Advertisement
ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಅವರು ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ಅಡ್ಡೇರಿ-ಚಿಕ್ಕಬಿಲಗುಂಜಿ ಗ್ರಾಮದ ತಮ್ಮ ತೋಟದಲ್ಲಿ ಭೂಮಿಗೆ ಪೂಜೆ ಸಲ್ಲಿಸಿದರು. ಹಾಲಪ್ಪ, ಕಣ್ಣೂರು ತಮ್ಮ ಮನೆಯವರೊಂದಿಗೆ ಕುಳಿತು ತೋಟದಲ್ಲಿಯೇ ಊಟ ಮಾಡಿದರು. ಅಪ್ಪಯ್ಯ ಪೂಜೆ ಮಾಡಿ ಭೂಮಿಗೆ ತಲೆ ಬಾಗುವಾಗ ನೆಲವನ್ನೇ ನಂಬಿ ನರನಾಡಿಗಳನ್ನು ಸವೆಸಿ ಬೆವರ ಭಾಷ್ಯ ಬರೆದ ಜೀವದ ಎದೆಯ ಮಾತು ಸುತ್ತಲೂ ಪ್ರತಿಧ್ವನಿಸಿದಂತಾಯಿತು. ಅವ್ವನಿಗೆ ವಯಸ್ಸು ಆದಂತೆ ಹಬ್ಬಕ್ಕೂ ವಯಸ್ಸು ಆದಂತೆ ಅನ್ನಿಸುತ್ತದೆ. ಅಮ್ಮನ ಸಿಹಿ ಮತ್ತು ಸಪ್ಪೆ ಕಡಬು ಇನ್ನಿತರ ಅಡುಗೆ ತೋಟದಲ್ಲಿ ಉಣ್ಣುವುದರಿಂದಲೇ ಹೆಚ್ಚು ರುಚಿ ಎನ್ನಿಸುತ್ತದೆ ಎಂದು ತುಮರಿ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.
Related Articles
Advertisement
ತಾಪಂ ಸದಸ್ಯೆ ಸರಸ್ವತಿ ಗಣಪತಿ, ಹರತಾಳು ರಾಮಚಂದ್ರ, ಗಣಪತಿ, ಕೀರ್ತಿಗೌಡ ಕುಕ್ಕಳಲೆ, ಕೆ.ಬಿ. ಹೂವಪ್ಪ, ಆರ್.ಟಿ. ಗೋಪಾಲ, ಎನ್. ಸತೀಶ್, ಎ.ಟಿ.ನಾಗರತ್ನ, ತೀರ್ಥೇಶ್, ಸುಂದರೇಶ್, ನಿರೂಪ ರಿಪ್ಪನ್ ಪೇಟೆ, ಮುರುಳಿ, ಶಿವಪ್ಪ ಅವಡೆ, ರಮೇಶ್ ಚಿಬ್ಬಳ್ಳಿ, ಲೋಕೇಶ್ ತಮ್ಮಡಿಕೊಪ್ಪ ಇನ್ನಿತರರು ಇದ್ದರು.
ವಿವಿಧೆಡೆ ಭೂಮಿ ಹುಣ್ಣಿಮೆ ಸಂಭ್ರಮ :
ಸಾಗರ: ವರದಪುರದ ಶ್ರೀಧರಾಶ್ರಮ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಶನಿವಾರ ಅಡಕೆ ತೋಟ, ಭತ್ತದ ಗದ್ದೆಗಳಲ್ಲಿ ರೈತ ವರ್ಗ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಭೂಮಿ ಹುಣ್ಣಿಮೆ ಆಚರಣೆ ಸಂಭ್ರಮದಿಂದ ನಡೆಯಿತು. ಕೃಷಿಕರು ಅಡಕೆ ತೋಟದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು
ಅಡಕೆ ಕೊನೆಗಳನ್ನು ಹೊಂದಿದ ಮರವನ್ನು ಅಲಂಕರಿಸಿ ಪೂಜೆ ಸಲ್ಲಿಸಿದರೆ ತೆನೆ ಹೊತ್ತ ಭತ್ತದ ಗದ್ದೆಗಳ ಬದುವಿನಲ್ಲಿ ರೈತರು ಬಾಳೆ ಗಿಡಗಳನ್ನು ನೆಟ್ಟು ಭೂ ಪೂಜೆ ಸಲ್ಲಿಸಿದರು. ಈ ಭಾಗದ ಈಡಿಗ ಜನಾಂಗದವರು ಭೂಮಣ್ಣಿ ಬುಟ್ಟಿ ಸಿದ್ಧಪಡಿಸಿಅದರಲ್ಲಿ ಭೂಮಿಗೆ ಸಲ್ಲುವ ಕಡುಬು, ವಿವಿಧ ಎಲೆಗಳ ಪಲ್ಯಗಳನ್ನು ತಯಾರಿಸಿ ಪೂಜಾ ಸ್ಥಳಕ್ಕೆ ಹೊತ್ತೂಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದೊಂದು ದಿನ ತೋಟದಲ್ಲಿಯೇ ಊಟ ಮಾಡುವುದು ಪರಂಪರೆ. ಏಳು ತೋಟಗಳಲ್ಲಿ ಊಟ ಮಾಡಬೇಕು ಎಂಬ ನಿಯಮವನ್ನು ಹಿಂದೆ ತೋಟದಿಂದ ತೋಟಕ್ಕೆ ತೆರಳಿ ಆಚರಿಸಲಾಗುತ್ತಿತ್ತಾದರೂ ಈಗೀಗ ಅದು ಮಾಯವಾಗುತ್ತಿದೆ. ಭೂಮಿ ಹುಣ್ಣಿಮೆಯಂದು ಭೂಮಿಗೆ ವಿವಿಧ ಭಕ್ಷ್ಯ ಭೋಜನವನ್ನು ಒಳಗೊಂಡ ಚರಗ ಚೆಲ್ಲುವುದು, ಭೂಮಿತಾಯಿಯ ಬಯಕೆಯನ್ನು ತೀರಿಸುವ 9 ವಿಧದ ಆಹಾರವನ್ನು ನೈವೇದ್ಯವಾಗಿ ಇರಿಸಲಾಗುತ್ತದೆ. ನೈವೇದ್ಯಕ್ಕೆ ಇರಿಸಿದನ್ನು ಭೂಮಿಯಲ್ಲಿ ಬಲೀಂದ್ರನಿಗೆ ಬಚ್ಚಿಟ್ಟು ಬಲಿಪಾಡ್ಯಮಿ ದಿನ ಅದನ್ನು ಭೂಮಿಗೆ ಬೀರಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹಲವು ಕೃಷಿಕರ ಮನೆ ಮಕ್ಕಳು ಉದ್ಯೋಗ ನಿಮಿತ್ತ ನಗರ ಸೇರಿದ್ದರಿಂದ ಭೂಮಿ ಹುಣ್ಣಿಮೆಯ ಉತ್ಸಾಹ ಕುಂದಿತ್ತು. ಈ ಬಾರಿ ಹಲವರು ಕೋವಿಡ್ ಕಾರಣದಿಂದ ಹಳ್ಳಿಯ ತಮ್ಮ ಮನೆಯಲ್ಲಿಯೇ ಉದ್ಯೋಗದ ಕೆಲಸ ಮಾಡುತ್ತಿರುವರಾಗಿದ್ದು, ರಜೆಯ ದಿನವಾದ ಶನಿವಾರವೇ ಹಬ್ಬ ಬಂದಿದ್ದರಿಂದ ಅವರೆಲ್ಲ ಪಾಲ್ಗೊಂಡು ಹಬ್ಬಕ್ಕೆ ಮೆರುಗು ನೀಡಿದರು ಎಂದು ಕೆಲವು ಹಿರಿಯ ಕೃಷಿಕರು ಸಂತಸಪಟ್ಟರು.