ಪ್ರತಿವರ್ಷ ಕಿರಿತೆರೆಯಿಂದ ಹಿರಿತೆರೆಗೆ ಒಂದಷ್ಟು ನಟಿಯರು ಪರಿಚಯವಾಗುತ್ತಲೇ ಇರುತ್ತಾರೆ. ಈಗ ಆ ಸಾಲಿಗೆ ಸೇರ್ಪಡೆಯಾಗುತ್ತಿರುವ ಮತ್ತೂಂದು ಹೆಸರು ಭೂಮಿಕಾ ರಮೇಶ್. ಹೌದು, ಕಿರುತೆರೆಯ “ಭಾಗ್ಯಲಕ್ಷ್ಮಿ’ ಧಾರಾವಾಹಿಯ ಲಕ್ಷ್ಮಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ನಟಿ ಭೂಮಿಕಾ ರಮೇಶ್ ಈಗ “ಡಿಸೆಂಬರ್ 24′ ಸಿನಿಮಾದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.
ಮೆಡಿಕಲ್ ರಿಸರ್ಚ್‌ಗೆ ಸಂಬಂಧಪಟ್ಟ ಘಟನೆಗಳನ್ನಿಟ್ಟುಕೊಂಡು ನಿರ್ಮಾಣವಾದ “ಡಿಸೆಂಬರ್ 24′ ಚಿತ್ರಕ್ಕೆ ನಾಗರಾಜ್ ಎಂ. ಜಿ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, ಸಿನಿಮಾ ಇದೇ ಫೆಬ್ರವರಿ ಮೊದಲ ವಾರ ತೆರೆಕಾಣಲಿದೆ.
ಭಾರತದಲ್ಲಿ ಸಾಕಷ್ಟು ನವಜಾತ ಶಿಶುಗಳು ಉಸಿರಾಟದ ಸಮಸ್ಯೆಯಿಂದಾಗಿಯೇ ಮರಣ ಹೊಂದುತ್ತಿವೆ. ಇದಕ್ಕೆ ಕಾರಣವೇನೆಂಬುದರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. 2015 ರಿಂದ 2019ರ ನಡುವೆ ಹುಲಿಯೂರು ದುರ್ಗದಲ್ಲಿ ನಡೆದ ನೈಜ ಘಟನೆಯನ್ನು ಪ್ರೇರಣೆಯಾಗಿಟ್ಟುಕೊಂಡು ನಿರ್ಮಾಣವಾಗಿರುವ ಈ ಸಿನಿಮಾ ಹಾರರ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿದೆ.
ಇನ್ನು “ಡಿಸೆಂಬರ್ 24′ ಸಿನಿಮಾದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯಾಗಿ ಭೂಮಿಕಾ ರಮೇಶ್ ಕಾಣಿಸಿಕೊಂಡಿದ್ದಾರೆ. “ನವಜಾತ ಶಿಶುಗಳನ್ನು ಹೇಗಾದರೂ ಮಾಡಿ ಸಾವಿನಿಂದ ಪಾರು ಮಾಡಬೇಕೆಂದು ಎಂಟು ಜನ ಮೆಡಿಕಲ್ ಸ್ಟುಡೆಂಟ್ಸ್ ತಂಡ ಔಷಧಿ ಹುಡುಕಿಕೊಂಡು ಕಾಡಿಗೆ ತೆರಳುತ್ತದೆ. ಅಲ್ಲಿ ಅವರು ಏನೇನು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಾರೆ. ಕೊನೆಗೂ ತಾವು ಅಂದುಕೊಂಡಂತೆ ಮೆಡಿಕಲ್ ಸ್ಟುಡೆಂಟ್ಸ್ ಮೆಡಿಸಿನ್ ಕಂಡು ಹಿಡಿಯುತ್ತಾರಾ? ಎಂಬುದೇ ಸಿನಿಮಾದ ಕಥೆ’ ಎಂದು ವಿವರಣೆ ಕೊಡುತ್ತದೆ ಚಿತ್ರತಂಡ.
ಉಳಿದಂತೆ ಅಪ್ಪು ಬಡಿಗೇರ್, ರವಿ ಕೆ. ಆರ್ ಪೇಟೆ, ರಘು ಶೆಟ್ಟಿ, ಸಾಗರ್ ರಾಮಾಚಾರಿ, ಜಗದೀಶ್, ಮಿಲನಾ ರಮೇಶ್, ದಿವ್ಯಾ, ಅಭಿನಯ, ಭಾಸ್ಕರ್ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ರಘು ಎಸ್ ನಿರ್ಮಿಸಿರುವ “ಡಿಸೆಂಬರ್ 24′ ಸಿನಿಮಾಕ್ಕೆ ವಿನಯ ಗೌಡ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಒಟ್ಟಾರೆ ಮೊದಲ ಬಾರಿಗೆ ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿಯಾಗುತ್ತಿರುವ ಭೂಮಿಕಾ ಎಷ್ಟರ ಮಟ್ಟಿಗೆ ಸಿನಿಪ್ರಿಯರ ಗಮನ ಸೆಳೆಯುತ್ತಾರೆ ಎಂಬುದು ಫೆಬ್ರವರಿ ವೇಳೆಗೆ ಗೊತ್ತಾಗಲಿದೆ.