ಬೀದರ್ : ಉತ್ತರ ಪ್ರದೇಶದ ಬಹ್ರೇಚನ್‌ನ ನೌನಿಹಾ ಮಂಡಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 8 ಜನರ ಪೈಕಿ ಒಂದೇ ಕುಟುಂಬದ 6 ಮಂದಿಯ ಅಂತ್ಯಕ್ರಿಯೆ ಸೋಮವಾರ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನೆರವೇರಿಸಲಾಯಿತು. ಇನ್ನಿಬ್ಬರ ಅಂತ್ಯಸಂಸ್ಕಾರ ತಾಲೂಕಿನ ಅಷ್ಟೂರ ಮತ್ತು ಕಲ್ಬುರ್ಗಿ ಜಿಲ್ಲೆಯ ಆಳಂದದಲ್ಲಿ ನಡೆಸಲಾಯಿತು. ನೂರಾರು ಜನರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಪುಣ್ಯ ಕ್ಷೇತ್ರ ಆಯೋಧ್ಯೆಗೆ ತೆರಳುತ್ತಿದ್ದ ಬೀದರನ ಗಣೇಶ ನಗರದ ಒಂದೇ ಕುಟುಂಬದ 16 ಜನರಿದ್ದ ಟೆಂಪೋ ಟ್ರಾವೆಲರ‍್ಸ್ (ಟಿಟಿ) ಮತ್ತು ಟ್ರಕ್ ನಡುವೆ ರವಿವಾರ ಬೆಳಿಗ್ಗೆ ಡಿಕ್ಕಿ ಸಂಭವಿಸಿ ಚಾಲಕ ಸೇರಿ 8 ಜನರು ಸಾವನ್ನಪ್ಪಿದ್ದರು. ನಗರದ ಗಾಂಧಿಗಂಜ್‌ನ ಉದ್ಯಮಿ ವಿಜಯಕುಮಾರ ಪಾಟೀಲ ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿ ಒಟ್ಟು 16 ಜನರು ವಿವಿಧ ತೀರ್ಥ ಕ್ಷೇತ್ರಗಳ ಪ್ರವಾಸ ಮುಗಿಸಿ ಆಯೋದ್ಯೇಗೆ ತೆರಳುವಾಗ ಭೀಕರ ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಅಸುನೀಗಿದ್ದ ಅನೀಲ ಪಾಟೀಲ (30), ಅವರ ಪತ್ನಿ ಶಿವಾನಿ (25), ತಾಯಿ ಜಗದೇವಿ (52), ಭಾವ ಸಂತೋಷ ಕಾಶಿನಾಥ (30), ಸಂಬಂಧಿಗಳಾದ ಶಶಿಕಲಾ (38) ಮತ್ತು ಮನ್ನಥ (36) ಅವರ ಅಂತ್ಯಕ್ರಿಯೆ ಸುಲ್ತಾನಪೂರದಲ್ಲಿ, ಅನೀಲ ಅವರ ಅತ್ತೆ ಸರಸ್ವತಿ ಜಗನ್ನಾಥ (47) ಅಷ್ಟೂರ ಗ್ರಾಮದಲ್ಲಿ ಮತ್ತು ಚಾಲಕ ವಿಠಲ್ ಅಂಬಾರಾಯ ಅವರ ಅಂತ್ಯಕ್ರಿಯೆ ಆಳಂದದಲ್ಲಿ ಸಾಯಂಕಾಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು.
ಉತ್ತರ ಪ್ರದೇಶದ ವಿಶೇಷ ವಿಮಾನದ ಮೂಲಕ 8 ಮಂದಿ ಪಾರ್ಥಿವ ಶರೀರಗಳನ್ನು ಮತ್ತು ಗಾಯಳುಗಳನ್ನು ಹೈದ್ರಾಬಾದ್‌ಗೆ ರವಾನಿಸಲಾಗಿತ್ತು. ಅಲ್ಲಿಂದ ಅಂಬುಲೆನ್ಸ್‌ಗಳ ಮೂಲಕ ಬೀದರಗೆ ಕರೆತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೃತ ದೇಹಗಳು ತರುತ್ತಿದ್ದಂತೆ ಸಂಬಂಧಿಕರು ಮತ್ತು ಆಪ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಕುಟುಂಬದವರನ್ನು ಕಳೆದುಕೊಂಡ ಅನೀಲ ಅವರ ತಂದೆ ವಿಜಯಕುಮಾರ ಆಕಾಶವೇ ಕಳಚಿ ಬಿದ್ದಂತೆ ರೋಧಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.
ಬೀದರಗೆ ಮೃತದೇಹಗಳು ಬರುತ್ತಿದ್ದಂತೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮತ್ತು ಎಸ್‌ಪಿ ಕಿಶೋರಬಾಬು ಅವರು ಜಿಲ್ಲಾಡಳಿತದ ಪರವಾಗಿ ಪುಷ್ಪ ಮಾಲೆ ಅರ್ಪಿಸಿದರು. ಶಾಸಕ ಬಂಡೆಪ್ಪ ಕಾಶೆಂಪುರ್, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಮತ್ತು ಕಾಂಗ್ರೆಸ್ ಮುಖಂಡ ಚಂದ್ರಾಸಿಂಗ್ ಇನ್ನಿತರ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.