Advertisement

ಭೀಷ್ಮರ ಆಡಳಿತ ಸೂತ್ರ ಹೆಚ್ಚು ಪ್ರಸ್ತುತ: ಡಿ.ವಿ. ಪ್ರತಿಪಾದನೆ

09:52 AM Jan 21, 2020 | Sriram |

ಉಡುಪಿ: ಮಹಾಭಾರತದ ಭೀಷ್ಮಾಚಾರ್ಯರು ನೀಡಿದ ಆಡಳಿತ ಸೂತ್ರ ಹಿಂದೆಂದಿಗಿಂತಲೂ ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದು ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ಪರ್ಯಾಯೋತ್ಸವದ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯವು ರಾಜನಿಲ್ಲದೆಯೂ ಸುಭಿಕ್ಷವಾಗಿ, ಜನಕಲ್ಯಾಣಕರವಾಗಿ ರೂಪುಗೊಳ್ಳುವಂತಿರಬೇಕು ಎಂದು ಭೀಷ್ಮರು ದ್ವಾಪರ ಯುಗದಲ್ಲಿಯೇ ಹೇಳಿದ್ದರು. ಕುಕೃತ್ಯಗಳು ನಡೆಯದಂತೆ ದಂಡವಿಲ್ಲದ ದಂಡಸಂಹಿತೆ ರೂಪುಗೊಳ್ಳಬೇಕು, ಪ್ರೀತಿವಿಶ್ವಾಸಗಳು ಕಾನೂನಾಗುವ ಕಾನೂನು ಬೇಕು, ಸಹಮತವೇ ಬಹುಮತವಾಗಬೇಕು ಎಂಬ ಪ್ರಮುಖ ಸೂತ್ರಗಳನ್ನು ಭೀಷ್ಮರು ಮುಂದಿಟ್ಟಿದ್ದರು. ಅಧಿಕಾರ ಕ್ಕಾಗಿ ಹಾತೊರೆಯುವ ಇಂದಿನ ದಿನಗಳಲ್ಲಿ ಇದನ್ನು ಅಳವಡಿಸಿಕೊಳ್ಳುವುದು ಕಷ್ಟವಾದರೂ ಭೀಷ್ಮರ ನೀತಿಗಳು ಇಂದು ಹೆಚ್ಚು ಪ್ರಸ್ತುತ ಎಂದು ಡಿ.ವಿ. ಹೇಳಿದರು.


ಧಾರ್ಮಿಕ ಪೀಠಗಳು ನೀಡುವ ಸಂದೇಶಗಳು ಸಮಾಜಕ್ಕೆ ದೊಡ್ಡ ಸಂದೇಶವಾಗುತ್ತವೆ. ಅದಮಾರು ಪರ್ಯಾಯದಲ್ಲಿ ಸ್ವತ್ಛತೆ, ಪ್ಲಾಸ್ಟಿಕ್‌ ನಿರ್ಮೂಲನಕ್ಕೆ ನೀಡಿದ ಆದ್ಯತೆ ಮೆಚ್ಚುವಂತಹುದು. ಜನಜಾಗೃತಿ ಆಗುವುದು ಬಹಳ ಮುಖ್ಯ. ಈ ಕೆಲಸ ಶ್ರೀ ಅದಮಾರು ಶ್ರೀಪಾದರ ಮೂಲಕ ಆಗುತ್ತಿದೆ ಎಂದು ಡಿ.ವಿ. ಹೇಳಿದರು.

ನಾಮಸ್ಮರಣೆಯಿಂದ ಪಾವನ
ಭಗವಂತನ ನಾಮಸ್ಮರಣೆಯಿಂದ ಜೀವನ ಪಾವನವಾಗುತ್ತದೆ ಎಂದು ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ನುಡಿದರು.

ಭಾಗವತ, ಮಹಾಭಾರತ, ರಾಮಾಯಣಗಳ ಮೌಲಿಕ ಸಂದೇಶ ಗಳನ್ನು ಮಕ್ಕಳಿಗೆ ತಿಳಿಹೇಳುವ ಕೆಲಸ ಆಗಬೇಕು ಎಂದು ಮಂಗಳೂರು ಎನ್‌ಎಂಪಿಟಿ ಅಧ್ಯಕ್ಷ ಎ.ವಿ. ರಮಣ ಅವರು ಕರೆ ನೀಡಿದರು.

ಎಂಎಂಎನ್‌ಎಲ್‌ ಆಡಳಿತ ನಿರ್ದೇಶಕ ಟಿ. ಸತೀಶ್‌ ಯು. ಪೈ, ಮುಂಬಯಿಯ ವೈದ್ಯ ಡಾ| ಎಂ.ಎಸ್‌. ಆಳ್ವ, ಹರ್ಯಾಣದ ಸಂಸದ ಅಶೋಕ್‌ ತನ್ವಾರ್‌ ಮುಖ್ಯ ಅತಿಥಿಗಳಾಗಿದ್ದರು. ಕೃಷ್ಣ ಮಠದಲ್ಲಿ ನೈವೇದ್ಯ ತಯಾರಿಸುತ್ತಿದ್ದ ದಿ| ಸುಬ್ರಹ್ಮಣ್ಯ ಭಟ್‌ ಸ್ಮರಣಾರ್ಥ ಉದಯ ತಂತ್ರಿ, ಗಣಪತಿ ಭಟ್‌ ಅವರಿಗೆ, ನಾಗಸ್ವರ ಸೇವೆ ನಡೆಸುತ್ತಿದ್ದ ದಿ| ಸುಬ್ಬಣ್ಣ ಶೇರಿಗಾರ್‌ ಸ್ಮರಣಾರ್ಥ ಯು. ದಾಮೋದರ್‌ ಅವರಿಗೆ ಶ್ರೀಕೃಷ್ಣಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಟಿ. ಸತೀಶ್‌ ಯು. ಪೈ ಮತ್ತು ಸಚಿವ ಡಿ.ವಿ. ಸದಾನಂದ ಗೌಡ ಅವರನ್ನು ಅದಮಾರು ಶ್ರೀಗಳು ಗೌರವಿಸಿದರು ಶ್ರೀಕೃಷ್ಣ ಸೇವಾ ಬಳಗದ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್‌ ಸ್ವಾಗತಿಸಿ ಗೌರವಾಧ್ಯಕ್ಷ ರಘುಪತಿ ಭಟ್‌ ಪ್ರಸ್ತಾವನೆಗೈದರು.

Advertisement

ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ನಿಷೇಧ: ಡಿ.ವಿ.
ಟಿವಿ, ಕಾರು, ವಿಮಾನ, ಅಂಗಿಯ ಬಟನ್‌ ಹೀಗೆ ಎಲ್ಲವೂ ಪ್ಲಾಸ್ಟಿಕ್‌ ಆಗಿದೆ. ನಾವು ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್‌ನ್ನು ನಿಷೇಧಿಸುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀಗಳು ಉತ್ತಮ ಕ್ರಮ ತೆಗೆದುಕೊಂಡಿದ್ದಾರೆ.
– ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು.

ಉಡುಪಿಯಲ್ಲಿ ನೀರಿಂಗಿಸುವಿಕೆ ಪ್ರಸ್ತಾವ
ಉಡುಪಿಯಲ್ಲಿ ಹೆಚ್ಚಿದ ಕಾಂಕ್ರೀಟೀಕರಣದಿಂದ ನೀರು ಇಂಗದೆ ನೀರಿನ ಕೊರತೆ ಉಂಟಾಗುತ್ತಿದೆ. ನಗರದಲ್ಲಿ ನೀರಿಂಗಿಸುವಿಕೆಯನ್ನು ಹೇಗೆ ಮಾಡಬೇಕೆಂದು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಚಿಂತನೆ ನಡೆಸಿದ್ದಾರೆ. ಸಿಎಸ್‌ಆರ್‌ ನಿಧಿ ಸಹಕಾರದಿಂದ ಇದನ್ನು ಆಗಗೊಳಿಸಲು ಜಿಲ್ಲಾಧಿಕಾರಿ, ಹಿಂದಿನ ಎಸ್‌ಪಿ ಅಣ್ಣಾಮಲೈಯವರೊಂದಿಗೆ ಮಾತುಕತೆ ನಡೆಸಿದ್ದಾರೆ.
– ರಘುಪತಿ ಭಟ್‌, ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next