ಹೊಸದಿಲ್ಲಿ: ಭೋಜ್ ಪುರಿ ನಟ, ಖ್ಯಾತ ಗಾಯಕ ಪವನ್ ಸಿಂಗ್ ಅವರು ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಸಂಜೆ ಬಿಡುಗಡೆ ಮಾಡಿತ್ತು.ಈ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರಲ್ಲಿ ಪವನ್ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
38 ರ ಹರೆಯದ ಜನಪ್ರಿಯ ಪವನ್ ಸಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಅಸನ್ಸೋಲ್‌ನಿಂದ ಚುನಾವಣೆಗೆ ಸ್ಪರ್ಧಿಸದಿರುವ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ. ಬಿಜೆಪಿಯ ಉನ್ನತ ನಾಯಕತ್ವಕ್ಕೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
”ಪಕ್ಷವು ನನ್ನನ್ನು ನಂಬಿ ನನ್ನನ್ನು ಅಸನ್ಸೋಲ್‌ನಿಂದ ಅಭ್ಯರ್ಥಿ ಎಂದು ಘೋಷಿಸಿತು, ಆದರೆ ಕೆಲವು ಕಾರಣಗಳಿಂದ ನಾನು ಅಸನ್ಸೋಲ್‌ನಿಂದ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ನಾಲ್ವರು ಭೋಜ್‌ಪುರಿ ನಟರಿಗೆ ಟಿಕೆಟ್ ನೀಡಲಾಗಿದೆ, ಇದರಲ್ಲಿ ಈಶಾನ್ಯ ದೆಹಲಿಯಿಂದ ಮನೋಜ್ ತಿವಾರಿ, ಯುಪಿಯ ಗೋರಖ್‌ಪುರದಿಂದ ರವಿ ಕಿಶನ್, ಯುಪಿಯ ಅಜಂಗಢದಿಂದ ದಿನೇಶ್ ಲಾಲ್ ಯಾದವ್ ನಿರಾಹುವಾ ಸೇರಿದ್ದಾರೆ.
ಅಸನ್ಸೋಲ್‌ನಿಂದ ಟಿಎಂಸಿ ನಾಯಕ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ಹಾಲಿ ಸಂಸದರಾಗಿದ್ದಾರೆ.