ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತಾವಧಿಯಲ್ಲಿ ನಡೆದ ವಿಷಯ ಇಟ್ಟುಕೊಂಡು “ಭೂಮಿಪುತ್ರ’ ಹೆಸರಿನ ಚಿತ್ರವೊಂದು ಶುರುವಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಈ ಹಿಂದೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೇರಿದ್ದ ಜನಜಂಗುಳಿ ನಡುವೆ ಮಾಜಿ ಪ್ರಧಾನಿ ದೇವೇಗೌಡರು ಆ ಚಿತ್ರಕ್ಕೆ ಚಾಲನೆ ಕೊಟ್ಟಿದ್ದೂ ಉಂಟು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದೂ ಆಗಿತ್ತು. ಆದರೆ, ಆ ಚಿತ್ರ ಈಗ ಎಲ್ಲಿಯವರೆಗೆ ಬಂದಿದೆ ಎಂಬುದಕ್ಕೆ ಮಾತ್ರ
ಉತ್ತರವಿಲ್ಲ. ಅಂದರೆ, “ಭೂಮಿಪುತ್ರ’ ಚಿತ್ರಕ್ಕೆ ಚಾಲನೆ ಸಿಕ್ಕಿದೆ ಹೊರತು, ಚಿತ್ರೀಕರಣ ಶುರುವಾಗಿಯೇ ಇಲ್ಲ.
ಅಷ್ಟೇ ಯಾಕೆ, ಗಾಂಧಿನಗರದ ಗಲ್ಲಿಗಲ್ಲಿಯಿಂದಲೂ “ಭೂಮಿಪುತ್ರ’ ಶುರುವಾಗೋದು ಅನುಮಾನ ಎಂಬ
ಮಾತುಗಳೇ ಕೇಳಿಬರುತ್ತಿವೆ.
ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು, “ಭೂಮಿಪುತ್ರ’ನ ಸ್ಕ್ರಿಪ್ಟ್ ಸಿದ್ಧ ಮಾಡಿಕೊಂಡು, ಕಲಾವಿದರು, ತಂತ್ರಜ್ಞರೊಂದಿಗೆ ರೆಡಿಯಾಗಿದ್ದರೂ, ಗೋಧೂಳಿಯಲ್ಲಿ ಮುಹೂರ್ತ ನಡೆದದ್ದು ಬಿಟ್ಟರೆ, ಚಿತ್ರೀಕರಣ ಮಾತ್ರ ಶುರುವಾಗಿಲ್ಲ.
ಭರ್ಜರಿ ಮುಹೂರ್ತ ನಡೆಸಿದ ನಿರ್ಮಾಪಕರು ಈಗ ಚಿತ್ರೀಕರಣ ಶುರುಮಾಡಲು ಯಾಕೆ ಹಿಂದೇಟು ಹಾಕುತ್ತಿದ್ದಾರೆಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಮುಹೂರ್ತ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದ ಹಣ ಬ್ಯಾಲೆನ್ಸ್ ಇದೆ, ಅದನ್ನೇ ಕ್ಲಿಯರ್ ಮಾಡಿಲ್ಲ, ಇನ್ನು ಸಿನಿಮಾ ಶುರುವಾಗುತ್ತದಾ ಎಂಬ ಮಾತುಗಳು ಸಹ ಗಾಂಧಿನಗರದಿಂದ ಕೇಳಿಬರುತ್ತಿವೆ. ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಿ, “ಭೂಮಿಪುತ್ರ’ ಚಿತ್ರಕ್ಕೆ ಚಾಲನೆ ಕೊಟ್ಟು, ಈಗ ಯಾವುದೇ ಕೆಲಸಗಳು ಮುಂದುವರೆದಿಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ನಿರ್ಮಾಪಕರ ಈ ನಡೆಯಿಂದ, ಚಿತ್ರತಂಡ ಕೂಡ ಮುಂದುವರೆಯಬೇಕಾ, ಕಾಯಬೇಕಾ ಅಥವಾ ಪ್ರಾಜೆಕ್ಟ್ ಬಿಡಬೇಕಾ ಎಂಬ ಗೊಂದಲದಲ್ಲಿದೆ. “ಭೂಮಿಪುತ್ರ’ ಚಿತ್ರದ ಕೆಲಸ ಎಲ್ಲಿಯವರೆಗೆ ಬಂದಿದೆ ಎಂಬ ಪ್ರಶ್ನೆಗೆ, “ಉದಯವಾಣಿ’ ಜೊತೆಗೆ ಮಾತನಾಡಿದ ನಾರಾಯಣ್, “ಚಿತ್ರದ ಸ್ಕ್ರಿಪ್ಟ್ ರೆಡಿ ಇದೆ. ಹೀರೋ ಸೇರಿದಂತೆ ಕಲಾವಿದರು, ತಂತ್ರಜ್ಞರು ಕಾಯುತ್ತಿದ್ದಾರೆ. ಆದರೆ, ನಿರ್ಮಾಪಕರಿಂದ ಶೂಟಿಂಗ್‌ಗೆ ಹೋಗಲು ಇನ್ನೂ ಗ್ರೀನ್‌ಸಿಗ್ನಲ್
ಸಿಕ್ಕಿಲ್ಲ. ನಾವೆಲ್ಲ ರೆಡಿ ಇದ್ದೇವೆ. ಅವರು ಇದುವರೆಗೆ ಮಾತಿಗೆ ಸಿಕ್ಕಿದ್ದು ಕೇವಲ ಮೂರು ಬಾರಿಯಷ್ಟೇ.
ಚಿತ್ರೀಕರಣದ ಬಗ್ಗೆ ಸ್ಪಷ್ಟತೆ ಕೊಟ್ಟಿಲ್ಲ. ಅವರು ನಾಳೆ ಶೂಟಿಂಗ್‌ಗೆ ಹೋಗಿ ಅಂದರೂ, ನಾಡಿದ್ದೇ,
ಶೂಟಿಂಗ್ ಹೋಗೋಕೆ ನಾವು ರೆಡಿ ಇದ್ದೇವೆ.
ಆದರೆ, ಅವರೇಕೆ ತಟಸ್ಥವಾಗಿದ್ದಾರೋ ಗೊತ್ತಿಲ್ಲ’ ಎನ್ನುತ್ತಾರೆ. ಅದೇನೆ ಇದ್ದರೂ, ಸ್ಟಾರ್ ನಟರು, ನುರಿತ ತಂತ್ರಜ್ಞರನ್ನು ಸೇರಿಸಿ ಸಿನಿಮಾ ಮಾಡೋಕೆ ಹೊರಟಿದ್ದ ನಾರಾಯಣ್, ಈ ಚಿತ್ರಕ್ಕಾಗಿ ಎರಡು ಸಿನಿಮಾ ಕೈ ಬಿಟ್ಟಿದ್ದಾರಂತೆ. “ನಿರ್ಮಾಪಕರಲ್ಲಿ ಏನು ಸಮಸ್ಯೆ ಇದೆಯೋ ಗೊತ್ತಿಲ್ಲ. ಯಾವುದಕ್ಕೂ ಅವರು ಉತ್ತರ ನೀಡುತ್ತಿಲ್ಲ. “ಭೂಮಿಪುತ್ರ’ ಸದ್ಯಕ್ಕೆ ತಟಸ್ಥವಾಗಿದೆ. ಮುಂದೇನೋ ಗೊತ್ತಿಲ್ಲ’ ಎಂಬುದು
ಅವರ ಮಾತು.
ಒಟ್ಟಿನಲ್ಲಿ, “ಭೂಮಿಪುತ್ರ’ ಸೆಟ್ಟೇರುತ್ತಾ? ಗೊತ್ತಿಲ್ಲ. ಆದರೆ, ನಿರ್ಮಾಪಕ ಪ್ರಭುಕುಮಾರ್ ಅವರು ದೊಡ್ಡದ್ದೊಂದು ಕಾರ್ಯಕ್ರಮ ಮಾಡಿ, ಪ್ರಚಾರ ಪಡೆದುಕೊಂಡಿದ್ದಷ್ಟೇ ಭಾಗ್ಯ.