Advertisement

ಮಾಲಿನ್ಯ ತಡೆಗೆ ಮಹಾನಗರಗಳಲ್ಲಿ ಬೈಸಿಕಲ್‌ ವ್ಯವಸ್ಥೆ

12:33 PM Aug 29, 2018 | Team Udayavani |

ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆಯಿಂದ ಆಗುತ್ತಿರುವ ವಾಯು ಮತ್ತು ಶಬ್ದ ಮಾಲಿನ್ಯ ತಡೆಯಲು “ಸಾರ್ವಜನಿಕ ಬೈಸಿಕಲ್‌ ಹಂಚಿಕೆ’ (ಪಿಬಿಎಸ್‌) ಯೋಜನೆಗೆ ಈಚೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ರಾಜ್ಯದ ಎರಡನೇ ಹಂತದ ನಗರಗಳಿಗೂ ಈ ಯೋಜನೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.

Advertisement

ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಳೆದ ವರ್ಷ ಯೋಜನೆ ಜಾರಿಯಾಗಿದ್ದು, ಸಾವಿರ ಬೈಸಿಕಲ್‌ಗ‌ಳನ್ನು ನಿತ್ಯ ಎಂಟು ಸಾವಿರ ಜನ ಬಳಸುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿ 400 ಕೇಂದ್ರಗಳಲ್ಲಿ ಆರು ಸಾವಿರ ಬೈಸಿಕಲ್‌ಗ‌ಳನ್ನು ಬಳಕೆಗೆ ನಿರ್ಧರಿಸಲಾಗಿದೆ. ಈ ಸಂಬಂಧದ ಪ್ರಸ್ತಾವನೆಗೆ ಈಚೆಗೆ ಪಾಲಿಕೆ ಸಭೆಯಲ್ಲಿ ಅನುಮೋದನೆಯೂ ದೊರೆತಿದೆ.

ಇದೇ ಮಾದರಿಯಲ್ಲಿ ಎರಡನೇ ಹಂತದ ನಗರಗಳಿಗೆ ಸಾರ್ವಜನಿಕ ಬೈಸಿಕಲ್‌ ಹಂಚಿಕೆ ಯೋಜನೆ ಪರಿಚಯಿಸಲು ಉದ್ದೇಶಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾದ ಬೈಸಿಕಲ್‌ ಸೊಸೈಟಿ ಅಡಿ ಈ ಯೋಜನೆ ಜಾರಿಗೆ ಚಿಂತನೆ ನಡೆದಿದೆ.

ಮೊದಲ ಆದ್ಯತ: ಬೆಂಗಳೂರು ಮಾತ್ರವಲ್ಲದೆ ಉಳಿದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲೂ ಇದೇ ಮಾದರಿಯ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶ ಇದೆ. ಈ ಸಂಬಂಧ ಬಜೆಟ್‌ನಲ್ಲಿ 25 ಕೋಟಿ ರೂ. ಮೀಸಲಿಡಲಾಗಿದ್ದು, ಶೀಘ್ರದಲ್ಲೇ ಈ ಕುರಿತ ಪ್ರಸ್ತಾವನೆಯು ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆಬರಲಿದೆ. ಒಪ್ಪಿಗೆ ದೊರೆತ ನಂತರ ಆಯಾ ಪಾಲಿಕೆಗಳಿಗೆ ಪ್ರಸ್ತಾವನೆ ಕಳುಹಿಸಲಾಗುವುದು.

ಸ್ಥಳೀಯ ಸಂಸ್ಥೆಗಳ ಆಸಕ್ತಿ, ಬೈಸಿಕಲ್‌ಗ‌ಳ ಬಳಕೆ, ವಾಹನದಟ್ಟಣೆ ಮತ್ತಿತರ ಅಂಶಗಳನ್ನು ಆಧರಿಸಿ ಯೋಜನೆ ಅನುಷ್ಠಾನ ಗೊಳಿಸಲಾಗುವುದು. ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬಳ್ಳಾರಿ, ಬೆಳಗಾವಿ, ಮೈಸೂರು, ದಾವಣಗೆರೆ, ಮಂಗಳೂರು, ವಿಜಯಪುರ, ಶಿವಮೊಗ್ಗ, ತುಮಕೂರು ಪಾಲಿಕೆಗಳಲ್ಲಿ ಜಾರಿಗೊಳಿಸುವುದು ಬಾಕಿ ಇದೆ ಎಂದು ನಗರ ಭೂಸಾರಿಗೆ ನಿರ್ದೇಶನಾಲಯದ, ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

Advertisement

ಎರಡನೇ ಹಂತದ ನಗರಗಳಲ್ಲಿ ಎಷ್ಟು ಬೈಸಿಕಲ್‌ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಅದೆಲ್ಲವೂ ಸ್ಥಳೀಯ ಸಂಸ್ಥೆ ಸ್ಪಂದನೆಯನ್ನು ಅವಲಂಬಿಸಿದೆ. ಸಾಧ್ಯವಾದರೆ ಖಾಸಗಿ ಸಹಭಾಗಿತ್ವದೊಂದಿಗೆ ಜಾರಿಗೊಳಿಸುವ ಯೋಚನೆಯೂ ಇದೆ ಎಂದು ಅವರು ಹೇಳಿದರು.

ಪಾಲಿಕೆಯಿಂದಲೇ ಸ್ಥಾಪನೆ: ಪಾಲಿಕೆ ವ್ಯಾಪ್ತಿಯ ಜಾಗಗಳಲ್ಲಿ ಪಾಲಿಕೆಯೇ ಕಾಮಗಾರಿ ಕೈಗೆತ್ತಿಕೊಂಡು, ಬೈಸಿಕಲ್‌ ಕೇಂದ್ರಗಳನ್ನು ಸ್ಥಾಪಿಸಲಿದೆ. ನಿರ್ವಹಣಾ ಸಂಸ್ಥೆಗಳನ್ನು ಇ-ಪ್ರಾಕ್ಯುರ್‌ವೆುಂಟ್‌ ಮೂಲಕ ಆಯ್ಕೆ ಮಾಡುವುದು, ಬೈಸಿಕಲ್‌ ಸೊಸೈಟಿ ಅಡಿ ಬಿಬಿಎಂಪಿ ಮತ್ತು ನಗರ ಭೂಸಾರಿಗೆ ನಿರ್ದೇಶನಾಲಯ ಜಂಟಿಯಾಗಿ ಯೋಜನೆಯ ಕಾಮಗಾರಿಗಳ ಅನುಷ್ಠಾನಗೊಳಿಸುವುದು, ವಿಸ್ತೃತ ಯೋಜನಾ ವರದಿ ತಯಾರಿಸಲು ನಿರ್ದೇಶನಾಲಯಕ್ಕೆ ವಹಿಸುವುದು ಸೇರಿದಂತೆ ಹಲವು ಅಂಶಗಳಿಗೆ ಈಚೆಗೆ ಬಿಬಿಎಂಪಿ ಅನುಮೋದನೆ ನೀಡಿದೆ.

187.38 ಕೋಟಿ ವೆಚ್ಚ – 122 ಕಿ.ಮೀ. ಮಾರ್ಗ: ಈ ಮಧ್ಯೆ ಉದ್ಯಾನ ನಗರಿಯಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಸುಮಾರು 187.38 ಕೋಟಿ ಮೊತ್ತದಲ್ಲಿ ಒಟ್ಟಿಗೆ ಸಾರ್ವಜನಿಕ ಬೈಸಿಕಲ್‌ ಹಂಚಿಕೆ ಮತ್ತು ಪಾದಚಾರಿ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಮೂರು ಮಾದರಿಯಲ್ಲಿ ಬೈಸಿಕಲ್‌ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಇದಕ್ಕೆ ಅಗತ್ಯ ಇರುವ ಜಾಗವನ್ನು ಪಾಲಿಕೆ ಪೂರೈಸಲಿದೆ.

900 ಮೀ.x2.00 ಮೀ., 18.00 ಮೀ. x2.00ಮೀ.,3,600 ಮೀ.x 2.00 ಮೀ. ವಿಸ್ತೀರ್ಣದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗುತ್ತಿದೆ. ಒಟ್ಟಾರೆ 122 ಕಿ.ಮೀ.  ಉದ್ದದ ಬೈಸಿಕಲ್‌ ಮಾರ್ಗ ನಿರ್ಮಾಣಗೊಳ್ಳಲಿದ್ದು, ಈಗಾಗಲೇ ಒಂಬತ್ತು ಖಾಸಗಿ ನಿರ್ವಹಣಾ ಸಂಸ್ಥೆಗಳು ಬೈಸಿಕಲ್‌ ಪೂರೈಕೆಗೆ ಮುಂದೆ ಬಂದಿದ್ದಾರೆ.

ಎಂ.ಜಿ.ರಸ್ತೆ ಸುತ್ತ ಕೇಂದ್ರಗಳು: ನಗರ ಭೂಸಾರಿಗೆ ನಿರ್ದೇಶನಾಲಯ ನಡೆಸಿದ ಸಮೀಕ್ಷೆ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಮಾರ್ಗಸೂಚಿಯಂತೆ ನಗರದಲ್ಲಿ ಎಂ.ಜಿ.ರಸ್ತೆ ಮತ್ತು ವಿಧಾನಸೌಧ ಸುತ್ತಮುತ್ತ, ಇಂದಿರಾನಗರ, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌, ಬಾಣಸವಾಡಿ, ಎಚ್‌ಆರ್‌ಬಿಆರ್‌ ಲೇಔಟ್‌, ಎಚ್‌ಬಿಆರ್‌ ಲೇಔಟ್‌ ಸುತ್ತಲಿನ ಪ್ರದೇಶಗಳಲ್ಲಿ ಬೈಸಿಕಲ್‌ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈ ಬೈಸಿಕಲ್‌ಗ‌ಳ ನಿರ್ವಹಣೆ, ಸುರಕ್ಷತೆ ಸೇರಿದಂತೆ ಪ್ರತಿಯೊಂದನ್ನೂ ಖಾಸಗಿ ಸಂಸ್ಥೆ ನೋಡಿಕೊಳ್ಳಲಿದ್ದು, ಸಂಸ್ಥೆಗಳಿಗೆ ಟೆಂಡರ್‌ ಆಧಾರದ ಮೇಲೆ ಪರವಾನಗಿ ಶುಲ್ಕ ವಿಧಿಸಲಾಗುತ್ತದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next