ಬೀದರ್: ಬೀದರ್ ಜಿಲ್ಲೆಗೆ ಬೆಂಬಿಡದೇ ಕಾಡುತ್ತಿರುವ ಮಹಾಮಾರಿ ಕೋವಿಡ್-19 ಗುರುವಾರ 8 ತಿಂಗಳು ಮಗು ಮತ್ತು ಮೂವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸೇರಿ 8 ಜನರಿಗೆ ವಕ್ಕರಿಸಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 537ಕ್ಕೆ ಏರಿಕೆ ಕಂಡಿದೆ. ಇನ್ನೊಂದೆಡೆ 18 ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಹೊಸ ಸೋಂಕಿತರಲ್ಲಿ ಉತ್ತರಪ್ರದೇಶ ಅಂಬೇಡ್ಕರ ನಗರ, ಪಂಜಾಬ್‌ನ ಲೂಧಿಯಾನಾ ಮತ್ತು ಬಿಹಾರದ ಮಂಗರನ ಒಟ್ಟು ಮೂವರು ಯುವಕರಲ್ಲಿ ಕೋವಿಡ್-19 ಪತ್ತೆಯಾಗಿದ್ದು, ಇವರೆಲ್ಲರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿತ್ತು. ಹೊರ ರಾಜ್ಯ ಮತ್ತು ಜಿಲ್ಲೆ ಸಂಪರ್ಕದಿಂದಾಗಿ ಇವರಿಗೆ ಸೋಂಕು ತಗುಲಿದ್ದು, ಪರೀಕ್ಷೆಗೆ ಅವಕಾಶ ನೀಡಲಿಲ್ಲ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ.
18 ವರ್ಷದ ಪುರುಷ (ಪಿ-10202) ಉಡುಪಿ ಜಿಲ್ಲೆ ಸಂಪರ್ಕ, 20 ವರ್ಷದ ಪುರುಷ (ಪಿ-10203) ಪಂಜಾಬ್ ರಾಜ್ಯ ಮತ್ತು 16 ವರ್ಷದ ಪುರುಷ (ಪಿ-10204) ಬಿಹಾರ ರಾಜ್ಯದ ಸಂಪರ್ಕದಿಂದ ಹಾಗೂ 20 ವರ್ಷದ ಮಹಿಳೆ (ಪಿ- 10206) ತೆಲಂಗಾಣಾದ ಸಂಗಾರೆಡ್ಡಿ ಸಂಪರ್ಕದಿಂದ ಸೋಂಕು ಹರಡಿದೆ.
ಚಿಟಗುಪ್ಪದ 40 ವರ್ಷದ ಮಹಿಳೆ (ಪಿ-10205) ರೋಗಿ ಪಿ-8447ರ ಸಂಪರ್ಕ, 8 ತಿಂಗಳು ಗಂಡು ಮಗು (ಪಿ-10207) ರೋಗಿಗೆ ಪಿ-7957ರ ರೋಗಿಯ ಸಂಪರ್ಕ, ಬೀದರ ಮುಲ್ತಾನಿ ಕಾಲೋನಿಯ 32 ವರ್ಷದ ಪುರುಷ (ಪಿ-10208) ಮತ್ತು 55 ವರ್ಷದ ಪುರುಷ ಪಿ-10209 ರೋಗಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 537 ಆದಂತಾಗಿದೆ. 15 ಮಂದಿ ಸಾವನ್ನಪ್ಪಿದ್ದರೆ 396 ಮಂದಿ ಡಿಸಾcರ್ಜ್ ಆಗಿದ್ದು, 126 ಸಕ್ರೀಯ ಪ್ರಕರಣಗಳಿವೆ.
1383 ಜನರ ವರದಿ ಬಾಕಿ: ಕೋವಿಡ್-19 ಶಂಕಿತ 1383 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿದೆ. ಈವರೆಗೆ 36,257 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 34,337 ಮಂದಿಯದ್ದು ನೆಗೆಟಿವ್ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕಿತ 5228 ಮತ್ತು ದ್ವಿತೀಯ ಸಂಪರ್ಕಿತ 6139 ಜನರನ್ನು ಗುರುತಿಸಲಾಗಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.