ಬೀದರ್: ಕೋವಿಡ್-19 ಹೆಮ್ಮಾರಿಯ ಅಟ್ಟಹಾಸಕ್ಕೆ ಬಿಸಿಲೂರಿನ ಜನ ಅಕ್ಷರಶ: ಬೆಚ್ಚಿ ಬಿದ್ದಿದ್ದಾರೆ. ಸೋಮವಾರ ಮತ್ತೆ 8 ಜನ ಸೋಂಕಿತರನ್ನು ಸಾವಿನ ಕೂಪಕ್ಕೆ ತಳ್ಳುವ ಮೂಲಕ ಗಡಿ ನಾಡಿನಲ್ಲಿ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ವೈರಸ್‌ನ ದಾಳಿಗೆ ಕೇವಲ ಮೂರು ದಿನದಲ್ಲಿ 23 ಜನರು ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಶನಿವಾರ 6 ಜನ ಮತ್ತು ರವಿವಾರ 9 ಜನರನ್ನು ಬಲಿ ಪಡೆದಿರುವ ಕೋವಿಡ್ ಸೋಂಕು ಸತತ ಮೂರನೇ ದಿನವೂ ಮತ್ತೆ 8 ಜನರೊಂದಿಗೆ ಸಾವಿನ ಬೇಟೆಯನ್ನಾಡಿದೆ. ಈ ಪೈಕಿ ಐದು ಮೃತರಲ್ಲಿ ಕೋವಿಡ್ ನ ಯಾವುದೇ ಲಕ್ಷಣಗಳೇ ಇಲ್ಲದಿರುವುದು ಭೀತಿ ಹೆಚ್ಚಿಸಿದೆ.
ಜಿಲ್ಲೆಯಲ್ಲಿ ವೈರಸ್‌ನಿಂದಾಗಿ ಈವರೆಗೆ 45 ಜನರು ಸಾವನ್ನಪ್ಪಿದಂತಾಗಿದೆ. ನೆರೆಯ ಮಹಾರಾಷ್ಟ್ರ, ತೆಲಂಗಾಣದಿಂದ ವಲಸಿಗರ ಆಗಮನ, ಕೊನೆ ಕ್ಷಣದಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲು ಮತ್ತು ಅವರಲ್ಲಿ ಕಿಡ್ನಿ, ಶುಗರ್- ರಕ್ತದೊತ್ತಡ ಸಮಸ್ಯೆಗಳಿರುವುದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನುತ್ತಿದ್ದಾರೆ ವೈದ್ಯಾಧಿಕಾರಿಗಳು.
90 ವರ್ಷದ ಹೆಣ್ಣು ಪಿ- ಬಿಡಿಆರ್ 756, 75 ವರ್ಷದ ಗಂಡು ಪಿ-ಬಿಡಿಆರ್ 757, 70 ವರ್ಷದ ಗಂಡು ಪಿ-ಬಿಡಿಆರ್ 758, 22 ವರ್ಷದ ಗಂಡು ಪಿ-ಬಿಡಿಆರ್ 759, 65 ವರ್ಷದ ಹೆಣ್ಣು ಪಿ- ಬಿಡಿಆರ್ 760, 64 ವರ್ಷದ ಗಂಡು ಪಿ-ಬಿಡಿಆರ್746, 65 ವರ್ಷದ ಹೆಣ್ಣು ಪಿ- ಬಿಡಿಆರ್761 ಮತ್ತು 40 ವರ್ಷದ ಗಂಡು ಪಿ-ಬಿಡಿಆರ್762 ರೋಗಿಗಳು ಸಾವನ್ನಪ್ಪಿದ್ದಾರೆ.
ಇನ್ನೊಂದೆಡೆ ಜಿಲ್ಲೆಯಲ್ಲಿ ಸೋಮವಾರ ಮತ್ತೆ 44 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 799ಕ್ಕೆ ಏರಿಕೆ ಆಗಿದೆ. ಅದರಲ್ಲಿ 561 ಮಂದಿ ಗುಣಮುಖರಾಗಿದ್ದರೆ 194 ಕೇಸ್‌ಗಳು ಸಕ್ರೀಯವಾಗಿವೆ.