“ಇದು ತಿನ್ನುವವನ ಮತ್ತು ಬೇಯಿಸುವವನ ನಡುವಿನ ಕಥೆ’
– ಕಾರ್ತಿಕ್ ಶರ್ಮಾ ಹೀಗೆ ಹೇಳಿ ಪಕ್ಕದಲ್ಲಿದ್ದ ಸ್ಟಾಂಡಿ ನೋಡಿದರು. ಅಡುಗೆ ಮಾಡುತ್ತಿರುವ ನಾಯಕನ ಫೋಟೋ ಕೆಳಗಡೆ “ಭೀಮಸೇನ ನಳಮಹಾರಾಜ’ ಎಂದು ದೊಡ್ಡದಾಗಿ ಬರೆಯಲಾಗಿತ್ತು. “ಜೀರ್‌ಜಿಂಬೆ’ ಎಂಬ ಸಿನಿಮಾ ಮಾಡಿದ್ದ ಕಾರ್ತಿಕ್ ಶರ್ಮಾ ಅವರ ಎರಡನೇ ಸಿನಿಮಾ “ಭೀಮಸೇನ ನಳಮಹಾರಾಜ’. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಇಡೀ ತಂಡ ಮಾಧ್ಯಮ ಮುಂದೆ ಬಂದಿತ್ತು. ನಿರ್ದೇಶಕ ಕಾರ್ತಿಕ್ ಕೂಡಾ ಸಿನಿಮಾ ಬಗ್ಗೆ ವಿವರವಾಗಿ ಮಾತನಾಡುವ ಉತ್ಸಾಹದಲ್ಲಿದ್ದರು. ಆ ಉತ್ಸಾಹದಲ್ಲೇ “ಇದು ತಿನ್ನುವವನ ಹಾಗೂ ಬೇಯಿಸುವವನ ನಡುವಿನ ಕಥೆ’ ಎಂದರು.
“ಭೀಮಸೇನ ನಳಮಹಾರಾಜ’ ಚಿತ್ರ ಒಬ್ಬ ಅಡುಗೆ ಭಟ್ಟನ ಸುತ್ತ ಸುತ್ತುವ ಕಥೆಯನ್ನು ಹೊಂದಿದೆಯಂತೆ. “ತಿನ್ನುವ ಅನ್ನದ ಮೇಲೆ ಅವರವರ ಹೆಸರು ಬರೆದಿರುತ್ತದೆ ಎಂಬ ಮಾತು ನಮ್ಮಲ್ಲಿದೆ. ಅದೇ ರೀತಿ ಅದನ್ನು ಬೇಯಿಸಿ ಹಾಕುವವರ ಹೆಸರು ಕೂಡಾ ಬರೆದಿರುತ್ತದೆ. ಈ ಚಿತ್ರದಲ್ಲಿ ಅಡುಗೆ ಭಟ್ಟನ ಸುತ್ತ ನಡೆಯುವ ಅಂಶಗಳನ್ನು ಹೇಳುತ್ತಾ ಹೋಗಿದ್ದೇವೆ. ಒಂದೇ ವಾಕ್ಯದಲ್ಲಿ ಹೇಳಬೇಕಾದರೆ ಇದು ತಿನ್ನುವವನ ಹಾಗೂ ಬೇಯಿಸಿ ಹಾಕುವವನ ನಡುವಿನ ಮುಖಾಮುಖೀ ಎನ್ನಬಹುದು’ ಎಂದು ವಿವರ ಕೊಟ್ಟರು ಕಾರ್ತಿಕ್. ಹಾಗಾದರೆ ಇದು ಅಡುಗೆ ಕುರಿತ ಸಿನಿಮಾನಾ ಎಂದು ನೀವು ಕೇಳಬಹುದು. ಖಂಡಿತಾ ಅಲ್ಲ, ಅಡುಗೆಯನ್ನು ಸಾಂಕೇತಿಕವಾಗಿಸಿ, ಜೀವನದ ಕುರಿತ ಕಥೆ ಹೇಳಿದ್ದಾರೆ ಕಾರ್ತಿಕ್.
“ಒಬ್ಬ ಅಡುಗೆ ಭಟ್ಟ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಮಾಡುತ್ತಾನೆ ಎಂಬ ಅಂಶ ಇಲ್ಲಿ ಹೈಲೈಟ್. ಜೊತೆಗೆ ಇಲ್ಲಿನ ಮುಖ್ಯಪಾತ್ರಧಾರಿ ಕೂಡ ಕುಟುಂಬದ ಸುಖ, ಎಲ್ಲರೂ ಸೇರಿ ಒಟ್ಟಿಗೆ ಊಟ ಮಾಡುವಾಗ ಸಿಗುವ ಸುಖವನ್ನು ತೋರಿಸುತ್ತಾನೆ. ಯಾವುದೇ ಒಂದು ಅಡುಗೆ ಪರಿಪೂರ್ಣವಾಗಬೇಕಾದರೆ ಆರು ರಸಗಳು ಮುಖ್ಯವಾಗುತ್ತವೆ. ಅದನ್ನು ಷಡ್ರಸ ಭೋಜನ ಎನ್ನುತ್ತೇವೆ. ಉಪ್ಪು, ಹುಳಿ, ಖಾರ, ಸಿಹಿ, ಒಗರು ಹಾಗೂ ಕಹಿ ಅಡುಗೆಯಲ್ಲಿ ಮುಖ್ಯವಾಗುತ್ತವೆ. ಈ ಆರು ರುಚಿಗಳನ್ನು ಆರು ಪಾತ್ರಗಳ ಮೂಲಕ ಬಿಂಬಿಸುತ್ತಾ ಹೋಗಿದ್ದೇವೆ. ಉಪ್ಪು ಹೇಗೆ ತನ್ನ ತನ ಉಳಿಸಿಕೊಂಡು ಎಲ್ಲದರಲ್ಲೂ ಬೆರೆಯುತ್ತೆ ಎಂಬುದು ಒಂದಾದರೆ, ಇನ್ನು ಕೆಲವು ರುಚಿಗಳು ತನ್ನ ತನ ಕಳೆದುಕೊಂಡರೂ ಅಡುಗೆಯನ್ನು ರುಚಿಯಾಗಿಸುತ್ತವೆ ಎಂಬುದನ್ನು ಪಾತ್ರಗಳ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ’ ಎನ್ನುವುದು ಕಾರ್ತಿಕ್ ಮಾತು. ಈ ಚಿತ್ರದ ಕಥೆ ಮೂರು ಸ್ತರದಲ್ಲಿ ಸಾಗುತ್ತದೆಯಂತೆ. ಆರರಿಂದ 70ರವರೆಗಿನ ಮೂರು ಸ್ತರಗಳು ಇಲ್ಲಿ ಬರಲಿವೆ. ಚಿತ್ರದಲ್ಲಿ ಬೇರೆ ಬೇರೆ ಭಾಗದ ಕನ್ನಡವನ್ನು ಬಳಸುವ ಜೊತೆಗೆ ಆ ಭಾಗದ ಜನಪ್ರಿಯ ಖಾದ್ಯಗಳನ್ನು ಕೂಡಾ ತೋರಿಸಲಾಗಿದೆಯಂತೆ. ಇನ್ನು, ಚಿತ್ರದಲ್ಲಿ ಕೆಜಿಎಫ್ನಲ್ಲಿರುವ 150 ವರ್ಷ ಹಳೆಯದಾದ ಬೇಕರಿಯೊಂದನ್ನು ಕೂಡಾ ಬಳಸಲಾಗಿದೆಯಂತೆ.
“ಕಿರಿಕ್ ಪಾರ್ಟಿ’ಯಲ್ಲಿ ನಟಿಸಿದ್ದ ಅರವಿಂದ್ ಅಯ್ಯರ್ ಈ ಚಿತ್ರದ ನಾಯಕ. ಇಡೀ ಸಿನಿಮಾ ಅವರಿಗೆ ತುಂಬಾ ಸವಾಲಾಗಿತ್ತಂತೆ. ಅದರಲ್ಲೂ ಅಂಡರ್‌ವಾಟರ್ ಶೂಟಿಂಗ್ ಸ್ವಲ್ಪ ಹೆಚ್ಚೆ ಸವಾಲಂತೆ. ಮೊದಲೇ ಅಡುಗೆ ಗೊತ್ತಿದ್ದರಿಂದ ಕೆಲವು ದೃಶ್ಯಗಳು ಸುಲಭವಾಯಿತಂತೆ. ಉಳಿದಂತೆ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡರು ಅರವಿಂದ್ ಅಯ್ಯರ್. ಚಿತ್ರದಲ್ಲಿ ಆರೋಹಿ ನಾರಾಯಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ನಾಯಕಿಯರು. ಆರೋಹಿಗೆ ಇಲ್ಲಿ ಟಾಮ್‌ಬಾಯ್ ತರಹದ ಪಾತ್ರ ಸಿಕ್ಕಿದೆಯಂತೆ. ಮೊಂಡುತನವಿರುವ ಗಾರ್ಮೆಂಟ್ ಹುಡುಗಿಯಾಗಿ ಕಾಣಿಸಿಕೊಂಡಿರುವ ಅವರಿಗೆ ಚಿತ್ರೀಕರಣ ಮುಗಿದ ನಂತರ ಪಾತ್ರದಿಂದ ಹೊರಬರಲು ತುಂಬಾ ಕಷ್ಟವಾಗುತ್ತಿತಂತೆ.
ಮತ್ತೂಬ್ಬ ನಾಯಕಿ ಪ್ರಿಯಾಂಕಾ ತಿಮ್ಮೇಶ್ ಇಲ್ಲಿ ಸಾರಾ ಎಂಬ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಅವರಿಲ್ಲಿ ಒಗರು ರುಚಿಯನ್ನು ಪ್ರತಿನಿಧಿಸುತ್ತಾರಂತೆ. ಉಳಿದಂತೆ ಅಚ್ಯುತ್ ಕುಮಾರ್ ತಂದೆಯಾಗಿ ನಟಿಸಿದ್ದಾರೆ. “ಎಲ್ಲಾ ಸಿನಿಮಾಗಳಂತೆ ಇಲ್ಲಿ ಮತ್ತೂಂದು ತಂದೆ. ಆದರೆ, ಕೊಂಚ ವಿಭಿನ್ನವಾದ ತಂದೆ’ ಎಂದಷ್ಟೇ ಹೇಳಿದರು ಅಚ್ಯುತ್. ಚಿತ್ರದಲ್ಲಿ ನಟಿಸಿದ ವಿಜಯ್ ಚೆಂಡೂರ್ , ಬೇಬಿ ಆದ್ಯಾ, ಅಮನ್ ಸೇರಿದಂತೆ ಇತರರು ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದ್ದು, ವಿಭಿನ್ನ ಶೈಲಿಯ ಹಾಡುಗಳನ್ನು ಇಲ್ಲಿ ಕೇಳಬಹುದು ಎಂದರು. “ಕಾರ್ತಿಕ್ ಅವರಿಗೆ ಸಂಗೀತದ ಜ್ಞಾನ ಚೆನ್ನಾಗಿದೆ. ಸಂಗೀತದ ವಿವಿಧ ಪ್ರಾಕಾರಗಳನ್ನು ಬಳಸಿಕೊಂಡಿದ್ದಾರೆ’ ಎಂದರು ಚರಣ್‌ರಾಜ್.
ಈ ಚಿತ್ರವನ್ನು ರಕ್ಷಿತ್ ಶೆಟ್ಟಿ, ಪುಷ್ಕರ್ ಹಾಗೂ ಹೇಮಂತ್ ರಾವ್ ಸೇರಿ ನಿರ್ಮಿಸಿದ್ದಾರೆ. “ಈ ತರಹದ ಸಿನಿಮಾ ನಮ್ಮ ಬ್ಯಾನರ್‌ನಿಂದ ಬರುತ್ತಿದೆ ಎಂಬುದು ಒಂದು ಹೆಮ್ಮೆ. ಕಾರ್ತಿಕ್ ಒಳ್ಳೆಯ ಕಥೆಯೊಂದಿಗೆ ಈ ಸಿನಿಮಾ ಮಾಡಿದ್ದಾರೆ. ಮೊನ್ನೆಯಷ್ಟೇ ಕೆಲವು ದೃಶ್ಯಗಳನ್ನು ನೋಡಿದೆ. ತುಂಬಾ ಚೆನ್ನಾಗಿ ಬಂದಿದೆ’ ಎಂದರು. ಪುಷ್ಕರ್ ಕೂಡಾ ಈ ಸಿನಿಮಾ ಆರಂಭವಾದ ಬಗ್ಗೆ ಹೇಳಿಕೊಂಡರು. “ಈ ಸಿನಿಮಾ ಆರಂಭವಾಗಲು ಸಿಂಪಲ್ ಸುನಿ ಕಾರಣ. ಈ ತರಹದ ಒಂದು ಸಿನಿಮಾ ಮಾಡಿದರೆ ಹೇಗೆ ಎಂದು ಹೇಳಿದ್ದು ಅವರು. ಆ ನಂತರ ಸುನಿ ಬೇರೆ ಪ್ರಾಜೆಕ್ಟ್‌ನಲ್ಲಿ ಬಿಝಿಯಾದರು. ನಂತರ ಕಾರ್ತಿಕ್ ಅಂಡ್ ಟೀಂ ಕಥೆ ಸಿದ್ಧಪಡಿಸಿ ಈಗ ಸಿನಿಮಾ ಮುಗಿಸಿದ್ದಾರೆ’ ಎಂದು ವಿವರ ಕೊಟ್ಟರು. ಹೇಮಂತ್, ಛಾಯಾಗ್ರಾಹಕ ರವೀಂದ್ರನಾಥ್ ತಮ್ಮ ಅನುಭವ ಹಂಚಿಕೊಂಡರು. ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆಕಾಣಲಿದೆ.
ಸುಮಾರು 70 ದಿನಗಳ ಕಾಲ ಬೆಂಗಳೂರು, ಕೊಡಗು, ಕೊಡಚಾದ್ರಿ, ಕೆಜಿಎಫ್ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ.
ರವಿಪ್ರಕಾಶ್ ರೈ