Advertisement

ಕೋಟೆಗೊಬ್ಬ ನಾಯಕ

10:20 AM Feb 29, 2020 | mahesh |

ಹಿಂದಿಯಲ್ಲಿ “ಪದ್ಮಾವತ್‌’, “ತಾನಾಜಿ’, ತೆಲುಗಿನಲ್ಲಿ “ಸೈರಾ ನರಸಿಂಹ ರೆಡ್ಡಿ’, ಮಲೆಯಾಳಂನ “ಮಾಮಂಗಮ್‌’ ನಂತಹ ಐತಿಹಾಸಿಕ ಕಥಾ ಹಂದರದ ಚಿತ್ರಗಳನ್ನು ಕನ್ನಡದಲ್ಲಿ ನೋಡಿ ಎಷ್ಟೋ ವರ್ಷಗಳಾಯಿತು. 70-80ರ ದಶಕದಲ್ಲೇ ಇಂಥ ಚಿತ್ರಗಳ ಪರ್ವ ಮುಗಿದು ಹೋಯಿತು. ಆ ನಂತರ ಕೆಲ ಐತಿಹಾಸಿಕ ಚಿತ್ರಗಳು ಬಂದರೂ ಅವುಗಳು ಹೇಳಿಕೊಳ್ಳುವ ಮಟ್ಟಕ್ಕೆ ಜನಪ್ರಿಯವಾಗಲಿಲ್ಲ. ನಮ್ಮಲ್ಲಿ ಐತಿಹಾಸಿಕ ಚಿತ್ರಗಳಿಗೆ ಬೇಕಾದ ಅಸಂಖ್ಯಾತ ಸಾಹಿತ್ಯವಿದ್ದರೂ, ಅದನ್ನು ದೃಶ್ಯರೂಪದಲ್ಲಿ ತೆರೆಮೇಲೆ ತರುವ ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರು ಅಪರೂಪ. ಇದ್ದರೂ ಅವರ ಸಂಖ್ಯೆ ತೀರಾ ಕಡಿಮೆ. ಎಲ್ಲದಕ್ಕಿಂತ ಹೆಚ್ಚಾಗಿ ಇಂಥ ಚಿತ್ರಗಳನ್ನು ಮಾಡೋದಕ್ಕೆ ಇಚ್ಛಾ ಶಕ್ತಿಯ ಕೊರತೆ ಇದೆ. ಹೀಗೆ ಕನ್ನಡದಲ್ಲಿ ಐತಿಹಾಸಿಕ ಚಿತ್ರಗಳ ಬಗ್ಗೆ ಒಂದಷ್ಟು ಮಾತುಗಳನ್ನು, ಅಭಿಪ್ರಾಯಗಳನ್ನು ಸಿನಿಪ್ರಿಯರಿಂದ ಮತ್ತು ಚಿತ್ರರಂಗದ ಮಂದಿಯಿಂದ ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಇಂಥ ಮಾತುಗಳಲ್ಲಿ ಕೆಲವು ವಾಸ್ತವಕ್ಕೆ ಹತ್ತಿರವಿದ್ದರೂ, ಇತ್ತೀಚಿನ ಕೆಲವು ಪ್ರಯತ್ನಗಳು ಚಿತ್ರರಂಗದಲ್ಲಿ ಐತಿಹಾಸಿಕ ಚಿತ್ರಗಳ ಬಗ್ಗೆ ಒಂದಷ್ಟು ಭರವಸೆ ಮೂಡಿಸಿರುವುದಂತೂ ಸುಳ್ಳಲ್ಲ. ಸದ್ಯ ಕನ್ನಡದಲ್ಲಿ ದರ್ಶನ್‌ ಅಭಿನಯದ “ರಾಜಾವೀರ ಮದಕರಿ’ ಸೆಟ್ಟೇರಿದ್ದರೆ, ಈಗ ಐತಿಹಾಸಿಕ ಚಿತ್ರ “ಬಿಚ್ಚುಗತ್ತಿ’ ತೆರೆಗೆ ಬರುತ್ತಿದೆ.

Advertisement

ಕನ್ನಡದ ಹಿರಿಯ ಕಾದಂಬರಿಕಾರ ಬಿ.ಎಲ್‌. ವೇಣು ಅವರ “ಬಿಚ್ಚುಗತ್ತಿ ಭರಮಣ್ಣ ನಾಯಕ’ ಐತಿಹಾಸಿಕ ಕಥಾಹಂದರ ಹೊಂದಿರುವ “ಬಿಚ್ಚುಗತ್ತಿ’ ಹೆಸರಿನಲ್ಲಿ ತೆರೆಗೆ ಬರುತ್ತಿದೆ. ಮೂಲ ಕಾದಂಬರಿಕಾರ ಬಿ.ಎಲ್‌ ವೇಣು ಅವರೇ ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಹರಿ ಸಂತೋಷ್‌ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ರಾಜವರ್ಧನ್‌, ಹರಿಪ್ರಿಯಾ, ಪ್ರಭಾಕರ್‌, ಕಲ್ಯಾಣಿ, ಸ್ಪಶಾì ರೇಖಾ ಹೀಗೆ ಅನೇಕ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಿತ್ರದುರ್ಗದ ಕೋಟೆಯ ಸುತ್ತ ಮುತ್ತ ಸೆಟ್‌ ಹಾಕಿ, ಆ ಯುಗದ ಅನೇಕ ಪರಿಕರಗಳನ್ನು ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ.

ಬಿಚ್ಚುಗತ್ತಿ ಭರಮಣ್ಣ ನಾಯಕನ ಅಪ್ರತಿಮ ಪರಾಕ್ರಮದ ಕಥೆಯನ್ನು ಚಿತ್ರ ಹೊಂದಿದ್ದು, ಭರಮಣ್ಣನ ಯುಗವನ್ನು ಚಿತ್ರದಲ್ಲಿ ತೆರೆಮೇಲೆ ತರಲಾಗುತ್ತಿದೆ. ಇನ್ನು ಚಿತ್ರದಲ್ಲಿ ಭರಮಣ್ಣನಾಗಿ ರಾಜವರ್ಧನ್‌ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ದೇಹ ಹುರಿಗೊಳಿಸಿದ್ದು, ತೂಕವನ್ನೂ ಹೆಚ್ಚಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಕುದುರೆ ಸವಾರಿ, ಕಳರಿಪಯಟ್ಟುವಿನಂತಹ ಸಮರ ಕಲೆಗಳನ್ನು ಕಲಿತಿದ್ದಾರೆ. ಇನ್ನು ನಾಯಕಿ ಹರಿಪ್ರಿಯಾ ಸಿದ್ಧಾಂಬೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಪಾತ್ರಕ್ಕಾಗಿ ಹರಿಪ್ರಿಯಾ ಕೂಡ ಕುದುರೆ ಸವಾರಿ, ಕತ್ತಿ ವರಸೆ ಅಭ್ಯಾಸ ಮಾಡಿ ತೆರೆಮೇಲೆ ಪ್ರದರ್ಶಿಸಿದ್ದಾರೆ.

ಇನ್ನು ನಾಯಕ ರಾಜವರ್ಧನ್‌, ನಾಯಕಿ ಹರಿಪ್ರಿಯಾ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಕೂಡ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಹರಿಪ್ರಿಯಾ, “ನಾನೊಬ್ಬ ಕಲಾವಿದೆಯಾಗಿ ವಿಭಿನ್ನ ಪಾತ್ರಗಳನ್ನು ಮಾಡಲು ಬಯಸುತ್ತೇನೆ. ಒಂದೇ ಥರದ ಪಾತ್ರಗಳನ್ನು ಮಾಡುವುದು, ಆ ಪಾತ್ರಗಳಿಗೆ ಸ್ಟಿಕ್‌ ಆನ್‌ ಆಗಿರುವುದು ನನಗೆ ಇಷ್ಟವಿಲ್ಲ. ಹಾಗಾಗಿ ಆದಷ್ಟು ಹೊಸಥರದ ಚಿತ್ರಗಳು, ಹೊಸಥರದ ಪಾತ್ರಗಳನ್ನು ಮಾಡೋದಕ್ಕೆ ಇಷ್ಟಪಡ್ತೀನಿ. ಈ ಥರದ ಚೇಂಜ್‌ ಓವರ್‌ ನನಗೆ ಖುಷಿ ನೀಡುತ್ತದೆ. ಈ ಚಿತ್ರದಲ್ಲಿ ಸಿದ್ಧಾಂಬೆ ಎನ್ನುವ ರಾಣಿಯ ಪಾತ್ರ ನನ್ನದು. ರಾಣಿ ಅಂದಾಕ್ಷಣ ಕೇವಲ ಅರಮನೆಯಲ್ಲಿ ಅಲಂಕಾರ ಮಾಡಿಕೊಂಡು ಕೂತಿರುವುದಿಲ್ಲ.

ಬದಲಾಗಿ ಇದರಲ್ಲಿ ಅರಮನೆಯಿಂದ ಹೊರಗೆ ಹೋಗಿ ರಾಜನನ್ನು ಉಳಿಸಿಕೊಳ್ಳಲು ಕುದುರೆ ಸವಾರಿ ಮಾಡಿಕೊಂಡು ಹೋಗುತ್ತೇನೆ. ಕತ್ತಿವರಸೆ ಮಾಡುತ್ತೇನೆ, ಯುದ್ದ ಮಾಡುತ್ತೇನೆ. ಇಲ್ಲಿಯವರೆಗೆ ರಾಣಿ ಅಂದ್ರೆ ಅನೇಕರು ಕಲ್ಪಿಸಿಕೊಂಡಿರುವುದಕ್ಕಿಂತ ತುಂಬ ವಿಭಿನ್ನವಾದ ಪಾತ್ರವನ್ನು ಈ ಚಿತ್ರದಲ್ಲಿ ನೋಡಬಹುದು’ ಅನ್ನೋದು ಹರಿಪ್ರಿಯಾ ಮಾತು. ಚಿತ್ರದುರ್ಗದ ಇತಿಹಾಸದಲ್ಲಿ ಬರುವ ನೈಜ ಘಟನೆಯ ಚಿತ್ರ ಇದಾಗಿದ್ದರಿಂದ, ಇದರ ಪಾತ್ರಗಳು ಕೂಡ ಅಷ್ಟೇ ನೈಜತೆಯನ್ನು ಬಯಸುತ್ತವೆ. ಹಾಗಾಗಿ ಇದನ್ನು ಮಾಡುವ ಮೊದಲು ಸಾಕಷ್ಟು ಹೋಂವರ್ಕ್‌ ಮಾಡಿಕೊಳ್ಳಬೇಕಾಯಿತು. ಚಿತ್ರದ ಕಲಾವಿದರಿಂದ ಕುದುರೆ ಸವಾರಿ, ಕತ್ತಿ ವರಸೆ ಅಭ್ಯಾಸ ಮಾಡಿಬೇಕಾಯಿತು. ಇಡೀ ತಂಡ ಸಾಕಷ್ಟು ಪರಿಶ್ರಮ ವಹಿಸಿ ಅತ್ಯಂತ ಅಚ್ಚುಕಟ್ಟಾಗಿ ಚಿತ್ರವನ್ನು ಮಾಡಿ ಮುಗಿಸಿದ್ದೇವೆ’ ಎಂದು “ಬಿಚ್ಚುಗತ್ತಿ’ ಚಿತ್ರದ ತಯಾರಿಯನ್ನು ಹಿಂದಿನ ಕಥೆಯನ್ನು ತೆರೆದಿಡುತ್ತದೆ ಚಿತ್ರತಂಡ.

Advertisement

ಬೇರೆ ಬೇರೆ ಇಂಡಸ್ಟ್ರಿಗಳಿಂದ ಒಳ್ಳೆಯ ರೆಸ್ಪಾನ್ಸ್‌ ಬರುತ್ತಿದೆ. ನಡೆದಿರುವ ಕಥೆಯನ್ನ ರೀ-ಕ್ರಿಯೇಟ್‌ ಮಾಡೋದು ಕಷ್ಟ. ತುಂಬ ಸೆನ್ಸೆಟಿವ್‌ ಕಥೆ ಇದರಲ್ಲಿದೆ. “ಬಾಹುಬಲಿ’ ಸಿನಿಮಾಕ್ಕೆ ಈ ಚಿತ್ರವನ್ನು ಹೋಲಿಕೆ ಮಾಡು ತ್ತಿದ್ದಾರೆ ಎನ್ನುವುದು ಚಿತ್ರತಂಡದ ಮಾತು. ಈಗಾಗಲೇ ಬಿಡುಗಡೆಯಾಗಿರುವ “ಬಿಚ್ಚು ಗತ್ತಿ’ ಚಿತ್ರದ ಹಾಡುಗಳು, ಟ್ರೇಲರ್‌ಗಳಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದ್ದು, ಬಿಡುಗಡೆಗೂ ಮೊದಲೇ ಒಂದಷ್ಟು ಸದ್ದು ಮಾಡುತ್ತಿರುವ “ಬಿಚ್ಚುಗತ್ತಿ’ ಬಾಕ್ಸಾಫೀಸ್‌ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಅನ್ನೋದು ಕೆಲ ದಿನಗಳಲ್ಲೇ ಗೊತ್ತಾಗಲಿದೆ.

ಯಾರು ಈ ಭರಮಣ್ಣ ನಾಯಕ…?
ವೀರ ಮದಕರಿ ನಾಯಕನಿಗೂ ಮೊದಲು ಚಿತ್ರದುರ್ಗವನ್ನು ಆಳಿದ್ದ ಭರಮಣ್ಣ ನಾಯಕರು ಮಹಾ ಪರಾಕ್ರಮಿ. ಇವರು ಮದಕರಿ ನಾಯಕರ ಅಜ್ಜ. ಅವರ ಕೈಗೊಂಡ ಅಭಿವೃದ್ಧಿ ಕೆಲಸಗಳು ನೂರಾರು. ಸುಮಾರು 21 ಕರೆಗಳು, 30 ದೇವಾಲಯಗಳನ್ನು ಕಟ್ಟಿಸಿದ್ದರೆಂಬ ಮಾಹಿತಿ ಇದೆ. ಜತೆಗೆ ನಾಲ್ಕು ಅರಮನೆಗಳನ್ನೂ ನಿರ್ಮಿಸಿದ್ದರು. ಸುಮಾರು 360 ಅಂಕಣಗಳ ಬೃಹನ್ಮಠವನ್ನು ನಿರ್ಮಿಸಿದ್ದು ಕೂಡ ಇವರೇ. ಐತಿಹಾಸಿಕ ಸಂತೆಹೊಂಡವನ್ನು ಕಟ್ಟಿಸಿದವರೂ ಇವರೇ. ವೀರಗತ್ತಿಗೆ ಬಿಡುವೇ ಕೊಡದೇ ಸದಾ ಯುದ್ಧಗಳಲ್ಲೇ ನಿರತನಾಗಿರುತ್ತಿದ್ದ ಭರಮಣ್ಣರಿಗೆ ಬಿಚ್ಚುಗತ್ತಿ ಎಂಬ ಹೆಸರು ಬಂದಿತ್ತು. 1721ರಲ್ಲಿ ಇವರು ನಿಧನರಾದರೆಂದು ಇತಿಹಾಸ ಹೇಳುತ್ತದೆ. ಮೇಲುದುರ್ಗದಲ್ಲಿ ಇವರ ಸಮಾಧಿ ಇದೆ.

ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next