ಬೀದರ್: ಗಡಿ ನಾಡು ಬೀದರ್ ಗೆ ಮಹಾರಾಷ್ಟ್ರದ ಕಂಟಕ ಬೆಂಬಿಡದೇ ಕಾಡುತ್ತಿದ್ದು, ರವಿವಾರ ಮತ್ತೆ ರಕ್ಕಸ ಕೋವಿಡ್ 19 ಸೋಂಕಿನ 6 ಪ್ರಕರಣಗಳು ವರದಿಯಾಗುವ ಮೂಲಕ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಎಲ್ಲ ಸೋಂಕಿತರು ಮಹಾರಾಷ್ಟ್ರದ ಸಂಪರ್ಕ ಹೊಂದಿದ್ದು, ಈವರೆಗೆ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 85ಕ್ಕೆ ಏರಿಕೆಯಾಗಿದೆ.
ಪ್ರತಿ ದಿನ ಪಾಸಿಟಿವ್ ಸಂಖ್ಯೆ ಹೆಚ್ಚಿಸುವ ಮೂಲಕ ಕೋವಿಡ್ 19 ಜಿಲ್ಲೆಯಲ್ಲಿ ತಲ್ಲಣ ಮೂಡಿಸುತ್ತಿದೆ. ಆರಂಭದಲ್ಲಿ ತಬ್ಲೀಘಿಗಳ ನಂಟಿನಿಂದ ವೈರಾಸು ಬೀದರಗೆ ಒಕ್ಕರಿಸಿತ್ತು. ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದ ಸೋಂಕಿನ ಆರ್ಭಟ ಈಗ ಮಹಾರಾಷ್ಟ್ರದ ಕಂಟಕದಿಂದ ಹಳ್ಳಿ ಹಳ್ಳಿಗೆ ವ್ಯಾಪಿಸುತ್ತಿದೆ. ಮುಂಬೈ, ಸೊಲ್ಲಾಪುರ ಸೇರಿದಂತೆ ವಿವಿಧೆಡೆಯಿಂದ ಜಿಲ್ಲೆಯ ವಲಸಿಗರು ಆಗಮಿಸುತ್ತಿರುವುದು ಸೋಂಕಿತರ ಸಂಖ್ಯೆ ಹೆಚ್ಚಲು ಕಾರಣವಾಗುತ್ತಿದೆ.
ಹೊಸ ಸೋಂಕಿತರ 6 ಜನರಲ್ಲಿ ಮೂವರು 9 ವರ್ಷದೊಳಗಿನ ಮಕ್ಕಳು ಸೇರಿರುವುದು ಆಘಾತವನ್ನುಂಟು ಮಾಡಿದೆ. ಅದರಲ್ಲಿ 1.7 ವರ್ಷದ ಹೆಣ್ಣು ಮಗುವಿಗೂ ಸಹ ವೈರಸ್ ಒಕ್ಕರಿಸಿದೆ. ಬಸವಕಲ್ಯಾಣ ತಾಲೂಕಿನ ಧನ್ನೂರ(ಕೆ) ಗ್ರಾಮದ ಇಬ್ಬರು, ಉಜಳಂಬ ಗ್ರಾಮದ ಒಬ್ಬರು, ಹುಮನಾಬಾದ ತಾಲೂಕಿನ ಲಾಲಧರಿ ತಾಂಡಾದ ಇಬ್ಬರು ಮತ್ತು ಹಣಕುಣಿ ಗ್ರಾಮದ ಒಬ್ಬರಲ್ಲಿ ವೈರಸ್ ಪತ್ತೆಯಾಗಿದೆ.
54 ವರ್ಷದ ಪುರುಷ (ಪಿ 2059), 1.7 ವರ್ಷದ ಹೆಣ್ಣು ಮಗು (ಪಿ 2060), 7 ವರ್ಷದ ಬಾಲಕ (ಪಿ 2061), 9 ವರ್ಷದ ಬಾಲಕ (ಪಿ 2062), 25 ವರ್ಷದ ಯುವಕ (ಪಿ 2063)ಮತ್ತು 21 ವರ್ಷದ ಯುವಕ (ಪಿ 2064)ನಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಸಂಜೆಯ ಹೇಲ್ತ್ ಬುಲೇಟಿನ್ ದೃಢಪಡಿಸಿದೆ.
ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 85 ಕ್ಕೆ ಏರಿಕೆ ಆಗಿದೆ. ಅದರಲ್ಲಿ 2 ಮೃತಪಟ್ಟರೆ, 21 ಜನ ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇನ್ನೂ 62 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.