಾನ ಡಿ. 19ರಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿ ಹೋದ ಸಚಿವ
ಶರಣಬಸಪ್ಪಗೌಡ ದರ್ಶನಾಪುರ ಅವರು ಇಲ್ಲಿವರೆಗೆ ರೈತರ ಹೋರಾಟಕ್ಕೆ ಆಗಮಿಸಲೇ ಇಲ್ಲ. ನಮ್ಮ ನಾಯಕರು ಹೋರಾಟ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಲಿ ಎಂದು ಬಿಗಿಪಟ್ಟು ಹಿಡಿಯಬೇಕಾಗಿತ್ತು. ಆದರೆ ಸಚಿವರ ಕಚೇರಿಗೆ ತೆರಳಿ ಹೋರಾಟದಲ್ಲಿ ಭಾಗವಹಿಸದೇ ಇರುವವರನ್ನು ಕರೆದುಕೊಂಡು ಮನವಿ ಪತ್ರ ಕೊಡುವ ಅವಶ್ಯಕತೆ ಏನಿತ್ತು. ರೈತ ನಾಯಕರ ಈ ನಡೆಯಿಂದ ಅಸಮಾಧಾನವಾಗಿದೆ ಎಂದು ರೈತರಲ್ಲಿಯೇ ಭಿನ್ನಾಭಿಪ್ರಾಯ ಹರಿದಾಡುತ್ತಿದೆ. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ನಾಗರತ್ನ ಪಾಟೀಲ್‌, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್‌ ಸತ್ಯಂಪೇಟೆ, ಜಿಲ್ಲಾಧ್ಯಕ್ಷ ಶರಣು ಮಂದಾರವಾಡ, ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಮಹೇಶ್‌ ಗೌಡ ಸುಬೇದಾರ್‌, ಅನೇಕರು ಇದ್ದರು.

ಸಚಿವ ದರ್ಶನಾಪುರ ಕಚೇರಿಗೆ ತೆರಳಿ ಮನವಿ ಸಲ್ಲಿಕೆ ಹೋರಾಟ ಮುಂಚೂಣಿಯಲ್ಲಿರುವ ರೈತ ನಾಯಕರು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ಜಿಲ್ಲೆಯಲ್ಲಿ 14,000 ಹೆಕ್ಟೇರ್‌ಗಿಂತಲೂ ಹೆಚ್ಚು ಮೆಣಸಿನ ಕಾಯಿ ಬೆಳೆಗಾರರಿದ್ದಾರೆ. ನೀರು ಹರಿಸದಿದ್ದರೆ ಎಲ್ಲ ರೈತರು ದಿವಾಳಿಯಾಗುತ್ತಾರೆ. ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ರೈತರಿಂದ ಮನವಿ ಸ್ವೀಕರಿಸಿದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಹೋರಾಟ ಮಾಡುವ ಹಕ್ಕು ನಿಮಗಿದೆ. ರೈತರ ಸಂಕಷ್ಟದ ಅರಿವು ನನಗಿದೆ. ನಾನು ಪ್ರಾಮಾಣಿಕವಾಗಿ ಮುಖ್ಯಮಂತ್ರಿ ಅವರ ಹತ್ತಿರ ಮಾತನಾಡಿ, ಇಲ್ಲಿನ ರೈತರ ಪರಿಸ್ಥಿತಿ ಮನವರಿಕೆ ಮಾಡಿಕೊಡುತ್ತೇನೆ. ಮುಖ್ಯಮಂತ್ರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಾರೆ ಎನ್ನುವ ಭರವಸೆ ನನಗಿದೆ. ತಾಳ್ಮೆ ಇರಲಿ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next