Advertisement

ಬೀದಿ ಹೆಣವಾಗುತ್ತಿವೆ ಬೀಡಾಡಿ ಜಾನುವಾರುಗಳು

05:52 PM Dec 06, 2021 | Team Udayavani |

ಕೋಟ: ಹೈನುಗಾರರು ತಮ್ಮ ಮನೆಯ ಗಂಡು ಕರುಗಳನ್ನು ಬೀದಿಗೆ ತಂದು ಬಿಡುವ ಪರಿಪಾಟ ದಿನದಿಂದ ದಿನಕ್ಕೆ
ಹೆಚ್ಚುತ್ತಿದ್ದು, ಸಾಲಿಗ್ರಾಮ ಪ.ಪಂ. ವ್ಯಾಪ್ತಿಯಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಇವುಗಳಿಂದ ಕೃಷಿ ಬೆಳೆಗಳಿಗೆ ಹಾನಿ ಒಂದೆಡೆಯಾದರೆ, ರಾತ್ರಿ ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗುವ ಇವುಗಳು ಅಪಘಾತಕ್ಕೀಡಾಗಿ
ಸಾವನ್ನಪ್ಪುತ್ತಿರುವುದು ಆತಂಕಕಾರಿಯಾಗಿದೆ.

Advertisement

ನ. 22ರಂದು ಸಾಲಿಗ್ರಾಮ ಮೀನು ಮಾರುಕಟ್ಟೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿದ್ದ ಬೀಡಾಡಿ ಕರುಗಳ ಪೈಕಿ ಎರಡು ಗಂಡು ಕರು ಅಪರಿಚಿತ ವಾಹನ ಢಿಕ್ಕಿ ಹೊಡೆದು ಮೃತಪಟ್ಟಿದ್ದು, ಮತ್ತೆರಡು ಗಂಭೀರವಾಗಿ ಗಾಯಗೊಂಡಿದ್ದವು. ಇದಕ್ಕೂ ಮೊದಲು ಗುಂಡ್ಮಿ ಸಮೀಪ ಎರಡು ಗಂಡು ಕರು, ಟೋಲ್‌ ಸಮೀಪ ಒಂದು ಗಂಡು ಕರು ಸೇರಿದಂತೆ ವಾರದಲ್ಲೇ ಐದು ಜಾನುವಾರು ಮೃತಪಟ್ಟಿವೆ. ಹೀಗಾಗಿ ಇವುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಮನವಿ ಸಾರ್ವಜನಿಕರಿಂದ ಕೇಳಿಬಂದಿದೆ.

ಬೆಳೆ ನಾಶದ ಚಿಂತೆ
ಬೀಡಾಡಿ ಕರುಗಳು ನೇರವಾಗಿ ಕೃಷಿಭೂಮಿಗೆ ಲಗ್ಗೆ ಇಟ್ಟು ಬೆಳೆದ ಭತ್ತ, ಶೇಂಗಾ, ವಿವಿಧ ತರಕಾರಿ ಬೆಳೆಗಳನ್ನು ನಾಶ ಮಾಡಿವೆ. ಬೆದರಿಸಿ ಓಡಿಸಲು ಮುಂದಾದರೂ ದಷ್ಟಪುಟ್ಟವಾಗಿ ಬೆಳೆದ ಇವುಗಳು ರೈತರನ್ನೇ ಅಟ್ಟಾಡಿಸುತ್ತವೆ. ಹೀಗಾಗಿ ಇಲ್ಲಿನ ಪಾರಂಪಳ್ಳಿ, ಚಿತ್ರಪಾಡಿ, ಗುಂಡ್ಮಿ, ಪಡುಕರೆ, ಕಾರ್ಕಡ ಮುಂತಾದ ಭಾಗದ ರೈತರಿಗೆ ತಮ್ಮ ಬೆಳೆ ರಕ್ಷಿಸಿಕೊಳ್ಳುವುದೇ ಸಮಸ್ಯೆಯಾಗಿದೆ. ಒಮ್ಮೊಮ್ಮೆ ರಾತ್ರಿ ಹತ್ತಾರು ಜಾನುವಾರುಗಳು ಒಟ್ಟಾಗಿ ಗದ್ದೆಯಲ್ಲಿ ಬೆಳೆದ ಸಂಪೂರ್ಣ ಬೆಳೆಯನ್ನೇ ಖಾಲಿ ಮಾಡಿರುವ ಉದಾಹರಣೆಗವೂ ಇದೆ.

ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ ಮಧ್ಯೆ ಹಾಗೂ ರಸ್ತೆಯ ಮೇಲೆ ಇವುಗಳು ಮಲಗುತ್ತವೆ. ವೇಗವಾಗಿ ಚಲಿಸುವ ಘನ ವಾಹನಗಳು ರಸ್ತೆಯಲ್ಲಿ ಮಲಗಿದ ಕರುಗಳನ್ನು ಗಮನಿಸದೆ ಅಪಘಾತ ಸಂಭವಿಸುತ್ತವೆ. ಸ್ಥಳೀಯ ಮಾಹಿತಿ ಪ್ರಕಾರ ಕಳೆದ ಒಂದು ವರ್ಷದಲ್ಲಿ ಸುಮಾರು 15ಕ್ಕೂ ಹೆಚ್ಚು ಬೀಡಾಡಿ ಕರುಗಳು ಈ ರೀತಿ ಮೃತಪಟ್ಟ ವರದಿಯಾಗಿದೆ.

ಬೆಳೆ ಹಾನಿ ತಡೆಗಟ್ಟಿ
ಗಂಡುಕರುಗಳನ್ನು ಬೀದಿಗೆ ಬಿಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಸ್ತುತ ಓಡಾಡಿಕೊಂಡಿರುವ ಇವುಗಳನ್ನು ಗೋಶಾಲೆಗೆ ಒಪ್ಪಿಸಬೇಕು. ಈ ಮೂಲಕ ಬೆಳೆಗೆ ಉಂಟಾಗುವ ಹಾನಿಯನ್ನು ತಡೆಯುವುದರ ಜತೆಗೆ ಕರುಗಳು ಬೀದಿ ಹೆಣವಾಗುವುದನ್ನು ತಪ್ಪಿಸಬಹುದು ಎಂಬುದು ಸ್ಥಳೀಯರ ಆಗ್ರಹವಾಗಿದೆ.

Advertisement

ಹೈನುಗಾರರು ಯೋಚಿಸಿ
ಗಂಡು ಕರು ಸಾಕುವುದಕ್ಕೆ ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಕೆಲವು ಹೈನುಗಾರರು ತಮ್ಮ ಮನೆಯಲ್ಲಿ ಹುಟ್ಟಿದ ಗಂಡು ಕರುಗಳನ್ನು ಪೇಟೆಗೆತಂದು ಬಿಡುತ್ತಾರೆ. ಹೀಗಾಗಿ ಸಾಲಿಗ್ರಾಮ ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ಬೀಡಾಡಿ ಗಂಡು ಕರುಗಳು ಕಾಣಸಿಗುತ್ತಿದೆ. ಇವುಗಳನ್ನುರಸ್ತೆಗೆ ಬಿಡುವ ಮುನ್ನ ಸಾರ್ವಜನಿಕರಿ ಗಾಗುವ ಸಮಸ್ಯೆ ಕುರಿತು ಸಂಬಂಧಪಟ್ಟ ಹೈನುಗಾರರು ಯೋಚಿಸಬೇಕಿದೆ. ಮುಂದೆ ಈ ರೀತಿ ಮಾಡುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ, ದಂಡ ವಿಧಿಸಬೇಕು ಎನ್ನುವ ಒತ್ತಾಯ ಕೂಡ ಕೇಳಿ ಬಂದಿದೆ.

ಗೋ ಶಾಲೆಯಲ್ಲಿ
ಅವಕಾಶ ನೀಡಿದರೆ ಕ್ರಮ
ಬೀಡಾಡಿ ಜಾನುವಾರುಗಳು
ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವುದು ಅತ್ಯಂತ ನೋವು ತಂದಿದೆ. ಇವುಗಳು ಕೃಷಿ ಭೂಮಿಗೆ ಹಾನಿ ಉಂಟು ಮಾಡುತ್ತಿರುವ ಕುರಿತು ಪಟ್ಟಣ ಪಂಚಾಯತ್‌ಗೆ ಸಾಕಷ್ಟು ದೂರುಗಳು ಈಗಾಗಲೇ ಬಂದಿದೆ. ಗೋಶಾಲೆಯಲ್ಲಿ ಸೇರ್ಪಡೆಗೆ ಅವಕಾಶ ಕೋರಲಾಗಿದ್ದು, ಮಾನವೀಯ ನೆಲೆಯಲ್ಲಿ ಅವಕಾಶ ನೀಡಿದಲ್ಲಿ ಪಟ್ಟಣ ಪಂಚಾಯತ್‌ ವತಿಯಿಂದ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಿದ್ದೇವೆ.
ಸುಲತಾ ಹೆಗ್ಡೆ,,
ಸಾಲಿಗ್ರಾಮ ಪ.ಪಂ. ಸದಸ್ಯರು

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next