ಕಲಬುರಗಿ: ಗ್ರಾಪಂ ಚುನಾಯಿತ ಆಡಳಿತಾವಧಿ ಮುಕ್ತಾಯವಾಗಿದ್ದು, ಈಗ ಪಿಡಿಒ ಅಧಿಕಾರಿಗಳದ್ದೇ ಆಟ ಎನ್ನುವಂತಾಗಿದೆ. ಹೀಗಾಗಿ ಕಳೆದೊಂದು ವರ್ಷದಿಂದ ಹಲವು ಗ್ರಾಪಂಗಳಲ್ಲಿ ಹಲವು ಕಾಮಗಾರಿಗಳು ಕಾಗದದಲ್ಲೇ ಮುಗಿದಿವೆ. ಕಾಗದದಲ್ಲೇ ಮುಗಿದ ಕುಡಿಯುವ ನೀರಿನ ಕಾಮಗಾರಿಗಳಂತು ಲೆಕ್ಕವೇ ಇಲ್ಲ ಎನ್ನುವಂತಿದೆ.
ಅದರಂತೆ ಮನೆ ಇದ್ದವರಿಗೆ ಮನೆ ಹಂಚಿಕೆ, ಅದರಲ್ಲೂ ಒಂದೇ ಮನೆಯವರಿಗೆ ಎರಡೆರಡು ಮನೆ, ಶೌಚಾಲಯ ಪ್ರೋತ್ಸಾಹ ಧನದಲ್ಲೂ ಗೋಲ್ ಮಾಲ್ ನಡೆದಿದೆ. ಸಾಮಾನ್ಯ ವರ್ಗದ ಜನರಿಗೆ ಪರಿಶಿಷ್ಟ ವರ್ಗದ ಪ್ರೋತ್ಸಾಹ ಧನ ಮಂಜೂರಾತಿ ಮಾಡಿ ಹಿಂದಿನಿಂದ ಹೆಚ್ಚುವರಿ ಹಣ ಪಡೆದಿರುವಂತಹ ಘೋರ ಪ್ರಕರಣಗಳು ಸಹ ನಡೆದಿವೆ. ಇದೆಲ್ಲದರ ಕಾರಣಕ್ಕೆ ಇನ್ನೂ ಗ್ರಾಮಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದೇ ಯಥಾಸ್ಥಿತಿಯಲ್ಲಿವೆ.
ಬೋಗಸ್ ಬಿಲ್ ಸೃಷ್ಟಿಸಿ ಹಣ ದುರ್ಬಳಕೆ ಹಾಗೂ ಕಾಗದದಲ್ಲೇ ಕಾಮಗಾರಿ ಪೂರ್ಣಗೊಂಡಿರುವ ಹಾಗೂ ಇತರ ಅವ್ಯವಹಾರ ಆರೋಪ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕಿನ ಬಿದನೂರ ಗ್ರಾಪಂನಲ್ಲಿ ಪಿಡಿಒ ವಿರುದ್ಧ ತನಿಖಾ ವರದಿ ರೂಪಿಸಿ ವಾರದೊಳಗೆ ಸಲ್ಲಿಸುವಂತೆ ಜಿಪಂ ಸಿಇಒ ಅಫಜಲಪುರ ತಾಪಂ ಇಒಗೆ ಸೂಚಿಸಿದ್ದಾರೆ.
ಅವ್ಯವಹಾರಗಳ ವಿವರ: ಪಿಡಿಒ ಲಕ್ಷ್ಮೀ ಅವರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೇ ತಮಗೆ ಬೇಕಾದ ವ್ಯಕ್ತಿಗಳಿಗೆ ಕೂಲಿ ಕೆಲಸ ಕೊಟ್ಟು ಬ್ಯಾಂಕ್‌ಗಳಿಂದ ಹಣ ಡ್ರಾ ಮಾಡಿಕೊಂಡಿರುವುದು, 14ನೇ ಹಣಕಾಸು ಯೋಜನೆ ಅಡಿಯಲ್ಲಿ ಕೆಲವು ಕಾಮಗಾರಿಗಳು ಅಧ್ಯಕ್ಷರ ಹಾಗೂ ಸದಸ್ಯರ ಗಮನಕ್ಕೆ ತರದೇ ಬೇಕಾದ ವ್ಯಕ್ತಿಯಿಂದ ಕೆಲಸ ಕೈಗೊಂಡು ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪಗಳಿವೆ.
ಬಹು ಮುಖ್ಯವಾಗಿ ಕುಡಿಯುವ ಕರ (ಟ್ಯಾಕ್ಸ್) ವಸೂಲಾತಿ ಕೈಗೊಂಡು ಅದನ್ನು ಸರ್ಕಾರಕ್ಕೆ ಜಮಾ ಮಾಡದೇ ವೈಯಕ್ತಿಕವಾಗಿ ಬಳಸಿಕೊಂಡು ಕುಡಿಯುವ ನೀರಿನ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆಯೆಂದು ಕಲಬುರಗಿ ನಗರದ ಎಂಟರ್ ಪ್ರೈಸೆಸ್‌ನಿಂದ ಬೋಗಸ್ ಬಿಲ್ ಪಡೆದು ಹಚ್ಚಿ ಹಣ ಎತ್ತಿ ಹಾಕಲಾಗಿದೆ. ಏಕೆಂದರೆ ಬಿದನೂರ ಗ್ರಾಮದಲ್ಲಿ ಬಾವಿ ನೀರೆ ಬಳಕೆ ಮಾಡಲಾಗುತ್ತದೆ. ಬೋರ್‌ವೆಲ್, ಮೋಟಾರ್ ರಿಪೇರಿ ಹಾಗೂ ವಿದ್ಯುತ್ ಉಪಕರಣ ಸಾಮಾನುಗಳನ್ನು ಖರೀದಿಸಲಾಗಿದೆ ಎಂದು ಬಿಲ್ ಹಚ್ಚಿ ಹಣ ದುರ್ಬಳಕೆ ಮಾಡಿಕೊಂಡಿಲ್ಲದೇ ಕಾಮಗಾರಿಗಳ ಬಿಲ್ಲುಗಳಲ್ಲಿನ ಟಿಡಿಎಸ್‌ನ ಹಣವು ಸಹ ಸರ್ಕಾರಕ್ಕೆ ಸಂದಾಯ ಮಾಡದೇ ಈ ಹಣವನ್ನು ಡ್ರಾ ಮಾಡಿಕೊಂಡಿರುವುದು ಸೇರಿದಂತೆ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ಎಸಗಿರುವುದು ಸೇರಿದಂತೆ ಇತರ ಸಾಲು-ಸಾಲು ಅವ್ಯವಹಾರದ ಆರೋಪಗಳ ಕುರಿತು ವಿಚಾರಣೆಗೈದು ಸಮಗ್ರ ತನಿಖಾ ವರದಿ ಸಲ್ಲಿಸುವಂತೆ ತಾಪಂ ಇಒ ಅವರಿಗೆ ಸೂಚಿಸಲಾಗಿದೆ.
ಬಿದನೂರ ಪಿಡಿಒ ವಿರುದ್ಧ ತನಿಖೆಗೆ ಸಿಇಒ ಆದೇಶ ನೀಡಿದ್ದಾರೆಂದು ಗೊತ್ತಾಗಿದೆ. ಆದರೆ ಆದೇಶ ಕೈ ಸೇರಿಲ್ಲ. ಆದೇಶ ಸಿಕ್ಕ ನಂತರ ತನಿಖೆ ಕೈಗೆತ್ತಿಕೊಂಡು ವರದಿ ಸಲ್ಲಿಸಲಾಗುವುದು. ಆದರೆ ಗೊಬ್ಬುರ ಬಿ. ಗ್ರಾಪಂನಲ್ಲಿ ಶೌಚಾಲಯ ಅನುದಾನ ದುರ್ಬಳಕೆ ಸೇರಿ ಇತರ ಅವ್ಯವಹಾರ ತನಿಖೆ ಪ್ರಗತಿಯಲ್ಲಿದೆ.
-ಡಾ.ಶಂಕರ ಕಣ್ಣೆ, ಇಒ, ತಾಪಂ ಅಫಜಲಪುರ.
-ಹಣಮಂತರಾವ ಭೈರಾಮಡಗಿ