Advertisement

ವಿದೇಶ ಯಾತ್ರೆ ಕೈ ಬಿಟ್ಟ ಬುದ್ಧಿವಂತ

10:00 AM Mar 28, 2020 | Suhan S |

ಕೋವಿಡ್ 19 ಎಫೆಕ್ಟ್ ನಿಂದಾಗಿ ಈಗಾಗಲೇ ಭಾರತೀಯ ಚಿತ್ರರಂಗವೇ ತತ್ತರಿಸಿ ಹೋಗಿದೆ. ಅಷ್ಟೇ ಅಲ್ಲ, ಅನೇಕ ಚಿತ್ರಗಳು ತಮ್ಮ ಚಿತ್ರೀಕರಣವನ್ನೇ ಸ್ಥಗಿತಗೊಳಿಸಿವೆ. ಅದರಲ್ಲೂ ಬಹುತೇಕ ಸಿನಿಮಾಗಳು ವಿದೇಶಗಳಲ್ಲಿ ಮಾತಿನ ಭಾಗ, ಹಾಡುಗಳ ದೃಶ್ಯಗಳನ್ನು ಚಿತ್ರೀಕರಿಸಲು ತಯಾರಿ ನಡೆಸಿದ್ದವು. ಆದರೆ, ಕೋವಿಡ್ 19 ಸಮಸ್ಯೆ ಎದುರಾಗಿದ್ದರಿಂದ ತಮ್ಮ ವಿದೇಶ ಯಾತ್ರೆಯನ್ನು ಮೊಟಕುಗೊಳಿಸಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಬುದ್ಧಿವಂತ 2′.

Advertisement

ಹೌದು, ಉಪೇಂದ್ರ ಅವರು ನಾಯಕರಾಗಿ ನಟಿಸುತ್ತಿರುವ “ಬುದ್ಧಿವಂತ 2′ ಚಿತ್ರದ ಬಹುತೇಕ ಚಿತ್ರೀಕರಣ ಈಗಾಗಲೇ ಮುಗಿದಿದೆ. ಮಾತಿನ ಭಾಗದ ಚಿತ್ರೀಕರಣವನ್ನು ಸಹ ಪೂರೈಸಿದೆ. ಸದ್ಯಕ್ಕೆ ಚಿತ್ರದ ಹಾಡುಗಳ ಚಿತ್ರೀಕರಣವನ್ನು ಮಾತ್ರ ಚಿತ್ರತಂಡ ಬಾಕಿ ಉಳಿಸಿಕೊಂಡಿದೆ. ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸಲು ಚಿತ್ರತಂಡ ಸಾಕಷ್ಟು ಯೋಜನೆ ರೂಪಿಸಿತ್ತು. ಮಲೇಷಿಯಾ ಹಾಗು ಕತಾರ್‌ ದೇಶಗಳಲ್ಲಿರುವ ಸುಂದರ ತಾಣಗಳಲ್ಲಿ ಸಖತ್‌ ಕಲರ್‌ಫ‌ುಲ್‌ ಆಗಿ ಚಿತ್ರದ ಹಾಡುಗಳನ್ನು ಚಿತ್ರೀಕರಿಸಬೇಕೆಂದು ಕನಸು ಕಂಡಿದ್ದ ಚಿತ್ರತಂಡಕ್ಕೆ ಈಗ ಕೋವಿಡ್ 19 ಅಡ್ಡ ಬಂದಿದ್ದು, ಚಿತ್ರೀಕರಣ ನಡೆಸಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸದ್ಯದ ಪರಿಸ್ಥತಿಯಲ್ಲಿ ವಿದೇಶದತ್ತ ಮುಖ ಮಾಡಿ ಮಲಗೋದು ಕಷ್ಟ ಎಂಬುದನ್ನು ಮನಗಂಡಿರುವ ಚಿತ್ರತಂಡ, ವಿದೇಶದತ್ತ ಪಯಣ ಮಾಡುವ ಆಸೆಯನ್ನು ಕೈ ಬಿಟ್ಟಿದೆ. ಬದಲಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೇ ವಿಶೇಷ ಹಾಗು ಕಲರ್‌ಫ‌ುಲ್‌ ಎನಿಸುವಂತಹ ಸೆಟ್‌ ನಿರ್ಮಿಸಿ ಚಿತ್ರದ ಹಾಡುಗಳನ್ನು ಚಿತ್ರೀಕರಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.

ಕೊನೆಯ ಪಕ್ಷ ರಾಜಸ್ತಾನದಲ್ಲಾದರೂ ಚಿತ್ರೀಕರಣ ಮಾಡಬೇಕು ಎಂಬ ಕನಸು ಚಿತ್ರತಂಡದ್ದು. ಆದರೆ, ಅಲ್ಲೂ ಸಹ ಕರೊನೊ ಸಮಸ್ಯೆ ಎದುರಾಗಿದ್ದು, ಆ ರಾಜ್ಯ ಕೂಡ ಸದ್ಯಕ್ಕೆ ಲಾಕ್‌ ಆಗಿದೆ. ಕೋವಿಡ್ 19 ಭೀತಿ ಎದುರಿಸುತ್ತಿರುವ ರಾಜಸ್ತಾನದಲ್ಲೂ ಚಿತ್ರೀಕರಣಕ್ಕೆ ಹೊರಡುತ್ತೋ ಇಲ್ಲವೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಅಂದಹಾಗೆ, ಈ ಚಿತ್ರವನ್ನು ಕಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ಟಿ.ಆರ್‌.ಚಂದ್ರಶೇಖರ್‌ ನಿರ್ಮಾಣ ಮಾಡಿದ್ದು, ಜಯರಾಮ್‌ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸೋನಾಲ್‌ ಮೊಂತೆರೋ ಅವರು ಉಪೇಂದ್ರ ಅವರಿಗೆ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಾಯಕ ನಟರೊಬ್ಬರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರು ಯಾರು ಎಂಬುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಸದ್ಯದಲ್ಲೇ ಚಿತ್ರತಂಡ ಆ ಚಿತ್ರನಟ ಯಾರು ಎಂಬದನ್ನು ರಿವೀಲ್‌ ಮಾಡಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next