ಬೀದರ: ಲೋಹದ ಹಕ್ಕಿಗಳಲ್ಲಿ ಹಾರಾಡಬೇಕೆಂಬ ಬೀದರ ಜನರ ದಶಕದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಜಿಎಂಆರ್ ಸಂಸ್ಥೆಯ ಆಕ್ಷೇಪ ಸೇರಿ ಎಲ್ಲ ವಿಘ್ನಗಳು ಈಗ ನಿವಾರಣೆಯಾಗಿದ್ದು, ಟರ್ಮಿನಲ್ ನವೀಕರಣ ಕೆಲಸ ಭರದಿಂದ ಸಾಗಿದೆ. ಜ.26ಕ್ಕೆ ಆರಂಭಿಕವಾಗಿ ಟ್ರೂ ಜೆಟ್ ಕಂಪನಿ ವಿಮಾನ ಸೇವೆ ಒದಗಿಸಲು ಸಜ್ಜಾಗಿದೆ.
ವಾಯು ಸೇನಾ ತರಬೇತಿ ಕೇಂದ್ರದ ನೆಲೆಯಾಗಿರುವ ಬೀದರನಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ದಶಕದಿಂದ ವಿಮಾನಯಾನ ನನೆಗುದಿಗೆ ಬಿದ್ದಿತ್ತು. ಇದಕ್ಕಾಗಿ 10 ವರ್ಷಗಳ ಹಿಂದೆಯೇ ಸರ್ಕಾರ ಚಿದ್ರಿ ಬಳಿ 870 ಚದರ ಮೀಟರ್ ಭೂಮಿ ಗುತ್ತಿಗೆ ಪಡೆದು 3 ಕೋಟಿ ವೆಚ್ಚದಲ್ಲಿ ಏರ್ ಟರ್ಮಿನಲ್ ನಿರ್ಮಿಸಿತ್ತು. ಆದರೆ, ವಿಮಾನ ಹಾರಾಟಕ್ಕೆ ಅಡ್ಡಿಯಾಗಿದ್ದ ಜಿಎಂಆರ್ ಕಂಪನಿ ಜತೆಗಿನ ವಿಮಾನ ಪ್ರಾ ಧಿಕಾರದ ಹಳೆ ಒಪ್ಪಂದ ಕಗ್ಗಂಟಾಗಿತ್ತು. ಹಾಗಾಗಿ ಕೇಂದ್ರದ “ಉಡಾನ್’ ಯೋಜನೆಯಡಿ ಬೀದರ ಮೊದಲ ಹಂತದಲ್ಲೇ ಆಯ್ಕೆಯಾದರೂ ವಿಮಾನ ಮಾತ್ರ ಹಾರಾಡಲಿಲ್ಲ.
ಜಿಎಂಆರ್ ಸಂಸ್ಥೆಯೇ ನಿರ್ವಹಣೆ: ಬೀದರನ ಏರ್ ಟರ್ಮಿನಲ್ ಹೈದ್ರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 150 ಕಿಮೀ ವ್ಯಾಪ್ತಿಯಲ್ಲಿದೆ. ಹೀಗಾಗಿ ಹೈದ್ರಾಬಾದ್ ನಿಲ್ದಾಣದ ಉಸ್ತುವಾರಿ ಹೊತ್ತಿರುವ ಜಿಎಂಆರ್ ಸಂಸ್ಥೆಯು ಬೀದರನಿಂದ ವಿಮಾನಯಾನಕ್ಕೆ ಅಡ್ಡಗಾಲು ಹಾಕಿತ್ತು. ಕಳೆದ ಎಂಟು ವರ್ಷಗಳಿಂದ ಸಂಸ್ಥೆ ಜತೆಗಿನ ಚರ್ಚೆ ಬಳಿಕ ತಾಂತ್ರಿಕ ಸಮಸ್ಯೆಗೆ ಕಳೆದ ತಿಂಗಳಷ್ಟೇ ಮುಕ್ತಿ ಸಿಕ್ಕಿದೆ. ಅಷ್ಟೇ ಅಲ್ಲ ಬೀದರ ಟರ್ಮಿನಲ್ ನಿರ್ವಹಣೆ ಮಾಡುವ ಕುರಿತು ಜಿಎಂಆರ್ ಸಂಸ್ಥೆಯೇ ರಾಜ್ಯ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಮುಂದಿನ 2023ರವರೆಗಿನ ಅವಧಿವರೆಗೆ ಈ ಒಪ್ಪಂದ ಇರಲಿದೆ.
2008ರಲ್ಲಿ ನಿರ್ಮಿಸಿರುವ ತಾತ್ಕಾಲಿಕ ಏರ್ ಟರ್ಮಿನಲ್ ನಿರ್ವಹಣೆ ಇಲ್ಲದೇ ಹಾಳು ಕೊಂಪೆಯಾಗಿರುವ ಕಾರಣ ನವೀಕರಣ ಸೇರಿ ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರ 11 ಕೋಟಿ ರೂ. ಒದಗಿಸಿದೆ. ನಿಲ್ದಾಣಕ್ಕಾಗಿ ಅಗತ್ಯವಿರುವ 21.6 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಟರ್ಮಿನಲ್ ಕಸ್ಟಮ್ ಅಧಿಕಾರಿಗಳ ಹಾಲ್, ಟ್ರಾಫಿಕ್ ಆಪರೇಟರ್ ಕೊಠಡಿ, ವಿಶ್ರಾಂತಿ ಕೋಣೆ ಒಳಗೊಂಡಿದೆ. ವಿದ್ಯುತ್ ಸಂಪರ್ಕ, ಕಾರ್ ಪಾರ್ಕಿಂಗ್, ನೀರಿನ ವ್ಯವಸ್ಥೆ ಕಲ್ಪಿಸುವ ಕೆಲಸ ತೀವ್ರಗತಿಯಲ್ಲಿ ನಡೆದಿದೆ.
ಜ.24ಕ್ಕೆ ಟರ್ಮಿನಲ್ ಹಸ್ತಾಂತರ: ನವೀಕೃತ ಏರ್ ಟರ್ಮಿನಲ್ ಜ.24ರಂದು ಜಿಎಂಆರ್ ಸಂಸ್ಥೆಗೆ ಹಸ್ತಾಂತರಗೊಳ್ಳಲಿದೆ. ಟರ್ಮಿನಲ್ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಜಿಎಂಆರ್ ಸಂಸ್ಥೆಯೇ ಅಧಿಕಾರಿಗಳು, ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಭದ್ರತಾ ವ್ಯವಸ್ಥೆಗಾಗಿ ಜಿಲ್ಲಾ ಪೊಲೀಸ್ ಇಲಾಖೆಯೂ ಸಿಬ್ಬಂದಿಗಳನ್ನು ನಿಯೋಜಿಸಿ ಈಗಾಗಲೇ ಅಗತ್ಯ ತರಬೇತಿ ನೀಡಲಾಗುತ್ತಿದೆ. ಒಂದೊಮ್ಮೆ ನವೀಕರಣ ಕೆಲಸ ಅಪೂರ್ಣವಾಗಿದ್ದರೂ ವಾಯುಪಡೆಗೆ ಸೇರಿದ ರನ್‌ವೇ ಬಳಸಿಕೊಂಡು ಜ.26ಕ್ಕೆ ಮೊದಲ ವಿಮಾನ ಲ್ಯಾಂಡಿಂಗ್ ಆಗಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೀದರ ನಿಲ್ದಾಣ ಉಡಾನ್ ಯೋಜನೆಯ ಪ್ರಾದೇಶಿಕ ಸಂಪರ್ಕ ಅಡಿಯಲ್ಲಿ ಸೇರಿದ್ದು, ಬೀದರನಿಂದ ಯಾವ್ಯಾವ ಮಾರ್ಗಗಳಲ್ಲಿ ವಿಮಾನಯಾನ ಆರಂಭಿಸಬೇಕು ಎಂಬುದನ್ನು ಜಿಎಂಆರ್ ಸಂಸ್ಥೆ ನಿರ್ಧರಿಸಲಿದೆ. ಮೊದಲ ಹಂತದಲ್ಲಿ ಬೀದರ-ಬೆಂಗಳೂರು ನಡುವೆ ಮಾತ್ರ ಗಗನಯಾನ ಲಭ್ಯವಾಗಲಿದೆ. ನಂತರ ದೇಶದ ಇತರ ನಗರಕ್ಕೆ ಸೇವೆ ವಿಸ್ತರಣೆ ಆಗಲಿದೆ.
ಗಣರಾಜ್ಯೋತ್ಸವದಂದು ವಿಮಾನಯಾನ ಆರಂಭವಾಗಲಿದೆ. ಟರ್ಮಿನಲ್ ನವೀಕರಣ ಕಾರ್ಯ ದಿನದ 24 ಗಂಟೆ ನಡೆಸಲಾಗುತ್ತಿದ್ದು, ಜ.24ಕ್ಕೆ ಟರ್ಮಿನಲ್‌ನ್ನು ಜಿಎಂಆರ್ ಸಂಸ್ಥೆಗೆ ಹಸ್ತಾಂತರ ಮಾಡಲಾಗುವುದು. ಸಂಸ್ಥೆಯೇ ಸಿಬ್ಬಂದಿಗಳನ್ನು ನೇಮಕ ಮಾಡಲಿದ್ದು, ಭದ್ರತೆ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ಟ್ರೂ ಜೆಟ್ ಕಂಪನಿ ಆರಂಭಿಕವಾಗಿ ವಿಮಾನ ಸೇವೆ ನೀಡಲಿದೆ.
–ಡಾ| ಎಚ್.ಆರ್.ಮಹಾದೇವ, ಜಿಲ್ಲಾಧಿಕಾರಿ
ಬೀದರನಿಂದ ವಿಮಾನ ಹಾರಾಡಬೇಕೆಂಬ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಜಿಎಂಆರ್ ಸಂಸ್ಥೆಯೇ ಬೀದರ ನಿಲ್ದಾಣದ ನಿರ್ವಹಣೆ ಮಾಡಲಿದೆ. ಈಗಾಗಲೇ ಘೋಷಿಸಿದಂತೆ ವಿಮಾನಯಾನ ಶುರುವಾಗಲಿದೆ. ಮುಖ್ಯಮಂತ್ರಿಗಳಿಂದ ಅಧಿಕೃತವಾಗಿ ಚಾಲನೆ ನೀಡುವ ಪ್ರಯತ್ನ ನಡೆದಿದೆ. –
ಭಗವಂತ ಖೂಬಾ, ಸಂಸದ, ಬೀದರ
–ಶಶಿಕಾಂತ ಬಂಬುಳಗೆ