ಬೀದರ್: ಗಡಿ ನಾಡು ಬೀದರ್‌ನಲ್ಲಿ ಪೊಲೀಸ್‌ಸಿಬ್ಬಂದಿಗಳನ್ನು ರಕ್ಕಸ ಕೋವಿಡ್ ಬೆಂಬಿಡದೇ ಕಾಡುತ್ತಿದ್ದು, ಶುಕ್ರವಾರ ಮತ್ತೆ ಪಿಎಸ್‌ಐ ಸೇರಿ ಮೂವರು ಭದ್ರತಾ ಸಿಬ್ಬಂದಿಗಳಿಗೆ ವೈರಸ್ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಒಂದೇ ದಿನ 28 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ.
ಗಾಂಧಿ ಗಂಜ್ ಠಾಣೆಯ 59 ವರ್ಷದ ಪಿಎಸ್‌ಐ, ಜಿಲ್ಲೆಯ 55 ವರ್ಷದ ಎಪಿಸಿ ಮತ್ತು ೩೪ ವರ್ಷದ ಹೋಮ್ ಗಾರ್ಡ್‌ಗೆ ಕೋವಿಡ್ ಬಾಧಿಸಿದೆ. ಗುರುವಾರವಷ್ಟೇ ಜಿಲ್ಲೆಯಲ್ಲಿ ಯೋಧ ಮತ್ತು ಮೂವರು ಕೆಎಸ್‌ಆರ್‌ಪಿ ಪೇದೆಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದಕ್ಕೂ ಮುನ್ನ ಮೇಹಕರ್ ಠಾಣೆಯ ಎಎಸ್‌ಐ, ಮಹಿಳಾ ಪೇದೆ, ಗಾಂಧಿ ಗಂಜ್ ಠಾಣೆಯ ಪೇದೆಗೆ ವೈರಸ್ ತಗುಲಿತ್ತು.
ಜಿಲ್ಲೆಯಲ್ಲಿ ಶುಕ್ರವಾರ 28 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಬೀದರ ನಗರದ 12 ಕೇಸ್‌ಗಳು ಸೇರಿವೆ. ಉಳಿದಂತೆ ಬಸವಕಲ್ಯಾಣ ನಗರ, ತಾಲೂಕಿನ ಲಾಡವಂತಿ, ಜೊಗೆವಾಡಿ, ಕಾಂಬಳೆವಾಡಿ, ತಡೋಳಾ, ಹಿರೇನಗಾಂವ್ ಮತ್ತು ಮೋರ್ಖಂಡಿಯಲ್ಲಿ ತಲಾ 1 ಕೇಸ್ ಸೇರಿ ಒಟ್ಟು 2, ಭಾಲ್ಕಿ ಪಟ್ಟಣದ 1, ಗೋರಚಿಂಚೋಳಿ, ಲೋಖಂಡಿ ಮತ್ತು ನಾವದಿಗಲ್ಲಿ ತಲಾ 1 ಸೇರಿ ಒಟ್ಟು 4 ಕೇಸ್, ಹುಮನಾಬಾದ ಪಟ್ಟಣ 2, ತಾಲೂಕಿನ ಮದರಗಾಂವ ಗ್ರಾಮದ 1, ಔರಾದ ತಾಲೂಕಿನ ಆತನೂರ ಮತ್ತು ಹಾಲಹಳ್ಳಿ ಗ್ರಾಮದಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಈವರೆಗೆ 675 ಸೋಂಕಿತರು ಪತ್ತೆಯಾದಂತಾಗಿದೆ. ಇದರಲ್ಲಿ 12 ಜನ ಸಾವನ್ನಪ್ಪಿದ್ದರೆ, 500 ಜನ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇನ್ನೂ 154 ಸಕ್ರೀಯ ಪ್ರಕರಣಗಳಿವೆ.
2159 ಜನರ ವರದಿ ಬಾಕಿ: ಬೀದರ ಜಿಲ್ಲೆಯಲ್ಲಿ ಇನ್ನೂ ಕೋವಿಡ್ ಶಂಕಿತ 2159 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿದೆ. ಈವರೆಗೆ 39,583 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 36,749 ಮಂದಿಯದ್ದು ನೆಗೆಟಿವ್ ಬಂದಿದೆ ಎಂದು ಹೇಲ್ತ್ ಬುಲೇಟಿನ್ ತಿಳಿಸಿದೆ.