ಹಳೇ ಮೈಸೂರು ಭಾಗದಲ್ಲಿ ಜನಪ್ರಿಯವಾಗಿರುವ ಜನಪದ ಕಲೆ “ಕಂಸಾಳೆ’ಯ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಈಗ ಗಾಂಧಿನಗರದಲ್ಲೂ “ಕಂಸಾಳೆ’ಯ ಬಗ್ಗೆ ಮಾತು ಶುರುವಾಗಿದೆ. ಹೌದು, ಕನ್ನಡದಲ್ಲಿ “ಕಂಸಾಳೆ’ ಅನ್ನೋ ಹೆಸರಿನಲ್ಲಿ ಹೊಸ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ. ಅಂದಹಾಗೆ, ಈ ಚಿತ್ರದ ಹೆಸರು “ಕಂಸಾಳೆ’ ಅಂತಿದ್ದರೂ, ಇದೇನು “ಕಂಸಾಳೆ’ಯ ಬಗ್ಗೆಯೇ ಮಾಡಿರುವ ಚಿತ್ರವಲ್ಲ. “ಕಂಸಾಳೆ’ಯ ಒಂದು ಎಳೆ ಮತ್ತು ಅದರ ಕೆಲವೊಂದು ಸಂಗತಿಗಳನ್ನು ಇಟ್ಟುಕೊಂಡು ಅದನ್ನು ಇಂದಿನ ಸಿನಿಮಾ ಶೈಲಿಗೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು, ಪಕ್ಕಾ ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಆಗಿ ತೆರೆಮೇಲೆ ಹೇಳಲು ಹೊರಟಿದೆ ಚಿತ್ರತಂಡ.
ಈ ಹಿಂದೆ ಪ್ರಜ್ವಲ್ ದೇವರಾಜ್ ಮತ್ತು ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ “ಭುಜಂಗ’ ಚಿತ್ರವನ್ನು ನಿರ್ದೇಶಿಸಿದ್ದ ಜೀವಾ, ಈ ಬಾರಿ “ಕಂಸಾಳೆ’ ಚಿತ್ರಕ್ಕೆ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಜೀವಾ, “ಚಿತ್ರದ ಹೆಸರು “ಕಂಸಾಳೆ’ ಅಂತಿದ್ದರೂ, ಆ ಕಲೆಯ ಬಗ್ಗೆ ಚಿತ್ರದಲ್ಲಿ ಎಲ್ಲೂ ಹೇಳುವುದಿಲ್ಲ. ಬದಲಾಗಿ ಆ ಕಲೆಯ ಹಿನ್ನೆಲೆಯನ್ನು ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ. ಚಿತ್ರದ ಕಥೆಯಲ್ಲಿ ಈ ಟೈಟಲ್‌ಗೆ ಸಮರ್ಥನೆ ಇದೆ. ಚಿತ್ರವನ್ನು ನೋಡಿದ ನಂತರ “ಕಂಸಾಳೆ’ ಅಂತ ಟೈಟಲ್ ಯಾಕೆ ಇಟ್ಟಿದ್ದೇವೆ ಅನ್ನೋದು ಗೊತ್ತಾಗುತ್ತದೆ. ಇದರಲ್ಲಿ ಒಂದು ಕ್ಯೂಟ್ ಲವ್‌ಸ್ಟೋರಿ, ಆ್ಯಕ್ಷನ್, ಸೆಂಟಿಮೆಂಟ್, ಕಾಮಿಡಿ, ಎಮೋಶನ್ಸ್ ಎಲ್ಲವೂ ಇದೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡುತ್ತಾರೆ.
“ಅಥರ್ವ’ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿದ್ದ ಪವನ್ ತೇಜ್, “ಕಂಸಾಳೆ’ ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಚಿತ್ರದಲ್ಲಿ ಪವನ್ ತೇಜ್ ಪಕ್ಕಾ ಲೋಕಲ್ ಹುಡುಗನಾಗಿ, ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿರುವ ಪವನ್, ಈ ಚಿತ್ರ ತಮಗೆ ಕೈ ಹಿಡಿಯಲಿದೆ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ. ಚಿತ್ರಕ್ಕೆ ಮೈಸೂರು ಮೂಲದ ನಯನಾ ನಾಯಕಿಯಾಗಿ ಆಯ್ಕೆಯಾಗಿದ್ದು, ಅವರಿಲ್ಲಿ ಮೇಲ್ವರ್ಗದ ಮನೆತನದಿಂದ ಬಂದ ಗಂಭೀರ ಸ್ವಭಾವದ ಹುಡುಗಿಯಾಗಿ, ಟೀಚರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಉಳಿದಂತೆ ಹಿರಿಯ ನಟ ರಾಜೇಶ್, ಶೋಭರಾಜ್, ಲೋಕೇಶ್ ಗೌಡ, ಪ್ರಮೀಳಾ ಜೋಷಾಯ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮಲೆನಾಡಿನ ಪ್ರಕೃತಿ ಮತ್ತು ಹಸಿರಿನ ಹಿನ್ನೆಲೆಯಲ್ಲಿ ಚಿತ್ರದ ಕಥೆ ಸಾಗಲಿದ್ದು, ಕರ್ನಾಟಕದ ಜೊತೆ ಕೇರಳ ಮತ್ತು ತಮಿಳುನಾಡಿನ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಚಿತ್ರದಲ್ಲಿ 4 ಹಾಡುಗಳಿದ್ದು ಪ್ರವೀಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ಜಯಂತ ಕಾಯ್ಕಿಣಿ, ಡಾ. ವಿ.ನಾಗೇಂದ್ರ ಪ್ರಸಾದ್, ಯೋಗರಾಜ ಭಟ್ ಹಾಡುಗಳ ಸಾಲುಗಳನ್ನು ಬರೆಯುತ್ತಿದ್ದಾರೆ. ಉಳಿದಂತೆ ರವಿಶಾಂತ್ ಸಂಭಾಷಣೆ, ಬಹುಭಾಷಾ ತಂತ್ರಜ್ಞ ಸಾಯಿ ಸತೀಶ್ ಛಾಯಾಗ್ರಹಣ, ಮಾಸ್ ಮಾದ ಸಾಹಸ ಚಿತ್ರದಲ್ಲಿದೆ. ಈಗಾಗಲೇ “ಸನ್ಮಾನ್ಯ’ ಎನ್ನುವ ಚಿತ್ರವನ್ನು ನಿರ್ಮಿಸಿರುವ ಎಸ್.ಎ ಚಂದ್ರಶೇಖರ್ “ಎಸ್.ಆರ್.ವೈ ಫಿಲಂಸ್’ ಬ್ಯಾನರ್‌ನಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಮುಹೂರ್ತವನ್ನು ಆಚರಿಸಿಕೊಂಡು ಚಿತ್ರೀಕರಣಕ್ಕೆ ಚಾಲನೆ ನೀಡಿರುವ ಚಿತ್ರತಂಡ ನವೆಂಬರ್ ಮೊದಲ ವಾರದಿಂದ “ಕಂಸಾಳೆ’ ಚಿತ್ರದ ಚಿತ್ರೀಕರವನ್ನು ಆರಂಭಿಸಲಿದೆ.
ಕಾರ್ತಿಕ