ಕಾರ್ಕಳ: ನಾಲ್ಕು ಗೋಡೆಗಳ ನಡುವಿನ ವಾತಾವರಣದಿಂದ ಹೊರ ಬಂದು ವಿಶಾಲವಾದ ಪ್ರಪಂಚದ ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಸಾಣೂರು ಮೋಹನದಾಸ್ ಪ್ರಭು ಅವರು ಹೇಳಿದರು.
ಶ್ರೀ ಭುವನೇಂದ್ರ ವಸತಿ ಶಾಲೆ ಕಾರ್ಕಳ ಇದರ ವತಿಯಿಂದ ಜು. 28 ರಂದು ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನ ಬೆ„ಲಡ್ಕ ಕುಂಟಲ್ಪಾಡಿ ಇಲ್ಲಿ ನಡೆದ “ಭುವನಕೂಟ’- ಕೆಸರಲ್ಲೊಂದು ಚಿಣ್ಣರ ಆಟ ಎಂಬ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೈಲಡ್ಕ ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಮೊಕ್ತೇಸರ ಶೇಖರ್ ರಾವ್ ಅವರು ಅತಿಥಿಯಾಗಿ ಆಗಮಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ ಕೋಟ್ಯಾನ್ ಅವರು ಅಧ್ಯಕ್ಷತೆ ವಹಿಸಿದ್ಧರು. ಸ್ಥಳೀಯ ಉದ್ಯಮಿ ದಾಮಣ್ಣ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲ ರಾಘವೇಂದ್ರ ಸಾಲ್ಯಾನ್ ಅವರು ಸ್ವಾಗತಿಸಿದರು.
ಶಿಕ್ಷಕಿ ಗೀತಾ ಶೆಟ್ಟಿಗಾರ್ ಅವರು ವಂದಿಸಿ, ಶಿಕ್ಷಕ ಹರಿಶ್ಚಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು.
ಅನಂತರ ನಡೆದ ಕಾರ್ಯಕ್ರಮದಲ್ಲಿ ನಾಟಿ ಪ್ರಾತ್ಯಕ್ಷಿಕೆ, ತುಳುನಾಡಿನ ಬಗೆ ಬಗೆಯ ಖಾದ್ಯಗಳ ಪರಿಚಯ, ವಿವಿಧ ಗ್ರಾಮೀಣ ಕ್ರೀಡಾಕೂಟಗಳು ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸುಜೇಂದ್ರಕಾರ್ಲ ಹಾಗೂ ದಿನೇಶ್ ಹಾಗೂ ಲಕ್ಷ್ಮೀ ದೇವಾಡಿಗ ಅವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಎಲ್ಲ ಸಿಬಂದಿ ವರ್ಗದವರು ಭಾಗವಹಿಸಿದ್ದರು.